ಚುನಾವಣೆಗೆ ಮುನ್ನ ಪ್ರಧಾನಿ ಮೋದಿಯವರ ‘ಮನ್ ಕಿ ಬಾತ್ ’ಗೆ ಚು.ಆಯೋಗದ ಒಪ್ಪಿಗೆ

Update: 2017-01-28 09:46 GMT

ಹೊಸದಿಲ್ಲಿ,ಜ.28: ಪಂಜಾಬ್,ಉತ್ತರ ಪ್ರದೇಶ,ಗೋವಾ,ಮಣಿಪುರ ಮತ್ತು ಉತ್ತರಾಖಂಡ್ ವಿಧಾನಸಭಾ ಚುನಾವಣೆಗಳು ಸನ್ನಿಹಿತವಾಗಿದ್ದರೂ ಪ್ರಧಾನಿ ನರೇಂದ್ರ ಮೋದಿಯವರ ಮಾಸಿಕ ರೇಡಿಯೊ ಭಾಷಣ ‘ಮನ್ ಕಿ ಬಾತ್ ’ಗೆ ಚುನಾವಣಾ ಆಯೋಗವು ಹಸಿರು ನಿಶಾನೆಯನ್ನು ತೋರಿಸಿದೆ.

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಪ್ರಧಾನಿಯವರ ರೇಡಿಯೊ ಭಾಷಣದ ಮೇಲೆ ಆಯೋಗವು ನಿಗಾ ಇರಿಸಿದೆ. ಹೀಗಾಗಿ ಮೋದಿಯವರು ತಾನು ಬಳಸಲಿರುವ ಶಬ್ದಗಳ ಬಗ್ಗೆ ಅತ್ಯಂತ ಎಚ್ಚರಿಕೆ ವಹಿಸಬೇಕಾಗಿದೆ. ಅವರು ತನ್ನ ಕಾರ್ಯಕ್ರಮದಲ್ಲಿ ಯಾವುದೇ ರಾಜಕೀಯ ವಿಷಯ ಅಥವಾ ಸರಕಾರದ ಯಾವುದೇ ಉಪಕ್ರಮದ ಕುರಿತು ಮಾತನಾಡುವಂತಿಲ್ಲ.

‘ಮನ್ ಕಿ ಬಾತ್’ ನ 2017ರ ಮೊದಲ ಕಂತು ರವಿವಾರ,ಜ.29ರಂದು ಪೂವಾಹ್ನ 11 ಗಂಟೆಗೆ ಪ್ರಸಾರವಾಗಲಿದೆ ಮತ್ತು ಸಂಪೂರ್ಣವಾಗಿ ವಿದ್ಯಾರ್ಥಿಗಳ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸಲಿದೆ.

ಮುಂಬರುವ ಮಂಡಳಿ ಪರೀಕ್ಷೆಗಳನ್ನು ಗಮನದಲ್ಲಿಟ್ಟಕೊಂಡು 28ನೇ ಕಂತನ್ನು ಯೋಜಿಸಲಾಗಿದೆ.

ಕಳೆದ ವರ್ಷವೂ ತಮಿಳುನಾಡು,ಕೇರಳ ಮತ್ತು ಪಾಂಡಿಚೇರಿ ವಿಧಾನಸಭಾ ಚುನಾವಣೆಗಳಿಗೆ ಮುನ್ನ ಮೋದಿ ಇಂತಹುದೇ ಪರಿಸ್ಥಿತಿಯನ್ನು ಎದುರಿಸಿದ್ದರು. ಆಗಲೂ ನೀತಿ ಸಂಹಿತೆಯನ್ನು ಪಾಲಿಸಬೇಕೆಂಬ ಷರತ್ತಿನೊಂದಿಗೆ ಆಯೋಗವು ಪ್ರಧಾನಿಯವರ ರೇಡಿಯೊ ಭಾಷಣಕ್ಕೆ ಅನುಮತಿ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News