ವೆಲ್ಫೇರ್ ಪಾರ್ಟಿಯಿಂದ ಯುವ ಜಾಗೃತಿ ದೇಶ ಸಮೃದ್ಧಿಯುವ ಸಮಾವೇಶ
ಭಟ್ಕಳ, ಜ. 28: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಘಟಕವು ಯುವ ಜಾಗೃತಿ ದೇಶ ಸಮೃದ್ಧಿ ರಾಜ್ಯವ್ಯಾಪಿ ವೆಲ್ಫೇರ್ ಯುವ ಅಭಿಯಾನ ಹಮ್ಮಿಕೊಂಡಿದ್ದು ಇದರ ಅಂಗವಾಗಿ ದ.ಕ, ಉಡುಪಿ, ಕೊಡಗು ಹಾಗೂ ಉತ್ತರಕನ್ನಡ ಜಿಲ್ಲೆಗಳನ್ನೊಳಗೊಂಡ ಯುವ ಸಮಾವೇಶವನ್ನು ಫೆ.26 ರಂದು ಭಟ್ಕಳದಲ್ಲಿ ಆಯೋಜಿಸಲಾಗುವುದು ಎಂದು ಡಬ್ಲೂ.ಪಿ.ಐ. ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ತಾಹಿರ್ ಹುಸೇನ್ ಹೇಳಿದರು.
ಅವರು ಶನಿವಾರ ಇಲ್ಲಿನ ವೆಲ್ಪೇರ್ ಆಸ್ಪತ್ರೆಯ ಸಭಾ ಭವನದಲ್ಲಿ ಯುವ ಸಮಾವೇಶದ ಪೂರ್ವ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ವಲ್ಫೇರ್ ಪಾರ್ಟಿ ಮೌಲ್ಯಾಧಾರಿತ ರಾಜಕೀಯ ಶಕ್ತಿಯವನ್ನು ಪ್ರತಿಪಾದಿಸುವ ರಾಷ್ಟ್ರೀಯ ಪಕ್ಷವಾಗಿದ್ದು ನಿಷ್ಕಳಂಕ ಚಾರಿತ್ರ್ಯ ಹಿನ್ನೆಲೆಯುಳ್ಳ, ನಿಸ್ವಾರ್ಥ ಸಮಾಜ ಸೇವಕರು ಹಾಗೂ ಸಾಮಾಜಿಕ ಹೋರಾಟಗಾರರೇ ಪಕ್ಷದ ಬಂಡವಾಳವಾಗಿದ್ದಾರೆ.ಯುವಕರು ಈ ದೇಶದ ಆಧಾರ ಸ್ಥಂಭ, ಅವರು ಮೋಜು, ಮಜಾಗಳಿಂದ ದೂರವುಳಿದು ದೇಶದ ನವ ನಿರ್ಮಾಣದಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದ ಅವರು ನೈತಿಕತೆ, ಮೌಲ್ಯಾಧಾರಿತ ನೆಲೆಗಟ್ಟಿನಲ್ಲಿ ಬದುಕು ಕಟ್ಟಿದರೆ ಈ ದೇಶ ಅಭ್ಯುದಯ ಹೊಂದುತ್ತದೆ, ಯುವ ಸಮಾವೇಶದ ಮೂಲಕ ದೇಶದ ಯುವಕರಲ್ಲಿ ಜಾಗೃತಿ ಪ್ರಜ್ಞೆಯನ್ನು ಬೆಳೆಸುವುದರ ಜತೆಗೆ ಅವರನ್ನು ದೇಶದ ಶಕ್ತಿಯನ್ನಾಗಿ ರೂಪಿಸಲಾಗುವುದು ಎಂದು ತಿಳಿಸಿದರು.
ಯುವ ಸಮಾವೇಶದ ಕುರಿತಂತೆ ರೂಪುರೇಶೆಗಳನ್ನು ಸಿದ್ಧಪಡಿಸಲಾಗಿದ್ದು ಯುವಕರಿಗಾಗಿ ವಿವಿಧ ಕ್ರೀಡೆ, ಪ್ರಬಂಧ, ಬೀದಿ ನಾಟಕ ಹಾಗೂ ಮೇರವಣೆಗೆಯನ್ನು ನಡೆಸುವುದರ ಮೂಲಕ ಸಮಾವೇಶವನ್ನು ಅತ್ಯಂತ ಯಶಸ್ವಿಗೊಳಿಸಲಾಗುವುದು ಸುಮಾರು ಉಡುಪಿ, ದ.ಕ. ಕೊಡಗು, ಉತ್ತರಕನ್ನಡ ಜಿಲ್ಲೆ ಸೇರಿದಂತೆ ಸುಮಾರು 5ಸಾವಿರಕ್ಕೂ ಹೆಚ್ಚು ಯುವಕರು ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು ರಾಜ್ಯ ಹಾಗೂ ಕೇಂದ್ರದ ಮುಖಂಡರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಸಂದರ್ಭದಲ್ಲಿ ಯುವ ಸಮಾವೇಶ ಸಂಚಾಲಕ ಮುಹಮ್ಮದ್ ಅಶ್ರಫ್, ವೆಲ್ಫೇರ್ ಪಾರ್ಟಿಯ ಉ.ಕ. ಜಿಲ್ಲಾಧ್ಯಕ್ಷ ಮುಹಮ್ಮದ್ ಯೂನೂಸ್ ರುಕ್ನುದ್ದೀನ್, ಪ್ರಧಾನ ಕಾರ್ಯದರ್ಶಿ ಶೌಕತ್ ಖತೀಬ್, ಉಡುಪಿ ಯುವ ಅಧ್ಯಕ್ಷ ರೈಯೀಸ್ ಆಹ್ಮದ್, ಉಡುಪಿ ಜಿಲ್ಲಾಧ್ಯಕ್ಷ ಅಬ್ದುಲ್ ಅಝೀರ್, ಯುವ ಮುಖಂಡ ಅಬ್ದುಲ್ ರಝಾಕ್ ಉಡುಪಿ, ಜಿಲ್ಲಾ ಸಮಿತಿಯ ಸೈಯ್ಯದ್ ಅಶ್ರಫ್ ಬರ್ಮಾರ್, ಫಾರೂಖ್ ಮಾಸ್ಟರ್, ಅಬ್ದುಲ್ ಮಜೀದ್ ಕೋಲಾ, ಖಮರುದ್ದೀನ್ ಮಷಾಯಿಖ್, ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.