×
Ad

ಮೂಡುಬಿದಿರೆಯಲ್ಲಿ ಮೊಳಗಿದ ಕಂಬಳ ಪರ ಹೋರಾಟ ಕಹಳೆ

Update: 2017-01-28 11:36 IST

ಮೂಡುಬಿದಿರೆ,ಜ.28 : ತುಳುನಾಡಿನ ವೀರಪುರುಷರ ನೆನಪಿನಲ್ಲಿ ನಡೆಯುವ ಸಾಂಪ್ರದಾಯಿಕ ಜಾನಪದೀಯ ಕ್ರೀಡೆ ಕಂಬಳವನ್ನು ಯಾವುದೇ ಬೆಲೆ ತೆತ್ತಾದರೂ ಉಳಿಸಿಕೊಳ್ಳಲು ಬದ್ಧರಿದ್ದೇವೆ. ಮುಂದಿನ ತಿಂಗಳಿಂದಲೇ ಕಂಬಳವನ್ನು ಮತ್ತೆ ಹಳೆಯ ವೈಭವದೊಂದಿಗೆ ನಡೆಸಲಿದ್ದೇವೆ. ಇದಕ್ಕಾಗಿ ಸಿಎಂ ಸಿದ್ದರಾಮಯ್ಯರ ಜೊತೆಗೆ ಚರ್ಚಿಸಿದ್ದು, ರಾಜ್ಯ ಸರಕಾರದಿಂದ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಿದ್ದಾರೆೆ ಎಂದು ಶಾಸಕ, ಮೂಡುಬಿದಿರೆ ಕಂಬಳ ಸಮಿತಿಯ ಅಧ್ಯಕ್ಷ ಕೆ. ಅಭಯಚಂದ್ರ ಹೇಳಿದ್ದಾರೆ.

ಅವರು ಮೂಡುಬಿದಿರೆಯ ಸ್ವರಾಜ್ಯ ಮೈದಾನದಿಂದ ಒಂಟಿಕಟ್ಟೆಯಲ್ಲಿರುವ ಕಡಲಕೆರೆ ನಿಸರ್ಗಧಾಮದವರೆಗೆ ನಡೆದ ಕಂಬಳ ಬೆಂಬಲಿಸಿ ಬೃಹತ್ ಜಾಥದ ಸಮಾಪನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

 ತುಳುನಾಡಿನ ಸಂಸ್ಕೃತಿ ಹಾಗೂ ವೀರಪರಂಪರೆಯ ಹಿನ್ನೆಲೆಯಿಂದ ಕೂಡಿದ ಕಂಬಳ ತಲೆಮಾರುಗಳಿಂದ ಇಲ್ಲಿಯವರೆಗೆ ತಪ್ಪದೇ ನಡೆದುಕೊಂಡು ಬಂದಿದೆ. ಈ ಕ್ರೀಡೆಗೆ ಎದುರಾಗಿರುವ ಸಂಕಷ್ಟವನ್ನು ತೊಡೆದುಹಾಕುವಲ್ಲಿ ಅವಿಭಜಿತ ಜಿಲ್ಲೆಯ ಜನತೆ ಒಂದಾಗಿದ್ದೇವೆ. ಜಾತಿ ಮತ ಹಾಗೂ ಪಕ್ಷಬೇಧ ಮರೆತು ಕಂಬಳವನ್ನು ಉಳಿಸುವಲ್ಲಿ ಸಂಪೂರ್ಣವಾಗಿ ನಮ್ಮನ್ನು ನಾವು ತೊಡಗಿಸಿಕೊಳ್ಳಲಿದ್ದೇವೆ.ಎಂದರು.

  ಕೇಂದ್ರ ಸರಕಾರದ ಕಾನೂನು ಸಚಿವರಿಗೆ, ಪ್ರಧಾನಿಯವರಿಗೂ ಕಂಬಳವನ್ನು ಉಳಿಸಿಕೊಡಬೇಕೆಂದು ಆಗ್ರಹಿಸಿದ್ದೇವೆ. ಕೋರ್ಟ್ ಆದೇಶಕ್ಕೆ ತಲೆಬಾಗಿ ಇಂದು ನಡೆಯಬೇಕಿದ್ದ ಕಂಬಳವನ್ನು ನಡೆಸದೇ ಕಾನೂನಿಗೆ ಗೌರವ ನೀಡಿದ್ದೇವೆ. ಕೋಟಿ ಚೆನ್ನಯ ಕಂಬಳ ಪ್ರಾಂಗಣಕ್ಕೆ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ರಮಾನಾಥ ರೈಯವರು ಸಾಕಷ್ಟು ಅನುದಾನ, ಸರಕಾರದಿಂದ ಸಿಗುವ ಸವಲತ್ತುಗಳನ್ನು ಒದಗಿಸಿಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಕಂಬಳಕ್ಕೆ ನೀಡಿರುವ ಪ್ರಾಶಸ್ತ್ಯವನ್ನು ಅಧಿಕಗೊಳಿಸಲಾಗುವುದುಎಂದರು.

 ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಗುಣಪಾಲ ಕಡಂಬ, ದೇವನೂರು ಮಹದೇವರವರು ಕಂಬಳವನ್ನು ಕೋಣಗಳ ಜೊತೆಗೆ ಮನುಷ್ಯರನ್ನೂ ಓಡಿಸುವ ಶೋಷಣೆಯ ಕ್ರೀಡೆ ಎಂದು ಕರೆದಿದ್ದಾರೆ. ಆದರೆ ಕಂಬಳದಲ್ಲಿ ಶೋಷಣೆ ಎಲ್ಲಿದೆ ಎಂಬುದನ್ನು ಅವರಿಲ್ಲಿ ಬಂದು ಅರಿಯಬೇಕು.ಎಂದರು.

 ದುರಂತ ಎಂದರೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿಯವರು ಕಂಬಳ ಒಂದು ಸಾಂಪ್ರದಾಯಿಕ ಕ್ರೀಡೆಯಲ್ಲ, ಅದೊಂದು ಜೂಜು. ಅದನ್ನು ನಡೆಸುವ ಜನರಿಗೆ ಮಾನವೀಯತೆ ಮತ್ತು ಮಾನ ಮರ್ಯಾದೆ ಇಲ್ಲ ಎಂದಿದ್ದಾರೆ. ಬೆಂಗಳೂರಿನಲ್ಲಿ ನಡೆಯಲಿರುವ ಕಂಬಳ ಪರ ಪ್ರತಿಭಟನೆಯಲ್ಲಿ ಅವರನ್ನು ಆಹ್ವಾನಿಸಿ ದೊರೆಸ್ವಾಮಿಯವರಿಗೆ ಕಂಬಳದ ಸಾಂಪ್ರದಾಯಿಕತೆಯ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು. ದೊರೆಸ್ವಾಮಿಯವರನ್ನು ನಾವು ಅತ್ಯಂತ ಗೌರವದಿಂದ ಕಾಣುತ್ತೇವೆ, ಆದರೆ ಅವರು ಬಳಕೆ ಮಾಡಿರುವ ಭಾಷೆ ಸರಿಯಿಲ್ಲ. ನಾವು ದಕ್ಷಿಣ ಕನ್ನಡದವರು, ಸಂಸ್ಕೃತಿ ಹಾಗೂ ಕಾನೂನಿಗೆ ಬೆಲೆ ಕೊಡುವವರುಎಂದು ಗುಣಪಾಲ ಕಡಂಬ ಹೇಳಿದರು. ಆಶೀರ್ವಚನ ನೀಡಿದ ಬಾಳೆಕೋಡಿ ಮಠದ ಶಶಿಕಾಂತ ಮಣಿ ಸ್ವಾಮೀಜಿ ಮಾತನಾಡಿ, ತುಳುನಾಡಿಗರ ಸಾಂಸ್ಕೃತಿಕ ಹಿರಿಮೆ ಹಾಗೂ ಭೂತಾರಾದನೆ, ನಾಗಾರದನೆಯ ಜೊತೆಗೆ ತಳುಕು ಹಾಕಿಕೊಂಡಿರುವ ಕಂಬಳ ನಮ್ಮ ಸಂಪ್ರದಾಯ ಮತ್ತು ಹಕ್ಕು. ಅದನ್ನು ನಾವು ಉಳಿಸಿದಲ್ಲಿ ನಮ್ಮ ನೆಲವನ್ನು ನಾವು ಉಳಿಸಿದಂತೆಎಂದರು.

 ಚಲನಚಿತ್ರ ನಟ ದೇವದಾಸ್ ಕಾಪಿಕಾಡ್ ಮಾತನಾಡಿ, ಕಂಬಳ ನಮ್ಮ ತಲೆಮಾರುಗಳ ಹಿರಿಮೆ. ಅದೊಂದು ದೈವದೇವರುಗಳ ಆರಾಧನೆಯಷ್ಟೇ ಪವಿತ್ರ. ಅದರ ಮೇಲೆ ಪ್ರಾಣಿದಯಾ ಸಂಘಗಳ ಉಪಟಳ ಹೆಚ್ಚಾಗಿದೆ. ನಮ್ಮ ಸಂಸ್ಕೃತಿಯನ್ನು ಉಳಿಸುವುದಕ್ಕಾಗಿ ನಾವು ಒಂದಾಗಿ ಹೋರಾಟ ಮಾಡಬೇಕಿದೆಎಂದರು.

ಇನ್ನೋರ್ವ ನಟ ನವೀನ್ ಡಿ. ಪಡೀಲ್ ಮಾತನಾಡಿ, ಕಂಬಳ ಸರ್ವಧರ್ಮೀಯರು ಆಚರಿಸಿಕೊಂಡು ಬಂದಿರುವ ಕ್ರೀಡೆ. ಅವಿಭಜಿತ ಜಿಲ್ಲೆಯ ಸೌಹಾರ್ಧತೆ ಉಳಿಯುವುದಕ್ಕೆ ಇದು ಕಾರಣವಾಗಿದೆ. ಒಂದು ವೇಳೆ ಕಂಬಳ ಸಂಪೂರ್ಣ ನಿಂತುಹೋದಲ್ಲಿ ಕೋಮುಗಲಭೆಯಾಗುವ ಸಂಭವವಿದೆಎಂದರು. ಮಿಥುನ್ ರೈ ಮಾತನಾಡಿ, ನ್ಯಾಯಾಲಯದ ಆದೇಶವನ್ನು ನಾವು ಪಾಲಿಸುತ್ತೇವೆ. ಆದರೆ ಪ್ರಾಣಿದಯಾ ಸಂಘದವರು ನಮ್ಮ ತಾಳ್ಮೆ ಪರೀಕ್ಷಿಸುತ್ತಿದ್ದಾರೆ. ಒಂದು ವೇಳೆ ಅವರು ಕಂಬಳದ ಮೇಲೆ ಮಾಡುತ್ತಿರುವ ದಾಳಿಯನ್ನು ನಿಲ್ಲಿಸದೇ ಇದ್ದಲ್ಲಿ ತುಳುನಾಡಿನ ಒಳಗೆ ಅವರು ಕಾಲಿಡುವುದು ಸಾಧ್ಯವಿಲ್ಲ. ಅವರ ಎಲ್ಲ ಪ್ರಯತ್ನಗಳನ್ನು ಹತ್ತಿಕ್ಕಲಾಗುವುದುಎಂದರು. ಮಾಜಿ ಸಚಿವ ಅಮರನಾಥ ಶೆಟ್ಟಿ, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಬಾರ್ಕೂರು ಶಾಂತರಾಮ ಶೆಟ್ಟಿ, ಉಪಾಧ್ಯಕ್ಷ ಶ್ರೀಕಾಂತ್ ಭಟ್, ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್ ಜೈನ್, ಬಂಟರ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ, ಚಲನಚಿತ್ರ ನಟರಾದ ಬೋಜರಾಜ ವಾಮಂಜೂರು, ಅರ್ಜುನ್ ಕಾಪಿಕಾಡ್, ಸುರೇಶ್ ಅಂಚನ್, ಜೆಡಿಎಸ್ ಮೂಡುಬಿದಿರೆ ವಿಧಾನಸಭಾ ಅಧ್ಯಕ್ಷ ಅಶ್ವಿನ್ ಜೆ. ಪಿರೇರಾ, ಎಪಿಎಂಸಿ ಸದಸ್ಯ ಚಂದ್ರಹಾಸ ಸನಿಲ್, ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಯೋಗಿಶ್ ಶೆಟ್ಟಿ ಜೆಪ್ಪು, ಮೂಡಾ ಅಧ್ಯಕ್ಷ ಸುರೇಶ್ ಪ್ರಭು, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಕೊರಗಪ್ಪ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News