ಚಿತ್ರನಿರ್ದೇಶಕ ಬನ್ಸಾಲಿಗೆ ಹಲ್ಲೆ: ಬಾಲಿವುಡ್ ಖಂಡನೆ
ಮುಂಬೈ, ಜ.28: ಜೈಪುರದಲ್ಲಿ ‘ಪದ್ಮಾವತಿ’ ಚಿತ್ರದ ಶೂಟಿಂಗ್‌ನ ವೇಳೆ ಖ್ಯಾತ ಚಿತ್ರ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಯ ಮೇಲೆ ಸಂಘಟನೆಯೊಂದರ ಕಾರ್ಯಕರ್ತರು ನಡೆಸಿದ ಹಲ್ಲೆಯನ್ನು ಬಾಲಿವುಡ್ ತೀವ್ರವಾಗಿ ಖಂಡಿಸಿದೆ.
ರಾಜಸ್ಥಾನದ ಜುನಾಗಡ ಕೋಟೆಯಲ್ಲಿ ಶುಕ್ರವಾರ ಚಿತ್ರದ ಶೂಟಿಂಗ್ ನಡೆಯುತ್ತಿದ್ದಾಗ ಶೂಟಿಂಗ್ ಸ್ಥಳಕ್ಕೆ ಧಾವಿಸಿದ ರಜಪೂತ್ ಸಮುದಾಯಕ್ಕೆ ಸೇರಿದ ಗುಂಪು ಕರ್ಣ ಸೇನಾ ಶೂಟಿಂಗ್ ಸೆಟ್‌ನ್ನು ಧ್ವಂಸಗೊಳಿಸಿದ್ದಲ್ಲದೆ, ನಿರ್ದೇಶಕ ಬನ್ಸಾಲಿಯ ಮೇಲೆ ಹಲ್ಲೆಯನ್ನು ನಡೆಸಿತ್ತು. ಚಿತ್ರದಲ್ಲಿ ರಜಪೂತ್‌ರನ್ನು ಅವಹೇಳನವಾಗಿ ಚಿತ್ರೀಕರಿಸಲಾಗುತ್ತಿದೆ ಎಂದು ಆರೋಪಿಸಿ ರಜಪೂತ್ ಸಂಘಟನೆ ದಾಳಿ ನಡೆಸಿತ್ತು. ಸೆಲೆಬ್ರಿಟಿಗಳಾದ ಪ್ರಿಯಾಂಕಾ ಚೋಪ್ರಾ, ಕರಣ್ ಜೋಹರ್, ಅನುರಾಗ್ ಕಶ್ಯಪ್, ಅನುಷ್ಕಾ ಶರ್ಮ, ರಿಷಿ ಕಪೂರ್, ಫರ್ಹಾನ್ ಅಖ್ತರ್, ಸುಧೀರ್ ಮಿಶ್ರಾ, ಅಲಿಯಾ ಭಟ್, ಹೃತಿಕ್ ರೋಶನ್, ಸೋನಂಕಪೂರ್ ಅವರು ಸಾಮಾಜಿಕ ಜಾಲ ತಾಣದ ಮೂಲಕ ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ನಡೆದ ಕಹಿಘಟನೆಯಿಂದ ಬೇಸತ್ತಿರುವ ‘ಪದ್ಮಾವತಿ’ ಚಿತ್ರ ತಂಡ ಚಿತ್ರದ ಶೂಟಿಂಗ್‌ನ್ನು ರದ್ದುಪಡಿಸಿ ಮುಂಬೈಗೆ ವಾಪಸಾಗಿದೆ.