ಕಾಸರಗೋಡು ನಗರಸಭೆಯಲ್ಲಿ ಗದ್ದಲ : ಗಾಯಗೊಂಡ ಅಧ್ಯಕ್ಷೆ ಆಸ್ಪತ್ರೆಗೆ ದಾಖಲು
ಕಾಸರಗೋಡು , ಜ.27 : ಕಾಸರಗೋಡು ನಗರಸಭೆಯಲ್ಲಿ ಶುಕ್ರವಾರ ಸಂಜೆ ನಡೆದ ಸಾಮಾನ್ಯ ಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ವಾಗ್ವಾದ , ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದು , ನಗರಸಭಾ ಅಧ್ಯಕ್ಷೆ ಬೀಫಾತಿಮ್ಮ ಇಬ್ರಾಹಿಂ ಹಾಗೂ ಸದಸ್ಯ ಹಮೀದ್ ಬೆದಿರ ಗಾಯಗೊಂಡಿದ್ದಾರೆ.
ಈ ನಡುವೆ ನಾಲ್ವರು ಬಿಜೆಪಿ ಸದಸ್ಯರನ್ನು ಅಮಾನತುಗೊಳಿಸಿ ಅಧ್ಯಕ್ಷರು ಆದೇಶ ನೀಡಿದ್ದಾರೆ.
ವಸತಿ ನಿರ್ಮಾಣ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು , ಆರೋಪಕ್ಕೆ ಸಂಬಂಧಪಟ್ಟಂತೆ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಮೈಮೂನ್ನಿಸಾರನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿ ಪ್ರತಿಪಕ್ಷ ಸದಸ್ಯರು ಕಲಾಪಕ್ಕೆ ಅಡ್ಡಿಪಡಿಸಿದರು.
ಈ ನಡುವೆ ಬಿಜೆಪಿ ಸದಸ್ಯರು ಅಧ್ಯಕ್ಷೆಯ ಪೀಠಕ್ಕೆ ನುಗ್ಗಿ ಮೈಕ್ ಗಳನ್ನು ಕಿತ್ತೆಸೆದು, ಪುಸ್ತಕಗಳನ್ನು ಹರಿದು ಬಿಸಾಡಿದರು. ಈ ನಡುವೆ ಅಧ್ಯಕ್ಷೆ ಮತ್ತು ಸದಸ್ಯರೋರ್ವರು ಗಾಯಗೊಂಡರು.
ಗಾಯಗೊಂಡ ಇಬ್ಬರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.
ಡಿಸೆ೦ಬರ್ ಕೊನೆ ವಾರದಿಂದ ಇದುವರೆಗೆ ನಾಲ್ಕು ಬಾರಿ ಸಾಮಾನ್ಯ ಸಭೆ ನಡೆದರೂ ಪ್ರತಿಪಕ್ಷ ಗದ್ದಲದಿಂದ ರದ್ದುಗೊಂಡಿತ್ತು. ಶುಕ್ರವಾರ ಮತ್ತೆ ಸಭೆ ನಡೆದರೂ ಗದ್ದಲದಿಂದ ಸ್ಥಗಿತಗೊಂಡಿತ್ತು
ನಾಲ್ವರು ಬಿಜೆಪಿ ಸದಸ್ಯರ ಅಮಾನತು
ಗದ್ದಲ ಮತ್ತು ಹೊಯ್ ಕೈಗೆ ಸಂಬಂಧಪಟ್ಟಂತೆ ನಾಲ್ವರು ಬಿಜೆಪಿ ಸದಸ್ಯರನ್ನು ಮೂರು ದಿನಗಳ ಕಾಲ ನಗರಸಭಾ ಅಧ್ಯಕ್ಷೆ ಬೀಫಾತಿಮ್ಮ ಇಬ್ರಾಹಿಂ ಅಮಾನತುಗೊಳಿಸಿದ್ದಾರೆ. ಬಿಜೆಪಿ ಸದಸ್ಯರಾದ ಸುಜಿತ್ , ಜಾನಕಿ , ಉಮಾ ಮತ್ತು ಶ್ರೀಲತಾರವರನ್ನು ಅಮಾನತುಗೊಳಿಸಲಾಗಿದೆ.