×
Ad

ಬಾಹ್ಯಾಕಾಶ ಯಾತ್ರೆಯಿಂದ ವಂಶವಾಹಿಗಳಲ್ಲಿ ಬದಲಾವಣೆ : ನಾಸಾ ಅಧ್ಯಯನ

Update: 2017-01-28 20:18 IST

ವಾಶಿಂಗ್ಟನ್, ಜ. 28: ಬಾಹ್ಯಾಕಾಶ ಯಾನವು ಗಗನಯಾತ್ರಿಗಳ ವಂಶವಾಹಿ ಮತ್ತು ಇತರ ಜೈವಿಕ ಲಕ್ಷಣಗಳಲ್ಲಿ ಬದಲಾವಣೆ ಮಾಡಬಹುದಾಗಿದೆ ಎಂದು ನಾಸಾದ ಅವಳಿ-ಜವಳಿಗಳ ಅಧ್ಯಯನವೊಂದು ಕಂಡುಕೊಂಡಿದೆ.

ಬಾಹ್ಯಾಕಾಶದಲ್ಲಿ ಬಹುತೇಕ ಒಂದು ವರ್ಷವನ್ನು ಕಳೆದ ಗಗನಯಾತ್ರಿ ಸ್ಕಾಟ್ ಕೆಲ್ಲಿ ಮತ್ತು ಅವರ ತದ್ರೂಪಿ ಅವಳಿ ಮಾರ್ಕ್‌ರ ನಡುವಿನ ವಂಶವಾಹಿ ಭಿನ್ನತೆಗಳನ್ನು ಅಧ್ಯಯನ ಮಾಡಿದ್ದಾರೆ.

ಸ್ಕಾಟ್ ಕೆಲ್ಲಿಯ ಗಗನಯಾನಕ್ಕಿಂತ ಮುಂಚೆ, ಗಗನಯಾನದ ಅವಧಿಯಲ್ಲಿ ಮತ್ತು ನಂತರ ತೆಗೆದ ಅಳತೆಗಳು ಅವರ ವಂಶವಾಹಿ (ಜೀನ್), ಡಿಎನ್‌ಎ ಮಿತೈಲೇಶನ್ ಮತ್ತು ಇತರ ಜೈವಿಕ ಲಕ್ಷಣಗಳಲ್ಲಿ ಬದಲಾವಣೆಯಾಗಿರುವುದನ್ನು ತೋರಿಸಿವೆ. ಇದಕ್ಕೆ ಅವರು ಕಕ್ಷೆಯಲ್ಲಿ ಸಮಯ ಕಳೆದಿರುವುದು ಕಾರಣವಾಗಿರುವ ಸಾಧ್ಯತೆಯಿದೆ.

‘‘ಅವಳಿಗಳ ಕ್ರೋಮೋಸೋಮ್‌ಗಳ ಉದ್ದದಿಂದ ಹಿಡಿದು ಅವರ ಕರುಳಿನ ಮೈಕ್ರೋಬಯೋಮ್‌ಗಳವರೆಗೆ ಬಹುತೇಕ ಎಲ್ಲ ವಿಷಯಗಳಲ್ಲಿ ಭಿನ್ನತೆಗಳನ್ನು ನಾವು ನೋಡುತ್ತಿದ್ದೇವೆ’’ ಎಂದು ನ್ಯೂಯಾರ್ಕ್ ನಗರದ ವೀಲ್ ಕಾರ್ನೆಲ್ ಮೆಡಿಸಿನ್‌ನಲ್ಲಿ ವಂಶವಾಹಿ ಪರಿಣತನಾಗಿರುವ ಕ್ರಿಸ್ಟೋಫರ್ ಮ್ಯಾಸನ್ ಹೇಳುತ್ತಾರೆ.

ಸ್ಕಾಟ್ ಕೆಲ್ಲಿ 2015-16ರಲ್ಲಿ ಒಂದೇ ಅವಧಿಯಲ್ಲಿ 340 ದಿನಗಳನ್ನು ಕಳೆದಿದ್ದರು. ಒಟ್ಟಾರೆ ಅವರು ಬಾಹ್ಯಾಕಾಶದಲ್ಲಿ ಕಳೆದ ದಿನಗಳು 520.
ಅವರ ಸಹೋದರ ಮಾರ್ಕ್ ಕೆಲ್ಲಿ ಕೂಡ ಗಗನಯಾನಿ ಆಗಿದ್ದು, 2001 ಮತ್ತು 2011ರ ನಡುವಿನ ಅವಧಿಯಲ್ಲಿ ನಾಲ್ಕು ಯಾತ್ರೆಗಳಲ್ಲಿ ಒಟ್ಟು 54 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News