ಬ್ರಹ್ಮಾವರ: ಸಿಎಚ್‌ಸಿಗೆ 9.36 ಕೋಟಿ ರೂ. ಮಂಜೂರು - ಪ್ರಮೋದ್ ಮಧ್ವರಾಜ್
ಉಡುಪಿ, ಜ.28: ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಶಿಫಾರಸಿನ ಮೇರೆಗೆ ಬ್ರಹ್ಮಾವರದಲ್ಲಿ 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರ ಮತ್ತು ಸಿಬ್ಬಂದಿಗಳ ವಸತಿಗೃಹಗಳ ನಿರ್ಮಾಣಕ್ಕೆ 2016-17ನೇ ಸಾಲಿನ ರಾಷ್ಟ್ರೀಯ ಆರೋಗ್ಯ ಅಭಿಯಾನದ ಪಿಐಪಿ (ಪ್ರಾಜೆಕ್ಟ್ ಇಂಪ್ಲಿಮೆಂಟೇಶನ್ ಪ್ಲಾನ್)ಯಲ್ಲಿ ಅನುಮೋದನೆಗೊಂಡು 9.36 ಕೋಟಿ ರೂ.ಗಳ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಮಂಜೂರಾತಿ ಹಾಗೂ ತಾಂತ್ರಿಕ ಮಂಜೂರಾತಿ ದೊರಕಿದೆ.
ಈ ಕಟ್ಟಡದಲ್ಲಿ ನೆಲಮಹಡಿ ಹಾಗೂ ಮೊದಲನೇ ಮಹಡಿಗಳಿದ್ದು ನೆಲಮಹಡಿಯಲ್ಲಿ 862 ಚ.ಮೀ. ಹಾಗೂ ಮೊದಲನೇ ಮಹಡಿಯಲ್ಲಿ 847 ಚ.ಮೀ. ವಿಸ್ತೀರ್ಣವಿರುತ್ತದೆ. ಈ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತುರ್ತು ಚಿಕಿತ್ಸಾ ಘಟಕ, ಹೊರರೋಗಿ ವಿಭಾಗ ಹಾಗೂ 30 ಹಾಸಿಗೆಗಳ ಒಳರೋಗಿ ವಿಭಾಗಗಳಿದ್ದು ವೈದ್ಯರುಗಳ ಕನ್ಸಲ್ಟಿಂಗ್ ಕೊಠಡಿ, ಸುಸಜ್ಜಿತ ಶಸ್ತ್ರಚಿಕಿತ್ಸಾ ಕೊಠಡಿ, ಲ್ಯಾಬೊರೇಟರಿ, ಎಕ್ಸ್‌ರೇ ಕೊಠಡಿ, ದಂತ ಚಿಕಿತ್ಸಾ ಘಟಕ, ಆಯುಷ್ ಚಿಕಿತ್ಸಾ ಘಟಕ, ಪ್ರಸೂತಿ ಹಾಗೂ ಹೆರಿಗೆ ಘಟಕಗಳಿವೆ.
ಇದರ ಕಾಮಗಾರಿಗೆ ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಫೆ.18 ಕೊನೆಯ ದಿನವಾಗಿರುತ್ತದೆ. ಶೀಘ್ರವೇ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಸಚಿವ ಪ್ರಮೋದ್ ಮಧ್ವರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.