ರೈಲ್ವೇ ಕೆಳಸೇತುವೆ ಅವ್ಯವಸ್ಥೆ: ರೈಲ್ವೇ ಅಧಿಕಾರಿಗಳಿಗೆ ಸ್ಥಳೀಯರ ಮುತ್ತಿಗೆ - ಬೃಹತ್ ಪ್ರತಿಭಟನೆ
ರೈಲ್ವೇ ಕೆಳಸೇತುವೆ ಅವ್ಯವಸ್ಥೆ: ರೈಲ್ವೇ ಅಧಿಕಾರಿಗಳಿಗೆ ಸ್ಥಳೀಯರ ಮುತ್ತಿಗೆ
ಮಂಗಳೂರು, ಜ. 28: ನೂತನವಾಗಿ ನಿರ್ಮಾಣವಾಗುತ್ತಿರುವ ರೈಲ್ವೇ ಕೆಳಸೇತುವೆಯಲ್ಲಿ ಅವ್ಯವಸ್ಥೆ ಪ್ರತಿಭಟಿಸಿ ಸ್ಥಳೀಯರು ಪ್ರತಿಭಟಿಸಿದ ಘಟನೆ ಇಂದು ಬೈಕಂಪಾಡಿ ಕೈಗಾರಿಕಾ ಪ್ರದೇಶದ ಅಂಗರಗುಂಡಿಯಲ್ಲಿ ನಡೆದಿದೆ.
ಪಣಂಬೂರು- ಜೋಕಟ್ಟೆ ಡಬ್ಲಿಂಗ್ ಕಾಮಗಾರಿಯಲ್ಲಿ ಅಂಗರಗುಂಡಿಯಲ್ಲಿರುವ ಹಾಲಿ ರೈಲ್ವೇ ಲೆವೆಲ್ ಕ್ರಾಸಿಂಗನ್ನು ಮುಚ್ಚಲಾಗುಗುತ್ತಿದ್ದು, ಇದಕ್ಕೆ ಪರ್ಯಾಯವಾಗಿ ಸಮೀಪದಲ್ಲಿ ಅಂಡರ್ ಪಾಸ್ ನಿರ್ಮಿಸಲಾಗುತ್ತಿದೆ. ಕಳೆದ ಒಂದು ವರ್ಷದಿಂದ ಕಾಮಗಾರಿ ನಡೆಯುತ್ತಿದೆ. ಇದೀಗ ಕಾಮಗಾರಿ ಮಾತ್ರ ಮುಗಿಯುತ್ತಾ ಬಂದಿದ್ದು, ಕೇವಲ ಕಾಂಕ್ರೀಟ್ ರಸ್ತೆ ಮತ್ತು ಬಾಕ್ಸ್ ಮಾತ್ರ ಅಳವಡಿಸಲಾಗಿದೆ. ಅಂಡರ್ ಪಾಸ್‌ನ ಇನ್ನೊಂದು ಬದಿಯಲ್ಲಿ ಯಾವುದೇ ತಡೆಗೋಡೆ ನಿರ್ಮಿಸದೆ, ಭವಿಷ್ಯದಲ್ಲಿ ಮಣ್ಣು ಕುಸಿಯುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇದಲ್ಲದೇ, ಅಂಗರಗುಂಡಿ ಅಂಡರ್‌ಪಾಸ್‌ನಲ್ಲಿ ಕೇವಲ 11 ಅಡಿ ಎತ್ತರದ ವಾಹನ ಸಂಚರಿಸಲು ಮಾತ್ರ ಅವಕಾಶವಿದೆ. ಬೋರ್ ವೆಲ್ ನಂತಹ ಎತ್ತರದ ವಾಹನಗಳಿಗೆ ಸಂಚರಿಸಲು ಸಾಧ್ಯವಿಲ್ಲ. ಭವಿಷ್ಯದಲ್ಲಿ ನೀರಿನ ಸಮಸ್ಯೆ ಎದುರಾದರೆ ಪರಿಹರಿಸಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಇದೆ.
ಈ ಬಗ್ಗೆ ದಕ್ಷಿಣ ರೈಲ್ವೇ ಅಧಿಕಾರಿಗಳಿಗೆ ಸಾಕಷ್ಟು ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ ಶನಿವಾರ ಅಂಡರ್ ಪಾಸ್ ವೀಕ್ಷಿಸಲು ಬಂದ ದಕ್ಷಿಣ ರೈಲ್ವೇ ಅಧಿಕಾರಿಗಳಿಗೆ
ಬೈಕಂಪಾಡಿ ಜುಮಾ ಮಸೀದಿ ಅಧ್ಯಕ್ಷ ನಾಸೀರ್ ಲಕ್ಕಿಸ್ಟಾರ್ ನೇತೃತ್ವದಲ್ಲಿ ನಾಗರಿಕರು ಮುತಿತಿಗೆ ಹಾಕಿ ಪ್ರತಿಭಟಿಸಿದರು.
ಕಾಮಗಾರಿ ವೀಕ್ಷಿಸಿದ ಅಧಿಕಾರಿಗಳು ಸ್ಥಳೀಯರ ಬೇಡಿಕೆಗಳಿಗೆ ಸ್ಪಂದಿಸಿ ಅಂಗರಗುಂಡಿ ಅಂಡರ್ ಪಾಸ್‌ನಲ್ಲಿ ರೈಲ್ವೇ ಹಳಿಯ ಎರಡೂ ಬದಿ ತಡೆಗೋಡೆ, ಚರಂಡಿ ಸೇರಿದಂತೆ ಎಲ್ಲಾ ಸಮರ್ಪಕ ವ್ಯವಸ್ಥೆ ಕೈಗೊಂಡ ಬಳಿಕ ಸಂಚಾರಕ್ಕೆ ಮುಕ್ತ ಗೊಳಿಸುವುದಾಗಿ, ಅದುವರೆಗೆ ಹಾಲಿ ಲೆವಲ್ ಕ್ರಾಸಿಂಗನ್ನು ಯಥಾಸ್ಥಿತಿಯಲ್ಲಿ ಸಂಚಾರಕ್ಕೆ ಮುಂದುವರಿಸುವುದಾಗಿ ಭರವಸೆ ನೀಡಿದರು. ಬಳಿಕ ಪ್ರತಿಭಟನೆ ಕೈಬಿಡಲಾಯಿತು.