×
Ad

ಇತಿಹಾಸ ತಿರುಚಿದ ಆರೋಪ : ಸಿನೆಮಾ ನಿರ್ದೇಶಕ ಭನ್ಸಾಲಿಗೆ ಸೆಟ್‌ನಲ್ಲಿ ಕಪಾಳಮೋಕ್ಷ

Update: 2017-01-27 20:55 IST

ಜೈಪುರ, ಜ.27: ಹಿಂದಿ ಸಿನೆಮಾ ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಅವರ ಮೇಲೆ ‘ಶ್ರೀ ರಜಪೂತ್ ಕರ್ಣಿ ಸೇನಾ’ ಸಂಘಟನೆಯ ಸದಸ್ಯರು ಹಲ್ಲೆ ನಡೆಸಿದ ಘಟನೆ ನಡೆದಿದೆ.

ಜೈಪುರದಲ್ಲಿ ಭನ್ಸಾಲಿ ನಿರ್ದೇಶನದ ‘ಪದ್ಮಾವತಿ’ ಸಿನೆಮಾದ ಶೂಟಿಂಗ್ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದೆ. ತಮ್ಮ ಸಿನೆಮಾದಲ್ಲಿ ಭನ್ಸಾಲಿ ಇತಿಹಾಸವನ್ನು ತಿರುಚಿದ್ದಾರೆ ಎಂದು ಆರೋಪಿಸಿ ಈ ಹಲ್ಲೆ ನಡೆಸಲಾಗಿದೆ. ಕರ್ಣಿ ಸೇನೆಯ ಸದಸ್ಯರ ತಂಡವೊಂದು ಸೆಟ್‌ಗೆ ನುಗ್ಗಿ ದಾಂಧಲೆ ನಡೆಸಿದ್ದು ಭನ್ಸಾಲಿ ಅವರನ್ನು ಎಳೆದಾಡಿತು ಮತ್ತು ಅವರ ಬಟ್ಟೆ ಹರಿದುಹಾಕಿತು. ಅಲ್ಲದೆ ಅವರಿಗೆ ಕಪಾಳಮೋಕ್ಷ ಕೂಡಾ ಮಾಡಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಭನ್ಸಾಲಿ ಅವರು ‘ಪದ್ಮಾವತಿ’ ಸಿನೆಮಾದಲ್ಲಿ ಇತಿಹಾಸವನ್ನು ತಿರುಚಿರುವ ಬಗ್ಗೆ ಬೇಸರವಿದೆ. ಈ ಸಿನೆಮಾದಲ್ಲಿ ರಾಣಿ ಪದ್ಮಿನಿ ಮತ್ತು ಅಲ್ಲಾದ್ದೀನ್ ಖಿಲ್ಜಿ ಜತೆಯಾಗಿರುವ ಸ್ವಪ್ನದ ಸನ್ನಿವೇಶವೊಂದಿದ್ದು ಇದು ಇತಿಹಾಸದ ವಿಷಯಕ್ಕೆ ವಿರುದ್ಧವಾಗಿದೆ ಎನ್ನಲಾಗಿದೆ. ಗಲಭೆಯನ್ನು ನಿಯಂತ್ರಿಸಲು ಸಿನೆಮಾ ತಂಡದ ಭದ್ರತಾ ಪಡೆಯವರು ಗಾಳಿಯಲ್ಲಿ ಗುಂಡು ಹಾರಿಸಿದರು.

ರಣ್‌ವೀರ್ ಸಿಂಗ್, ದೀಪಿಕಾ ಪಡುಕೋಣೆ ಮತ್ತು ಶಾಹಿದ್ ಕಪೂರ್ ಪ್ರಧಾನ ಭೂಮಿಕೆಯಲ್ಲಿರುವ ‘ಪದ್ಮಾವತಿ’ ಸಿನೆಮಾ 1303ರಲ್ಲಿ ಅಲ್ಲಾದ್ದೀನ್ ಖಿಲ್ಜಿ ರಾಜಸ್ತಾನದ ಮೇಲೆ ನಡೆಸಿದ ಆಕ್ರಮಣದ ಕಥೆಯನ್ನು ಹೊಂದಿದೆ. ರಾಜಸ್ತಾನದ ರಾಣಿ ಪದ್ಮಿನಿಯ ಸೌಂದರ್ಯಕ್ಕೆ ಮಾರು ಹೋಗಿದ್ದ ಖಿಲ್ಜಿ ಆಕೆಯನ್ನು ಅಪಹರಿಸುವ ಉದ್ದೇಶದಿಂದ ಈ ಆಕ್ರಮಣ ನಡೆಸಿದ್ದ. ಸಿನೆಮಾದಲ್ಲಿ ರಣವೀರ್ ಸಿಂಗ್ ಅಲ್ಲಾದ್ದೀನ್ ಖಿಲ್ಜಿಯ ಪಾತ್ರದಲ್ಲಿ, ದೀಪಿಕಾ ರಾಣಿ ಪದ್ಮಿನಿಯ ಪಾತ್ರದಲ್ಲಿ ಹಾಗೂ ಶಾಹಿದ್ ಕಪೂರ್ ರಾಣಾ ರವಲ್‌ರತನ್ ಸಿಂಗ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News