ಕಲುಷಿತ ನೀರು ನೇತ್ರಾವತಿ ನದಿಗೆ: ಜಂಟಿ ನಿಯೋಗದಿಂದ ಪರಿಶೀಲನೆ
ಮಂಗಳೂರು, ಜ.28: ಬಂಟ್ವಾಳ ತಾಲೂಕಿನ 18 ಕಡೆಗಳಲ್ಲಿ ಕಲುಷಿತ ನೀರುಗಳನ್ನು ನೇತ್ರಾವತಿ ನದಿಗೆ ಹರಿದು ಬಿಡಲಾಗುತ್ತದೆ ಎಂಬ ಪ್ರತಿಪಕ್ಷದ ಸದಸ್ಯರ ಆರೋಪ ಹಾಗೂ ಆದಾಗ್ಯೂ ಕುಡಿಯಲು ಶುದ್ಧೀಕರಿಸಿದ ನೀರನ್ನೇ ಮಂಗಳೂರಿಗೆ ಪೂರೈಕೆ ಮಾಡಲಾಗುತ್ತದೆ ಎಂಬ ಆಡಳಿತರೂಢ ಪಕ್ಷದ ಸದಸ್ಯರ ಸಮರ್ಥನೆಯ ಮಧ್ಯೆ ಎರಡೂ ಪಕ್ಷದ ಕಾರ್ಪೊರೇಟರ್‌ಗಳು ಶೀಘ್ರ ತುಂಬೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲು ಶನಿವಾರ ನಡೆದ ಮಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಯಿತು.
ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ಮನಪಾಕ್ಕೆ ಪೂರೈಕೆಯಾಗುವ ನೀರಿನಲ್ಲಿ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಇರುವ ಬಗ್ಗೆ ಮಾಹಿತಿ ನೀಡಿದ್ದರು. ಆದರೆ ತಾವು ಅದನ್ನು ಅಲ್ಲಗಳೆದಿದ್ದೀರಿ. ಈ ಮಧ್ಯೆ ಮಾಜಿ ಸಚಿವರು ಬಂಟ್ವಾಳದ ನೇತ್ರಾವದಿ ನದಿ ತೀರಕ್ಕೆ ಭೇಟಿ ನೀಡಿದ್ದು, ಅವರೊಂದಿಗೆ ಹಲವು ಕಾರ್ಪೊರೇಟರ್‌ಗಳೂ ಇದ್ದರು. ಸುಮಾರು 18 ಕಡೆ ಕಲುಷಿತ ನೀರುಗಳು ನೇತ್ರಾವದಿ ನದಿಗೆ ಹರಿದು ಬರುತ್ತಿದೆ. ಸತ್ತ ಹಂದಿಯೂ ನದಿ ಪಾಲಾದುದದು ಕಂಡು ಬಂದಿದೆ. ಇದೇ ನೀರನ್ನು ಪಾಲಿಕೆ ವ್ಯಾಪ್ತಿಗೆ ಪೂರೈಕೆ ಮಾಡಲಾಗುತ್ತಿದೆ ಎಂದು ಸದಸ್ಯ ಸುಧೀರ್ ಶೆಟ್ಟಿ ಆರೋಪಿಸಿದರು.
ನೀರು ಕಲುಷಿತಗೊಂಡಿದ್ದರೆ ಕುಡಿದ 5 ನಿಮಿಷದಲ್ಲೇ ದೇಹದ ಆರೋಗ್ಯದಲ್ಲಿ ಏರುಪೇರು ಆಗುತ್ತಿತ್ತು. ಗಂಗಾನದಿಯಲ್ಲಿ ಅರ್ಧಸುಟ್ಟ ಹೆಣವನ್ನೇ ಬಿಡಲಾಗುತ್ತದೆ. ಆದರೂ ಗಂಗಾನದಿ ಶುದ್ಧ ಎನ್ನಲಾಗುತ್ತಿದೆ. ಮಾಜಿ ಸಚಿವರು ಯಾವುದೋ ಖಾಸಗಿ ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಿದ ನೀರನ್ನು ಕಲುಷಿತ ಎನ್ನಲು ಒಪ್ಪಲು ಸಾಧ್ಯವಿಲ್ಲ ಎಂದು ಮೇಯರ್ ಹರಿನಾಥ್ ಹೇಳಿದರು.
ಇದು ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ಮಧ್ಯೆ ಆರೋಪ-ಪ್ರತ್ಯಾರೋಪಕ್ಕೆ ದಾರಿ ಮಾಡಿಕೊಟ್ಟಿತು. ಚುನಾವಣೆ ಸಮೀಪಿಸುತ್ತಿದೆ. ನಿಮಗೆ ಚರ್ಚಿಸಲು ಬೇರೆ ವಿಷಯ ಸಿಗುತ್ತಿಲ್ಲ ಎಂದು ಹರಿನಾಥ್ ಹರಿಹಾಯ್ದರು. ಇದರಿಂದ ಕೆರಳಿದ ಬಿಜೆಪಿ ಸದಸ್ಯರು ಸದನದ ಬಾವಿಯೊಳಗೆ ತೆರಳಿ ಆಕ್ರೋಶ ವ್ಯಕ್ತಪಡಿಸಿದರು. ಅಂತಿಮವಾಗಿ ಎರಡೂ ಪಕ್ಷದ ಸದಸ್ಯರ ಜಂಟಿ ನಿಯೋಗ ತುಂಬೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲು ಸಭೆ ನಿರ್ಧರಿಸಲಾಯಿತು.
ಆಡಳಿತ ಪಕ್ಷದವರಿಂದಲೇ ತರಾಟೆ: ಪಚ್ಚನಾಡಿಯ ತ್ಯಾಜ್ಯ ಸಾಗಾಟದ ಟಿಪ್ಪರ್‌ಗೆ ಹೊದಿಕೆ ಹಾಕಲಾಗುತ್ತಿಲ್ಲ. ಅಲ್ಲದೆ ಈ ಟಿಪ್ಪರ್ ಪಾಲಿಕೆಯ ಸದಸ್ಯರೊಬ್ಬರಿಗೆ ಸೇರಿದ್ದಾಗಿದೆ ಎಂದು ಸದಸ್ಯ ಕೆ. ಭಾಸ್ಕರ ಆರೋಪಿಸಿ ದಾಖಲೆಯೊಂದನ್ನು ಬಿಡುಗಡೆ ಮಾಡಿದರು. ಇದನ್ನು ಅಸ್ತ್ರವಾಗಿಟ್ಟುಕೊಂಡ ಬಿಜೆಪಿ ಸದಸ್ಯರು, ಟಿಪ್ಪರ್ ಯಾವ ಸದಸ್ಯರಿಗೆ ಸೇರಿದ್ದು ಎಂಬುದನ್ನು ಸದನದಲ್ಲಿ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರಲ್ಲದೆ, ಪಾಲಿಕೆಯ ನಿಮಯದ ಪ್ರಕಾರ ಸದಸ್ಯರು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಯಾವುದೇ ಗುತ್ತಿಗೆ ವಹಿಸಬಾರದು ಅಥವಾ ಫಲಾನುಭವಿಯಾಗಿರಬಾರದು. ಆದರೆ ಪಾಲಿಕೆಯಲ್ಲಿ ಎಲ್ಲವನ್ನೂ ಗಾಳಿಗೆ ತೂರಲಾಗುತ್ತಿದೆ ಎಂದರು.
‘ಈ ಬಗ್ಗೆ ಪರಿಶೀಲಿಸಿ ಮುಂದಿನ ಸಭೆಯಲ್ಲಿ ಉತ್ತರಿಸುವೆ’ ಎಂದು ಮೇಯರ್ ಹೇಳಿದರೂ ಪಟ್ಟುಬಿಡದ ಬಿಜೆಪಿ ಸದಸ್ಯರು ಸದನದ ಬಾವಿಯೊಳಗೆ ಇಳಿದು ಹೆಸರು ಬಹಿರಂಗಕ್ಕೆ ಒತ್ತಾಯಿಸಿದರಲ್ಲದೆ ದಾಖಲೆಯನ್ನು ಪರಿಶೀಲಿಸಿ ಹೆಸರು ಖಚಿತಪಡಿಸಿಕೊಂಡರು. ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ಕವಿತಾ ಸನಿಲ್‌ರ ಸುತ್ತ ಈ ಆರೋಪ ವ್ಯಕ್ತವಾಗುತ್ತಿದ್ದಂತೆಯೇ ಕಾಂಗ್ರೆಸ್ ಸದಸ್ಯ ಎ.ಸಿ.ವಿನಯರಾಜ್‌ರು ಕವಿತಾ ಸನಿಲ್ ಪರ ವಾದಕ್ಕಿಳಿದರೆ, ಇನ್ನೋರ್ವ ಕಾಂಗ್ರೆಸ್ ಸದಸ್ಯ ಅಬ್ದುಲ್ಲತೀಫ್‌ರು ವಿನಯರಾಜ್‌ರನ್ನೇ ಸುಮ್ಮನಿರಿಸಿದರು. ಅಂತಿಮವಾಗಿ ಕವಿತಾ ಸನಿಲ್ ಮಾತನಾಡಿ ತ್ಯಾಜ್ಯ ನಿರ್ವಹಣೆಯ ಹೊಣೆ ಯುನಿಕ್ ವೇಸ್ಟ್ ಕಂಪೆನಿಗೆ ನೀಡಲಾಗಿದೆ. ಅವರು ಯಾರದೇ ವಾಹನವನ್ನು ಪಡೆದು ನಿರ್ವಹಿಸಬಹುದು. ಪಾಲಿಕೆಯು ಯುನಿಕ್ ವೇಸ್ಟ್ ಕಂಪೆನಿಗೆ ಬಿಲ್ ಮೊತ್ತ ಪಾವತಿಸುತ್ತದೆಯೇ ವಿನ: ಟಿಪ್ಪರ್ ಮಾಲಕರಿಗೆ ಅಲ್ಲ ಎಂದು ಸ್ಪಷ್ಟಣೆ ನೀಡಿದರು. ಇದರಿಂದ ಕೆರಳಿದ ಬಿಜೆಪಿ ಸದಸ್ಯ ಮಧುಕಿರಣ್ ಕಂಪೆನಿ ಹೆಸರಿನಲ್ಲಿ ಮನಪಾ ಹಣವನ್ನು ಲೂಟಿ ಮಾಡಲಾಗುತ್ತಿದೆ ಎಂದು ದೂರಿದರು. ಇನ್ನು ಮುಂದೆ ಹೊದಿಕೆ ಹಾಕಿಯೇ ವಾಹನದಲ್ಲಿ ತ್ಯಾಜ್ಯ ಸಾಗಾಟ ಮಾಡಲು ಕ್ರಮ ಜರಗಿಸಬೇಕು ಎಂದು ಪರಿಸರ ಇಂಜಿನಿಯರ್‌ಗೆ ಮೇಯರ್ ಸೂಚಿಸಿದರು.
ನಗರದಲ್ಲಿ ಟ್ರಾಫಿಕ್ ಸಮಸ್ಯೆ ಮಿತಿಮೀರಿದೆ. ಅಲ್ಲಲ್ಲಿ ಹೊಂಡ ಬಿದ್ದಿದೆ. ಕೋರ್ಟ್ ವಾರ್ಡ್‌ನಲ್ಲೂ ರಸ್ತೆ ಸರಿಯಿಲ್ಲ. ನ್ಯಾಯಾಧೀಶರು ಕೂಡ ಎರಡು ಬಾರಿ ನನ್ನ ಗಮನ ಸೆಳೆದಿದ್ದಾರೆ. ಇದನ್ನು ಸರಿಪಡಿಸಿ ಎಂದು ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಯ ಅಧ್ಯಕ್ಷ ಲ್ಯಾನ್ಸಿ ಲಾಟ್ ಪಿಂಟೋರಿಗೆ 2 ತಿಂಗಳಿನಿಂದ ನಾನು ಹೇಳುತ್ತಲೇ ಇದ್ದೇನೆ. ಆದರೂ ಮಾಡಿಲ್ಲ ಎಂದು ಕಾಂಗ್ರೆಸ್ ಸದಸ್ಯ ಎ.ಸಿ. ವಿನಯರಾಜ್ ಆರೋಪಿಸಿದರು.
ಇದರಿಂದ ಅಸಮಾಧಾನಗೊಂಡ ಲ್ಯಾನ್ಸಿ ಲಾಟ್ ಪಿಂಟೋ ನಗರದ ಶೇ.75 ಕಡೆಯ ರಸ್ತೆಗಳ ಹೊಂಡ ಮುಚ್ಚಲಾಗಿದೆ. ಸುಮ್ಮನೆ ನೀವು ಬಾಯಿಗೆ ಬಂದ ಹಾಗೆ ಮಾತನಾಡಬೇಡಿ ಎಂದರು. ಮಧ್ಯಪ್ರವೇಶಿಸಿದ ಮೇಯರ್ 2 ವಾರದೊಳಗೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಭೆಯಲ್ಲಿ ಉಪಮೇಯರ್ ಸುಮಿತ್ರಾ ಕರಿಯ, ಆಯುಕ್ತ ಮುಹಮ್ಮದ್ ನಝೀರ್, ತೆರಿಗೆ ಹಣಕಾಸು ಮತ್ತು ಅಪೀಲು ಸ್ಥಾಯಿ ಸಮಿತಿ ಅಧ್ಯಕ್ಷೆ ಅಪ್ಪಿ, ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷ ಬಶೀರ್ ಅಹ್ಮದ್ ಉಪಸ್ಥಿತರಿದ್ದರು.
ಮನಪಾ ಸಚೇತಕ ಶಶಿಧರ ಹೆಗ್ಡೆ, ಸದಸ್ಯರಾದ ದೀಪಕ್ ಪೂಜಾರಿ, ಪುರುಷೋತ್ತಮ ಚಿತ್ರಾಪುರ, ಕೆ.ಮುಹಮ್ಮದ್, ಬಿ.ಪ್ರಕಾಶ್, ನಾಗವೇಣಿ, ದಯಾನಂದ ಶೆಟ್ಟಿ, ಅಬ್ದುಲ್ ಅಝೀಝ್ ಕುದ್ರೋಳಿ, ಅಯಾಝ್ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು.
►ನಗರದ ಜೋಗಿ ಮಠ ಮತ್ತು ಸ್ವಾಮಿ ವಿವೇಕಾನಂದ ರಸ್ತೆಯ ನಾಮಫಲಕ ವಿವಾದ ಕೂಡ ಪಾಲಿಕೆಯ ಕಾಂಗ್ರೆಸ್-ಬಿಜೆಪಿ ಸದಸ್ಯರ ಮಧ್ಯೆ ಮಾತಿನ ಚಕಮಕಿಗೆ ಕಾರಣವಾಯಿತು. ಪ್ರತಿಪಕ್ಷ ನಾಯಕಿ ರೂಪಾ ಡಿ.ಬಂಗೇರಾ ಈ ವಿಷಯವನ್ನು ಪ್ರಸ್ತಾಪಿಸಿ ‘ರಸ್ತೆಯ ನಾಮಫಲಕ ಕೆಡಹುವ ಮೂಲಕ ಮೇಯರ್ ವಿವೇಕಾನಂದರಿಗೆ ಅಗೌರವ ತೋರಿದ್ದಾರೆ. ತಕ್ಷಣ ಸದನದ ಕ್ಷಮೆ ಕೇಳಿ’ ಎಂದು ಒತ್ತಾಯಿಸಿದರು.
‘ನೀವು ಸುಮ್ಮನೆ ರಾಜಕೀಯ ಮಾಡುತ್ತೀರಿ. ಜೋಗಮಠ ರಸ್ತೆಯ ನಾಮಫಲಕವನ್ನು ಕೆಡವಿದವರು ನೀವೆ. ಆ ಮೂಲಕ ಜೋಗಿ ಸಮುದಾಯಕ್ಕೆ ಅನ್ಯಾಯ ಎಸಗಿದ್ದೀರಿ. ಹಾಗಾಗಿ ನೀವೇ ಕ್ಷಮೆ ಯಾಚಿಸಿ’ ಎಂದು ಪಟ್ಟು ಹಿಡಿದರು.
ಈ ಮಧ್ಯೆ ಸದಸ್ಯ ಪ್ರಕಾಶ್ ಸಾಲ್ಯಾನ್ ಬಿಜೈಯಲ್ಲಿ ವಿವೇಕಾನಂದರ ಪ್ರತಿಮೆ ಸ್ಥಾಪಿಸಿದ್ದಾರೆ. ಇದಕ್ಕೆ ಪಾಲಿಕೆಯಲ್ಲಿ ನಿರ್ಣಯ ಆಗಿದೆಯೇ? ಸರಕಾರದ ಒಪ್ಪಿಗೆ ಪಡೆಯಲಾಗಿದೆಯೇ? ಎಂದು ರೂಪಾ ಡಿ.ಬಂಗೇರಾ ಪ್ರಶ್ನಿಸಿದರು. ಅಂತಿಮವಾಗಿ ಇಬ್ಬರೂ ತಮ್ಮ ವಾದಕ್ಕೆ ಅಂಟಿ ನಿಂತದ್ದರಿಂದ ಆರೋಪ-ಪ್ರತ್ಯಾರೋಪ ಗಾಳಿಯಲ್ಲಿ ತೇಲಿ ಹೋದಂತಾಯಿತು.
►ಅಮೃತ ಯೋಜನೆಗೆ ಮೀಸಲಿಟ್ಟ ಹಣವನ್ನು ರಸ್ತೆ ದುರಸ್ತಿ, ಒಳಚರಂಡಿ ದುರಸ್ತಿ ಇತ್ಯಾದಿ ತುಂಡು ಕಾಮಗಾರಿಗೆ ಬಳಸಿದ ಬಗ್ಗೆ ಬಿಜೆಪಿ ಸದಸ್ಯರಾದ ತಿಲಕರಾಜ್, ಪ್ರೇಮಾನಂದ ಶೆಟ್ಟಿ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಯೋಜನೆಗೆ ಬಿಡುಗಡೆಗೊಂಡ ಹಣದ ಬಗ್ಗೆ ಮಾಹಿತಿ ಬಯಸಿದರು. ಇದಕ್ಕೆ ಉತ್ತರಿಸಿದ ಮನಪಾ ಆಯುಕ್ತ ಮುಹಮ್ಮದ್ ನಝೀರ್, 185.52 ಕೋ.ರೂ.ಮೊತ್ತದ ಈ ಯೋಜನೆಯಡಿ ಕೇಂದ್ರದ ಶೇ.50, ರಾಜ್ಯದ ಶೇ.20, ಮನಪಾದ ಶೇ. 30 ಅನುಪಾತದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ ಎಂದರು.
ಸ್ವಯಂಘೋಷಿತ ಆಸ್ತಿ ತೆರಿಗೆ ಮುಗಿದ ಅಧ್ಯಾಯ: ಸ್ವಯಂ ಘೋಷಿತ ಆಸ್ತಿ ತೆರಿಗೆ ಏನಾಯಿತು? ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಮರೆತುಬಿಟ್ಟಿರಾ?ಎಂದು ಬಿಜೆಪಿ ಸದಸ್ಯ ಮಧುಕಿರಣ್ ಪ್ರಶ್ನೆಗೆ ಉತ್ತರಿಸಿದ ಮೇಯರ್ ಹರಿನಾಥ್, ಅದೆಲ್ಲಾ ಮುಗಿದ ಅಧ್ಯಾಯ ಎಂದರು.
►ನಗರದ ಬಜಾಲ್, ಫೈಸಲ್‌ನಗರ, ವೀರನಗರಕ್ಕೆ ಸಮಯಕ್ಕೆ ಸರಿಯಾಗಿ ಬಸ್ ಸಂಚಾರ ಮಾಡುತ್ತಿಲ್ಲ. ಈ ಬಗ್ಗೆ ಆರ್‌ಟಿಒಗೆ ದೂರು ನೀಡಿದರೆ ಅವರು ಮಾಲಕರ ಪರವಾಗಿ ವಕಾಲತ್ತು ಮಾಡುತ್ತಾರೆ. ನರ್ಮ್ ಬಸ್ ಓಡಿಸಲು ಕೆಎಸ್ಸಾರ್ಟಿಸಿ ಮುಂದೆ ಬಂದರೂ ಆರ್‌ಟಿಒ ಅನುಮತಿ ನೀಡುತ್ತಿಲ್ಲ ಎಂದು ಸದಸ್ಯ ಅಬ್ದುರ್ರವೂಫ್ ಆರೋಪ ಮಾಡಿದರು.
ಇದಕ್ಕೆ ಕೆ.ಮುಹಮ್ಮದ್, ಸುಧೀರ್ ಶೆಟ್ಟಿ ಧ್ವನಿಗೂಡಿಸಿರಲ್ಲದೆ ಮುಂದಿನ ಸಭೆಯಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದು, ಉತ್ತರ ನೀಡುವಂತೆ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಮುಂದಿನ ಸಭೆಯಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರುವಂತೆ ನೋಡಿಕೊಳ್ಳಬೇಕು ಎಂದು ಆಯುಕ್ತರಿಗೆ ಸೂಚಿಸಿದರು.
►ಇತ್ತೀಚೆಗೆ ನಿಧನರಾದ ಮಾಜಿ ಉಪಮೇಯರ್ ಜುಡಿತ್ ಮಸ್ಕರೇನ್ಹಸ್‌ಗೆ ಸದನ ಸಂತಾಪ ಸೂಚಿಸಿತು.
►ಕರಾವಳಿಯ ಜಾನಪದ ಕ್ರೀಡೆಯಾದ ಕಂಬಳದ ಪರ ಸದನ ನಿರ್ಣಯ ಕೈಗೊಂಡಿತು.