ನೇತ್ರಾವತಿ ನದಿ ತಿರುವು ಬಗ್ಗೆ ನಾವು ಚಿಂತನೆ ನಡೆಸಬೇಕಾದ ಅನಿವಾರ್ಯತೆ ಇದೆ : ಡಾ. ಕೆ ಚಿನ್ನಪ್ಪಗೌಡ

Update: 2017-01-27 15:36 GMT

ಉಜಿರೆ , ಜ.27 : ಇಂದು ಕನ್ನಡನಾಡಲ್ಲಿ ಜೀವ ಹತ್ಯೆಯ ಮತ್ತು ಜೀವಸೆಲೆಗಳನ್ನು ನಾಶಮಾಡುವ ಅಪಾಯ ಎದುರಾಗುತ್ತಿದೆ . ಇದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ.  ಡಾ.ಎಂ.ಎಂ ಕಲಬುರ್ಗಿಯವರ ಹತ್ಯೆ ಹಾಗೂ ನೇತ್ರಾವತಿ ನದಿ ತಿರುವು ವಿಚಾರಗಳ ಬಗ್ಗೆ ನಾವು ಚಿಂತನೆ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಡಾ. ಕೆ ಚಿನ್ನಪ್ಪಗೌಡ ಹೇಳಿದರು.

ಉಜಿರೆಯ ಮಂಜಯ್ಯ ಹೆಗ್ಗಡೆ ವೇದಿಕೆಯಲ್ಲಿ ದ. ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರ ಮಾತಿನಲ್ಲಿ ಕನ್ನಡ ನಾಡು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನಾಡು ಚಿಂತಿಸಬೇಕಾದ ವಿಚಾರಗಳ ಬಗ್ಗೆ ತಮ್ಮ ಚಿಂತನೆಗಳನ್ನು ತೆರೆದಿಟ್ಟ ಅವರು , ಕಲಬುರ್ಗಿಯವರ ಹತ್ಯೆ ಅದೇ ರೀತಿ ಇತರೆ ವ್ಯಕ್ತಿಗಳ ಹತ್ಯೆಗಳು ಪ್ರಜಾಪ್ರಭುತ್ವದ ತತ್ವ ಮತ್ತು ವ್ಯವಸ್ಯೆಗೆ ಕಳಂಕ ತರುವಂತಹುದು. ಯಾವುದೇ ಕಾರಣಕ್ಕೆ ನಡೆದಿರಲಿ ಅದನ್ನು ಒಪ್ಪಲು ಸಾಧ್ಯವಿಲ್ಲ ಎಂದರು.

ನೇತ್ರಾವತಿ ನದಿ ತಿರುವು ಯೋಜನೆಯ ಬಗ್ಗೆ ಕರಾವಳಿಯಲ್ಲಿ ಎದ್ದಿರುವ ಆತಂಕ ಭಯದ ಬಗ್ಗೆ ಸರಕಾರಗಳು ಗಮನ ಹರಿಸಬೇಕಾಗಿದೆ. ನೆಲ ಜಲ ಪರಿಸರದ ಕುರಿತಾದ ಹೋರಾಟಗಳು ರಾಜಕೀಯ ಪಕ್ಷಗಳ ಪ್ರತಿಷ್ಠೆಯ ವಿಚಾರಗಳಾಗಿ ಮಾರ್ಪಡಬಾರದು . ಅಲ್ಲಿ ಜನರ ಹಿತ ಮುಖ್ಯವಾಗಬೇಕು ಎಂದು ಅವರು ಸಲಹೆ ನೀಡಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಕೋಮುಗಲಭೆಗಳು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ಜಿಲ್ಲೆಗೆ ಏನಾಗಿದೆ ಎಂದು ಹೊರಗಿನ ಜನ ಪ್ರಶ್ನಿಸುವಂತಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ತಮ್ಮ ಮೂಗಿನ ನೇರಕ್ಕೆ ತಂದುಕೊಳ್ಳುವ ತನಗೆ ಬೇಕಾದಂತೆ ಅದನ್ನು ಸ್ವಾರ್ಥಕ್ಕೆ ಬಳಸುವ ಸಂಘಟನೆಗಳು ಆತ್ಮಸಾಕ್ಷಿಯಾಗಿ ಅವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಿದರು.

ಸಮಾಜವನ್ನು ಒಡೆಯುವ ರಾಜಕೀಯ ಮತಬ್ಯಾಂಕ್‌ಗಳ ಹುನ್ನಾರವನ್ನು ಸಾರಾಸಗಟಾಗಿ ವಿರೋಧಿಸಬೇಕಾಗಿದೆ. ನಮ್ಮ ಸಾಂಸ್ಕೃತಿಕ ಬಹುತ್ವಗಳು ನಮ್ಮ ಶಕ್ತಿ ಎಂದು ತಿಳಿದು ಸಮಾಜವನ್ನು ಸಾಂಸ್ಕೃತಿಕವಾಗಿ ಕಟ್ಟುವುದರೆಡೆಗೆ ರಾಜಕೀಯೇತರ ಸಂಘಟನೆಗಳು ದುಡಿಯಬೇಕಾದ ಅನಿವಾರ್ಯತೆಯಿದೆ ಎಂದರು.

ನಮ್ಮ ಜಾನಪದ ಮಹಾಕಾವ್ಯಗಳ ನಾಯಕರು ಮತ್ತು ನಾಯಕಿಯರು ನಡೆಸುವ ಹೋರಾಟಗಳಲ್ಲಿ ಅವರು ಪ್ರತಿನಿಧಿಸುವ ಸಮುದಾಯಗಳ ಪ್ರತಿಭಟನೆಯ ಚರಿತ್ರೆಯಿದೆ.ಇವರ ಹೋರಾಟಗಳ ಮೂಲಕವಾಗಿ ಆ ಸಮುದಾಯಕ್ಕೆ ನೈತಿಕ ಧೈರ್ಯ ತುಂಬುವ ಕಾರ್ಯ ನಡೆಯುತ್ತದೆ.
ತುಳುನಾಡಿನಲ್ಲಿ ಕನ್ನಡಪರ ಕೂಗಿಗೆ ಬೆಲೆ ಸಿಗುತ್ತಿಲ್ಲ ಎಂಬ ಮಾತು ಹಿಂದಿನದು . ಆದರೆ ತಮ್ಮದೇ ಆದ ಮಾತೃಭಾಷೆಗಳನ್ನು ಹೊಂದಿರುವ ಈ ನಾಡಿನ ಜನರು ಕನ್ನಡವನ್ನು ಓದಿ ಕಲಿತು ಕನ್ನಡ ಸಂಸ್ಕೃತಿಯನ್ನು ಎದೆಯಲ್ಲಿರಿಸಿ ಪ್ರೀತಿಸುತ್ತಾ ಬಂದಿದ್ದಾರೆ ಇದಕ್ಕೆ ಇಲ್ಲಿನ ಸಾಹಿತಿಗಳು ಕನ್ನಡ ಸಾಹಿತ್ಯಕ್ಕೆ ನೀಡಿರುವ ಕೊಡುಗೆಗಳೆ ಉದಾಹರಣೆಯಾಗಿದೆ ಎಂದರು.

ಮಾಧ್ಯಮಗಳು ಉಧ್ಯಮಗಳಾಗದೆ ನಮ್ಮ ಸಾಮಾಜಿಕ ಸಂದರ್ಭದಲ್ಲಿ ಸರಕಾರ ಮತ್ತು ಜನರಲ್ಲಿ ಕರ್ತವ್ಯ ಮತ್ತು ಜವಾಬ್ದಾರಿಯ ಬಗ್ಗೆ ಪ್ರಜ್ಞೆಯನ್ನು ಮೂಡಿಸುವ ಕೆಲಸವನ್ನು ಮಾಡಬೇಕು, ಕೃಷಿ ಹಾಗೂ ಕೃಷಿ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಪ್ರಯತ್ನ ಅಗತ್ಯ ಎಂದರು.

 ಸಮ್ಮೇಳನದ ಉದ್ಘಾಟನೆಯನ್ನು ನೆರವೇರಿಸಿದ ಹಿರಿಯ ಕಾದಂಬರಿಕಾರ ಕೆ.ಟಿ ಗಟ್ಟಿ ಅವರು ಮಾತನಾಡಿ ,  ಮಕ್ಕಲಲ್ಲಿ ಓದುವ ಹವ್ಯಾಸವನ್ನು ಬೆಳೆಸದ ಹೊರತಾಗಿ ಯಾವುದೇ ಭಾಷೆಗಳು ಸಂಸ್ಕೃತಿಗಳು ಉಳಿಯಲು ಬೆಳೆಯಲು ಸಾಧ್ಯವಿಲ್ಲ. ಮಕ್ಕಳನ್ನು ಉಧ್ಯೋಗಕ್ಕಾಗಿ ದ್ರವ್ಯ ಸಂಗ್ರಹಕರನ್ನಾಗಿ ರೂಪಿಸದೆ ಜ್ಞಾನಸಂಪಾದಕರನ್ನಾಗಿ ರೂಪಿಸುವ ಕಾರ್ಯ ಇಂದು ನಡೆಯಬೇಕಾಗಿದೆ ಎಂದರು.

ಇಂದು ಎಲ್ಲವೂ ಮಾರಾಟದ ಸರಕಾಗುತ್ತಿದೆ . ಭಾಷೆ ಸಂಸ್ಕೃತಿಗಳು ಮಾತ್ರವಲ್ಲ ಸಂಬಂಧಗಳೂ ಇದರಿಂದ ಹೊರತಾಗಿಲ್ಲ  . ಭಾಷೆ ಯಾವುದೇ ಆಗಿರಲಿ ಪುಸ್ತಕ ಪ್ರೀತಿ ಮತ್ತು ಓದು ಮುಖ್ಯವಾಗಿರುತ್ತದೆ.  ಕನ್ನಡವನ್ನು ಓದುವ ಅಗತ್ಯವಿಲ್ಲ ಎನ್ನುವವರು ಬೇರೆ ಭಾಷೆಯ ಸಾಹಿತ್ಯವನ್ನು ಓದಲಾರರು. ವಿದ್ಯಾವಂತರೆನಿಸಿಕೊಂಡವರಲ್ಲಿಯೂ ಇಂದು ಪುಸ್ತಕಪ್ರೀತಿ ಮರೆಯಾಗುತ್ತಿದೆ ಎಂದು ನೋವನ್ನು ವ್ಯಕ್ತಪಡಿಸಿದರು.

ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾದ ಡಾ. ಎನ್ ಸುಕುಮಾರಗೌಡ ಮಾತನಾಡಿ,  ಸ್ವಚ್ಚ ಭಾಷೆ ಇರಬೇಕಾದುದು ಸಮ್ಮೇಳನಗಳಲ್ಲಿ ಅಲ್ಲ ಅದು ತರಗತಿಗಳಲ್ಲಿ ಇರಬೇಕಾಗಿದೆ. ಅಲ್ಲಿ ಭಾಷೆ ಸ್ವಚ್ಚವಾದರೆ ಎಲ್ಲೆಡೆ ಭಾಷೆ ಸ್ವಚ್ಚವಾಗಲು ಸಾಧ್ಯವಿದೆ ಎಂದರು.

ನಮ್ಮದೇ ಆದ ಮಾತೃಭಾಷಾ ಕೇಂದ್ರಿತವಾದ ಶಿಕ್ಷಣ ಪದ್ದತಿಯೊಂದನ್ನು ರೂಪಿಸಿಕೊಳ್ಳಬೇಕಾದುದು ರಾಜ್ಯದ ಅಗತ್ಯವಾಗಿದೆ ಇನ್ನದರೂ ಈ ಬಗ್ಗೆ ಪ್ರಯತ್ನಗಳು ನಡೆಯಲಿ ಎಂದರು.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ ರಮಾನಾಧ ರೈ ಅವರು ವಹಿಸಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ಬೆಳ್ತಂಗಡಿ ಶಾಸಕ ಕೆ ವಸಂತ ಬಂಗೇರ ನೆರವೇರಿಸಿ ಶುಭಹಾರೈಸಿದರು.

ಕನ್ನಡ ಸಾಹಿತ್ಯಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಪುಸ್ತಕಗಳ ಲೋಕಾರ್ಪಣೆ ಮಾಡಿದರು.

ಕನ್ಯಾಡಿಯ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಆಶೀರ್ವಚನ ನೀಡಿದರು.

ಜಿಲ್ಲಾ ಸಾಹಿತ್ಯಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಆಶಯಭಾಷಣ ಮಾಡಿದರು.

ವಿಜಯರಾಘವ ಪಡುವಟ್ನಾಯ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರೊ ಎಸ್ ಪ್ರಭಾಕರ ವಿದ್ವತ್ ಸನ್ಮಾನ ನೆರವೇರಿಸಿದರು.

ವೇದಿಕೆಯಲ್ಲಿ ತಾ.ಪಂ ಅಧ್ಯಕ್ಷೆ ದಿವ್ಯಜ್ಯೋತಿ, ಸುರೇಂದ್ರ ಅಡಿಗ ನೀಲಾವರ, ಶ್ರೀಧರ ಜಿ ಭಿಡೆ, ಫಾ. ಜೋಸೆಫ್ ಮಸ್ಕರೇನ್ಹಸ್, ಮೋಹನ್ ರಾವ್, ಅಬುಸಫಿಯಾನ್ ಇಬ್ರಾಹಿಂ ಮದನಿ, ದೇವಿಪ್ರಸಾದ್, ಶಶಿದರ್ ಕಲ್ಮಂಜ, ಮತ್ತಿತರರು ಉಪಸ್ಥಿತರಿದ್ದರು.

ಡಾ. ಬಿ ಯಶೋವರ್ಮ ಸ್ವಾಗತಿಸಿದರು. ಪ್ರತಾಪಸಿಂಹ ನಾಯಕ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News