ಸಾಧ್ವಿಯ ಮನೆಯಲ್ಲಿ ಚಿನ್ನದ ಬಿಸ್ಕತ್ ಗಳು , ಕೋಟಿ ನಗದು, ಮದ್ಯದ ಬಾಟಲಿಗಳು !
ಬನಾಸಕಾಂತಾ, ಜ. 27: ಕಳೆದ ವರ್ಷದ ನವಂಬರ್‌ನಲ್ಲಿ ತಾನು ಖರೀದಿಸಿದ್ದ ಚಿನ್ನದ ಬಿಸ್ಕಿಟ್‌ಗಳ ಬಾಬ್ತು ಐದು ಕೋ.ರೂ.ಗಳನ್ನು ಪಾವತಿಸದ ಆರೋಪದಲ್ಲಿ ಗುಜರಾತಿನ ಸಾಧ್ವಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಬನಾಸಕಾಂತಾ ಜಿಲ್ಲೆಯಲ್ಲಿ ದೇವಸ್ಥಾನವೊಂದನ್ನು ನಡೆಸುತ್ತಿರುವ ಟ್ರಸ್ಟ್‌ನ ಮುಖ್ಯಸ್ಥೆಯಾಗಿರುವ ಸಾಧ್ವಿ ಜೈ ಶ್ರೀ ಗಿರಿ ತನ್ನಿಂದ ಐದು ಕೋ.ರೂ.ವೌಲ್ಯದ ಚಿನ್ನವನ್ನು ಖರೀದಿಸಿದ್ದು, ಹಲವು ಬಾರಿ ನೆನಪಿಸಿದ್ದರೂ ಹಣವನ್ನು ಪಾವತಿಸಿಲ್ಲ ಎಂದು ಸ್ಥಳೀಯ ಚಿನ್ನಾಭರಣ ವ್ಯಾಪಾರಿಯೋರ್ವ ಪೊಲೀಸರಿಗೆ ದೂರು ನೀಡಿದ್ದ.
ಗುರುವಾರ ಸಾಧ್ವಿಯ ನಿವಾಸದ ಮೇಲೆ ದಾಳಿ ನಡೆಸಿದ ಪೊಲೀಸರು ಸುಮಾರು 80 ಲ.ರೂ.ವೌಲ್ಯದ 24 ಚಿನ್ನದ ಗಟ್ಟಿಗಳು ಮತ್ತು ಹೊಸ 2,000 ರೂ.ಗಳ ನೋಟುಗಳಲ್ಲಿದ್ದ 1.20 ಕೋ.ರೂ.ನಗದು ಹಣವನ್ನು ಪತ್ತೆ ಹಚ್ಚಿದ್ದಾರೆ. ಮದ್ಯದ ಬಾಟ್ಲಿಗಳೂ ಈ ಸಾಧ್ವಿಯ ಮನೆಯಲ್ಲಿದ್ದವು. ಗುಜರಾತ್‌ನಲ್ಲಿ ಪಾನನಿಷೇಧ ಜಾರಿಯಲ್ಲಿದೆ.
ಮೂವರ ವಿರುದ್ಧ ನಾವು ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ. ಈವರೆಗೆ ಮುಖ್ಯ ಅರೋಪಿ ಸಾಧ್ವಿಯನ್ನು ಮಾತ್ರ ಬಂಧಿಸಲು ಸಾಧ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ವರ್ಷದ ಡಿಸೆಂಬರ್‌ನಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಸಾಧ್ವಿ ಜೈ ಶ್ರೀ ಗಿರಿ ಜಾನಪದ ಗಾಯಕಿಯರ ಮೇಲೆ ಒಂದು ಕೋ.ರೂ.ಗಳ ನೋಟುಗಳನ್ನೆ ಸೆಯುತ್ತಿದ್ದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ನ.8ರಂದು ಪ್ರಧಾನಿ ನರೇಂದ್ರ ಮೋದಿಯವರು ನೋಟು ರದ್ದತಿಯನ್ನು ಪ್ರಕಟಿಸಿದ ಬಳಿಕ ಆಗಿನ್ನೂ ನಗದು ಹಣಕ್ಕೆ ತೀವ್ರವಾಗಿ ಪರದಾಡುವಂತಾಗಿತ್ತು. ಅಂತಹ ಸ್ಥಿತಿಯಲ್ಲಿ ಸಾಧ್ವಿ ಈ ಗಾಯಕಿಯರ ಮೇಲೆ ಅಷ್ಟೂ ಹಣವನ್ನು ಹೊಸ 2,000 ರೂ.ನೋಟುಗಳ ರೂಪದಲ್ಲಿಯೇ ಎಸೆದಿದ್ದು ವಿವಾದವನ್ನು ಸೃಷ್ಟಿಸಿತ್ತು.