ವಿದ್ಯಾರ್ಥಿಗಳ ಜೀವನದಲ್ಲಿ ಸೃಜನಶೀಲತೆ ಮುಖ್ಯ- ಡಾ. ಕೆ. ಚಿನ್ನಪ್ಪ ಗೌಡ
ಉಜಿರೆ,ಜ.28: ವಿದ್ಯಾರ್ಥಿಗಳು ತಮ್ಮ ಸೃಜನಶೀಲತೆಯನ್ನು ಎಂದಿಗೂ ಕಳೆದುಕೊಳ್ಳಬಾರದು. ಸೃಜನಶೀಲತೆಯನ್ನು ಕಳೆದುಕೊಂಡರೆ ಅಸ್ತಿತ್ವವನ್ನು ಕಳೆದುಕೊಂಡಂತೆ ಎಂದು 21ನೇ ದಕ್ಷಿಣಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ. ಕೆ. ಚಿನ್ನಪ್ಪ ಗೌಡ ನುಡಿದರು.
ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಈ ಬಾರಿ ಹಮ್ಮಿಕೊಂಡಿದ್ದ ವಿಶೇಷ ಮಕ್ಕಳ ಸಾಹಿತ್ಯ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳು ಓದುವ ವಿಷಯಗಳ ಗಹನ ಅಂಶಗಳನ್ನು ಗ್ರಹಿಸುವಂತಾಗಬೇಕು. ಆಗ ಮಾತ್ರ ಒಂದು ವಿಷಯದ ಬಗೆಗೆ ಉತ್ತಮ ಜ್ಞಾನ ಲಭ್ಯವಾಗುತ್ತದೆ. ಜೀವನದಲ್ಲಿ ಸಾಧಿಸುವ ಕನಸು ಮುಖ್ಯ. ಆಗ ಮಾತ್ರ ಅಂತಹ ಕನಸುಗಳನ್ನು ನನಸು ಮಾಡಿಕೊಳ್ಳಲು ಸಾಧ್ಯ ಎಂದು ಆಶಯ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳಲ್ಲಿ ಸ್ಪರ್ಧೆ ಮುಖ್ಯವಲ್ಲ. ಬದಲಾಗಿ ಅವರು ನೀಡುವ ಪ್ರತಿಭಾ ಪ್ರದರ್ಶನವೇ ಮುಖ್ಯ. ಮಕ್ಕಳಲ್ಲಿ ಸ್ವಚ್ಚ ಮನಸ್ಸಿದೆ. ಕುಟುಂಬಕ್ಕೆ ಹಿತವಾಗುವಂತಹ ವಿಷಯಗಳನ್ನು ಸ್ವೀಕರಿಸಿದಾಗ ಮಾತ್ರ ಉತ್ತಮ ಮನಸ್ಸುಗಳು ರೂಪುಗೊಳ್ಳುತ್ತವೆ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಪೋಷಕರು ಮತ್ತು ಶಿಕ್ಷಕರ ಪ್ರೇರಣೆಯಿಂದ ವಿದ್ಯಾರ್ಥಿಗಳು ಸಾಧಿಸುವ ಛಲ ತೊಡುತ್ತಾರೆ. ವಿದ್ಯಾರ್ಥಿಗಳಿಗೆ ಓದಿನ ಹವ್ಯಾಸ ಮುಖ್ಯ. ಓದಿನಿಂದಾಗಿ ಮಕ್ಕಳ ಸೃಜನಶೀಲತೆ ಹೆಚ್ಚುತ್ತದೆ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಆಶಯ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್‌ನ ಸರ್ವಾಧ್ಯಕ್ಷ ಎನ್. ರಾಮಚಂದ್ರ ಭಟ್ ಮಕ್ಕಳು ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಂಡಾಗ ಮಾತ್ರ ಅವರಲ್ಲಿನ ಇಚ್ಛಾಶಕ್ತಿ ವೃದ್ಧಿಸುತ್ತದೆ. ಪುಸ್ತಕವನ್ನು ಓದುವುದರಿಂದ ಜ್ಞಾನಲಾಭ ಆಗುವುದರ ಜೊತೆಗೆ ಬದುಕಿನ ಸತ್ಯಾಂಶಗಳ ಅರಿವಾಗುತ್ತದೆ ಎಂದರು.
ಕಾರ್ಯಕ್ರಮವನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದ ವಿದ್ಯಾರ್ಥಿನಿ ಪೂರ್ಣಿಮಾ ನಿರ್ವಹಿಸಿದರು. ಅತಿಥಿ ಗಣ್ಯರನ್ನು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿನಿ ಅಂಜಿತ ಸ್ವಾಗತಿಸಿದರು.