ಚಿತ್ರನಿರ್ದೇಶಕ ಬನ್ಸಾಲಿ ಮೇಲೆ ಹಲ್ಲೆ: ತನಿಖೆಗೆ ಆದೇಶ
ಹೊಸದಿಲ್ಲಿ, ಜ.28: ಬಾಲಿವುಡ್ ಚಿತ್ರನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಮೇಲೆ ರಾಜಸ್ಥಾನದ ಜುನಾಗಡ ಕೋಟೆಯಲ್ಲಿ ಶುಕ್ರವಾರ ನಡೆದ ಹಲ್ಲೆ ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ರಾಜಸ್ಥಾನದ ಗೃಹ ಸಚಿವ ಜಿ.ಸಿ.ಕಟಾರಿಯಾ ಹೇಳಿದ್ದಾರೆ.
‘‘ವೈಯಕ್ತಿಕವಾಗಿ ಯಾರ ಮೇಲೂ ಹಲ್ಲೆ ನಡೆಸುವುದು ಸರಿಯಲ್ಲ. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಕೈಗೆತ್ತಿಕೊಳ್ಳಲು ಪೊಲೀಸರಿಗೆ ಸೂಚಿಸಲಾಗಿದೆ’’ಎಂದು ಕಟಾರಿಯಾ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಬಾಲಿವುಡ್ ನಟ-ನಟಿಯರಾದ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯಲ್ಲಿರುವ ‘ಪದ್ಮಾವತಿ’ ಸಿನಿಮಾದ ಶೂಟಿಂಗ್‌ನ ಸೆಟ್‌ನಲ್ಲಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ ಬನ್ಸಾಲಿ ಮೇಲೆ ಶುಕ್ರವಾರ ಕಾರ್ಣಿ ಸೇನಾ ಸಂಘಟನೆ ಕಾರ್ಯಕರ್ತರು ಹಲ್ಲೆ ನಡೆಸಿದ್ದರು. ಚಿತ್ರದಲ್ಲಿ ರಾಜಸ್ಥಾನದ ಇತಿಹಾಸವನ್ನು ಹಾಳು ಮಾಡಲಾಗಿದೆ ಎಂದು ಆರೋಪಿಸಿದ್ದ ಸಂಘಟನೆಯ ಕಾರ್ಯಕರ್ತರು ಬನ್ಸಾಲಿಯವರ ಕೆನ್ನೆಗೆ ಬಾರಿಸಿ ತಲೆಗೂದಲು ಹಿಡಿದು ಜಗ್ಗಾಡಿದ್ದರು.
ಭದ್ರತೆಯನ್ನು ಲೆಕ್ಕಿಸದೇ ಸಿನಿಮಾ ಶೂಟಿಂಗ್ ಸ್ಥಳಕ್ಕೆ ನುಗ್ಗಿದ್ದ ನೂರಾರು ಕಾರ್ಯಕರ್ತರು ನಿರ್ದೇಶಕರ ವಿರುದ್ಧ ಘೋಷಣೆ ಕೂಗಿ ಚಿತ್ರೀಕರಣಕ್ಕೆ ಅಡ್ಡಿಪಡಿಸಿದ್ದರು. ನಿರ್ಮಾಪಕರ ಖಾಸಗಿ ರಕ್ಷಣಾ ಸಿಬ್ಬಂದಿ ಪ್ರತಿಭಟನೆಕಾರರನ್ನು ತಡೆಯಲು ಯತ್ನಿಸಿದರು. ಓರ್ವ ಪ್ರತಿಭಟನಾಕಾರ ಭನ್ಸಾಲಿ ಕೂದಲನ್ನು ಜಗ್ಗಿದ್ದಲ್ಲದೆ ಕೆನ್ನೆಗೆ ಬಾರಿಸಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಐವರನ್ನು ಬಂಧಿಸಿದ್ದು, ಸೆಕ್ಷನ್ 151 ಅಡಿ ಪ್ರಕರಣ ದಾಖಲಿಸಿದ್ದಾರೆ.