ತುಳು ನಾಟಕ ಕಲಾವಿದರ ಒಕ್ಕೂಟದಿಂದ ಬೆಂಬಲ
ಮಂಗಳೂರು, ಜ.27: ಕರಾವಳಿಯ ಸಾಂಪ್ರದಾಯಿಕ ಜಾನಪದ ಕ್ರೀಡೆಯಾದ ಕಂಬಳವು ತುಳುನಾಡಿನ ಪಾರಂಪರಿಕ, ಸಾಂಸ್ಕೃತಿಕ ಕ್ರೀಡೆಯಾಗಿದೆ. ಇಂತಹ ಕ್ರೀಡೆಯನ್ನು ಉಳಿಸುವ ನಿಟ್ಟಿನಲ್ಲಿ ತುಳುನಾಡಿನಾದ್ಯಂತ ನಡೆಯುವ ಹೋರಾಟಗಳಿಗೆ ಜಿಲ್ಲಾ ತುಳುನಾಡು ಕಲಾವಿದರ ಬೆಂಬಲವಿದೆ ಎಂದು ಒಕ್ಕೂಟದ ಅಧ್ಯಕ್ಷ ಕಿಶೋರ್ ಶೆಟ್ಟಿ ತಿಳಿಸಿದ್ದಾರೆ.
ಶುಕ್ರವಾರ ಸುದ್ದೀಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಸಂಸ್ಕೃತಿಗೆ ಪೂರಕವಾಗಿ ಕಂಬಳ ಕ್ರೀಡೆ ನಡೆಯುತ್ತಿದ್ದು, ಪ್ರಾಣಿ ಹಿಂಸೆಯ ನೆಪದಲ್ಲಿ ಇಂತಹ ಕ್ರೀಡೆಗೆ ಕಡಿವಾಣ ಹಾಕಿರುವುದನ್ನು ಒಕ್ಕೂಟ ಖಂಡಿಸುತ್ತದೆ ಎಂದು ತಿಳಿಸಿದರು.
ಜಲ್ಲಿಕಟ್ಟು ಕ್ರೀಡೆಯಲ್ಲಿ ಮನುಷ್ಯರ ಪ್ರಾಣಕ್ಕೆ ಅಪಾಯವಿದ್ದರೂ ತಮಿಳುನಾಡು ಸರಕಾರ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಜಲ್ಲಿಕಟ್ಟು ಕ್ರೀಡೆಗೆ ಮತ್ತೆ ಚಾಲನೆ ನೀಡಿದೆ. ರಾಜ್ಯ ಸರಕಾರವೂ ಕಂಬಳ ನಡೆಸಲು ಅನುಮತಿ ನೀಡುವಲ್ಲಿ ವಿಳಂಬ ನೀತಿಯನ್ನು ಅನುಸರಿಸದೇ ಕೂಡಲೇ ಸುಗೀವಾಜ್ಞೆ ಹೊರಡಿಸುವ ಮೂಲಕ ಕಂಬಳ ಕ್ರೀಡೆಗೆ ಮತ್ತೆ ಚಾಲನೆ ನೀಡಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಕುಮಾರ್ ಮಲ್ಲೂರು, ಕೋಶಾಧಿಕಾರಿ ಮೋಹನ್ ಕೊಪ್ಪಳ, ಕಾರ್ಯಕಾರಿ ಸಮಿತಿ ಸದಸ್ಯ ತಾರನಾಥ ಶೆಟ್ಟಿ ಬೋಳಾರ ಉಪಸ್ಥಿತರಿದ್ದರು.