×
Ad

ಅರಣ್ಯ ಇಲಾಖೆ ಬೋನಿನಲ್ಲಿ ಸೆರೆಯಾದ ಹೆಣ್ಣು ಚಿರತೆ

Update: 2017-01-27 19:46 IST

ಹಿರಿಯಡ್ಕ, ಜ.27: ಪೆರ್ಣಂಕಿಲ ಗ್ರಾಮದ ಗುಂಡುಪಾದೆ ಎಂಬಲ್ಲಿರುವ ಮೀಸಲು ಅರಣ್ಯ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ತಿರುಗಾಡುತ್ತಿದ್ದ ಚಿರತೆಯೊಂದು ಜ.26ರಂದು ರಾತ್ರಿ ವೇಳೆ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಸೆರೆಯಾಗಿದೆ.
 
ಈ ಪರಿಸರದಲ್ಲಿ ಕೆಲವು ತಿಂಗಳುಗಳಿಂದ ಎರಡು ಚಿರತೆಗಳು ತಿರುಗಾಡು ತ್ತಿರುವ ಮತ್ತು ಹಲವು ಮನೆಗಳ ನಾಯಿಗಳನ್ನು ತಿಂದಿರುವ ಬಗ್ಗೆ ಸ್ಥಳೀಯರು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಈ ಚಿರತೆಗಳನ್ನು ಸೆರೆಹಿಡಿಯುವಂತೆ ಸ್ಥಳೀಯರು ಅರಣ್ಯ ಇಲಾಖೆಗೆ ದೂರು ನೀಡಿದ್ದರು.

ಅದರಂತೆ ಅರಣ್ಯ ಇಲಾಖೆ ಉಡುಪಿ ವಲಯದ ಸಿಬ್ಬಂದಿಗಳು ಜ.25 ರಂದು ಗುಂಡುಪಾದೆಯ ಕಾಡಿನ ಮಧ್ಯ ಭಾಗದಲ್ಲಿ ಬೋನಿನೊಳಗೆ ನಾಯಿ ಯೊಂದನ್ನು ಕೂಡಿ ಹಾಕಿ ಚಿರತೆಯ ಸೆರೆಗೆ ಬಲೆ ಬೀಸಿದ್ದರು. ಜ.26ರಂದು ರಾತ್ರಿ ವೇಳೆ ನಾಯಿಯ ಬೇಟೆಗಾಗಿ ಬೋನಿನೊಳಗೆ ನುಗ್ಗಿದ ಚಿರತೆ ಅದರೊಳಗೆ ಬಂಧಿಯಾಯಿತು. ಕಾಡಿನ ಮಧ್ಯದಲ್ಲಿ ಬೋನು ಇರಿಸಿದ ಕಾರಣ ಚಿರತೆ ಸೆರೆಯಾಗಿರುವ ವಿಚಾರ ಸ್ಥಳೀಯರಿಗೆ ಇಂದು ಬೆಳಗ್ಗೆ ತಿಳಿಯಿತು.

ಗ್ರಾಮಸ್ಥರು ತಕ್ಷಣ ಈ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳೀಯರ ಸಹಕಾರದೊಂದಿಗೆ ಬೋನು ಸಹಿತ ಚಿರತೆಯನ್ನು ಕೊಂಡೊಯ್ದರು. ಆರೋಗ್ಯಕರವಾಗಿದ್ದ ಸುಮಾರು 3-4 ವರ್ಷ ಪ್ರಾಯದ ಈ ಹೆಣ್ಣು ಚಿರತೆಯನ್ನು ಬಳಿಕ ರಕ್ಷಿತಾ ಅರಣ್ಯದಲ್ಲಿ ಬಿಡಲಾಯಿತು.

ಕುಂದಾಪುರ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಅಮರನಾಥ್ ನಿರ್ದೇಶನದಲ್ಲಿ ಉಡುಪಿ ಅರಣ್ಯ ವಲಯ ಅಧಿಕಾರಿ ಕ್ಲಿಫರ್ಡ್ ಲೋಬೊ ಮಾರ್ಗದರ್ಶನದಲ್ಲಿ ಹಿರಿಯಡಕ ಉಪವಲಯ ಅರಣ್ಯಾಧಿಕಾರಿ ದಯಾ ನಂದ್, ಅರಣ್ಯ ರಕ್ಷಕ ಗಣಪತಿ ನಾಯಕ್ ನೇತೃತ್ವದ ತಂಡ ಈ ಕಾರ್ಯಾ ಚರಣೆ ನಡೆಸಿದೆ.

ಕಳೆದ ವರ್ಷ ಜು.9ರಂದು ಪೆರ್ಣಂಕಿಲ ಮರಾಠಿ ಸಮಾಜ ಮಂದಿರದ ಬಳಿ 5ವರ್ಷ ಪ್ರಾಯದ ಹೆಣ್ಣು ಚಿರತೆಯನ್ನು ಇದೇ ರೀತಿ ಬೋನು ಇರಿಸಿ ಸೆರೆಹಿಡಿಯಲಾಗಿತ್ತು. ಅದೇ ತಿಂಗಳು 27ರಂದು ರಾತ್ರಿ ಅಲ್ಲೇ ಸಮೀಪದ ಆತ್ರಾಡಿ ಮದಗ ಚೆನ್ನಬೆಟ್ಟು ಎಂಬಲ್ಲಿ 3-4ವರ್ಷ ಪ್ರಾಯದ ಹೆಣ್ಣು ಚಿರತೆ ಯನ್ನು ಬೋನಿನ ಮೂಲಕ ಸೆರೆಹಿಡಿಯಲಾಗಿತ್ತು.

ಇದೀಗ ಪೆರ್ಣಂಕಿಲ ಪರಿಸರದಲ್ಲಿ ಇನ್ನೊಂದು ಚಿರತೆ ಸುಳಿದಾಡುತ್ತಿ ರುವ ಬಗ್ಗೆ ದೂರುಗಳು ಬಂದಿದ್ದು, ಸ್ಥಳೀಯರ ಕಣ್ಣಿಗೆ ಬಿದ್ದರೆ ಇದೇ ಬೋನನ್ನು ಮತ್ತೆ ಅದೇ ಪರಿಸರದಲ್ಲಿ ಇಟ್ಟು ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸಲಾಗುವುದು ಎಂದು ಉಡುಪಿ ಅರಣ್ಯ ವಲಯ ಅಧಿಕಾರಿ ಕ್ಲಿಫರ್ಡ್ ಲೋಬೊ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News