×
Ad

ಸಿರಿಯದ ಅಸದ್ ಪಾರ್ಶ್ವವಾಯುವಿಗೆ ಗುರಿಯಾದರೇ?

Update: 2017-01-28 17:58 IST

ಡಮಾಸ್ಕಸ್, ಜ. 28: ಸಿರಿಯದ ಅಧ್ಯಕ್ಷ ಬಶರ್ ಅಲ್ ಅಸದ್ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬ ಸುದ್ದಿ ಶುಕ್ರವಾರದಿಂದ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ.

ಅಸದ್ ಪಾರ್ಶ್ವವಾಯುವಿಗೆ ಈಡಾಗಿದ್ದಾರೆ ಎಂಬುದಾಗಿ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಅವರಿಗೆ ಗುಂಡು ಹೊಡೆಯಲಾಗಿದೆ ಹಾಗೂ ಚಿಕಿತ್ಸೆಗಾಗಿ ಅವರನ್ನು ಡಮಾಸ್ಕಸ್‌ನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ ಎಂಬುದಾಗಿ ಇತರ ಮಾಧ್ಯಮಗಳು ಹೇಳಿವೆ.

ಅಸದ್‌ರನ್ನು ಅವರ ಇರಾನಿ ಅಂಗರಕ್ಷಕ ಮೆಹದಿ ಅಲ್-ಯಾಕೂಬಿ ಹತ್ಯೆಗೈದಿರಬಹುದು ಎಂಬುದಾಗಿ ಫ್ರಾನ್ಸ್‌ನ ‘ಲೆ ಪಾಯಿಂಟ್’ ಭಾವಿಸಿದೆ. ಅಂಗರಕ್ಷಕನು ಅಸದ್‌ರ ತಲೆಗೆ ಗುಂಡು ಹಾರಿಸಿದ್ದಾನೆ ಎಂಬುದಾಗಿಯೂ ಅದು ಹೇಳಿದೆ.

ಆದರೆ, ಅಸದ್ ಮೆದುಳಿನ ರಕ್ತಸ್ರಾವದಿಂದ ಅಸ್ವಸ್ಥಗೊಂಡು ಡಮಾಸ್ಕಸ್‌ನ ಆಸ್ಪತ್ರೆಗೆ ದಾಖಲಾಗಿದ್ದಾರೆ ಹಾಗೂ ಅಲ್ಲಿ ಭಾರೀ ಬಂದೋಬಸ್ತ್‌ನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಲೆಬನಾನ್‌ನ ಪತ್ರಿಕೆ ‘ಅಲ್-ಮುಸ್ತಕ್ಬಲ್’ ‘ವಿಶ್ವಾಸಾರ್ಹ ಮೂಲ’ಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.

 ಸೌದಿ ಪತ್ರಿಕೆ ‘ಒಕಾಝ್’ ಪ್ರಕಾರ, ಅಸದ್ ಮೆದುಳಿನ ಗಡ್ಡೆಯಿಂದ ಬಳಲುತ್ತಿದ್ದಾರೆ. ಸ್ವಲ್ಪ ಅವಧಿಗೆ ಪದೇ ಪದೇ ಕಾಣಿಸಿಕೊಳ್ಳುವ ಮೂಲಕ ಅವರು ತನ್ನ ಅನಾರೋಗ್ಯವನ್ನು ಮುಚ್ಚಿಡಲು ಯತ್ನಿಸುತ್ತಿದ್ದರು ಎಂದಿದೆ. ರಶ್ಯ ಮತ್ತು ಸಿರಿಯಗಳ ವೈದ್ಯಕೀಯ ತಂಡವೊಂದು ಅಸದ್‌ಗೆ ಪ್ರತಿ ವಾರ ಚಿಕಿತ್ಸೆ ನೀಡುತ್ತಿದೆ ಎಂದು ಅದು ತಿಳಿಸಿದೆ.

ಅವರು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಮಾಸ್ಕೋದಲ್ಲಿದ್ದಾಗ ಅಲ್ಲಿ ವೈದ್ಯಕೀಯ ಚಿಕಿತ್ಸೆಗೆ ಒಳಗಾಗಿದ್ದರು ಎನ್ನಲಾಗಿದೆ.

ಅಸದ್ ಪಾರ್ಶ್ವವಾಯುವಿಗೆ ಒಳಗಾದರು ಎಂಬುದಾಗಿ ಸಿರಿಯ ಸರಕಾರದ ಪರವಾಗಿರುವ ಲೆಬನೀಸ್ ಪತ್ರಿಕೆ ‘ಅಲ್-ದಿಯರ್’ ಶುಕ್ರವಾರ ವರದಿ ಮಾಡಿತ್ತು. ಆದರೆ, ಶನಿವಾರ ಅದು ಆ ಸುದ್ದಿಯನ್ನು ನಿರಾಕರಿಸಿದೆ.

ಈ ನಡುವೆ, ಇಂಥ ವರದಿಗಳು ಸತ್ಯವಲ್ಲ ಎಂಬುದಾಗಿ ಸಿರಿಯನ್ ಅರಬ್ ರಿಪಬ್ಲಿಕ್‌ನ ಅಧ್ಯಕ್ಷೀಯ ಕಚೇರಿ ತನ್ನ ಫೇಸ್‌ಬುಕ್ ಪುಟದಲ್ಲಿ ಹೇಳಿಕೆಯೊಂದನ್ನು ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News