×
Ad

ಮಕ್ಕಳಲ್ಲಿ ಜೀವನೋತ್ಸಾಹ, ಶೃದ್ಧೆ ಬೆಳೆಸಿ: ಡಾ.ನಾ.ಮೊಗಸಾಲೆ

Update: 2017-01-28 20:51 IST

ಬಾರಕೂರು, ಜ.28: ಮಕ್ಕಳಲ್ಲಿ ಪ್ರೀತಿಯ ಬದುಕು, ಲವಲವಿಕೆಯ ಜೀವನೋತ್ಸಾಹ, ಶ್ರದ್ಧೆಯನ್ನು ಬೆಳೆಸಬೇಕು. ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿ ನಮಗೆ ನಾವೇ ಪರಕೀಯರಾಗದೆ, ನಮ್ಮ ಶ್ರೀಮಂತ ಸಂಸ್ಕೃತಿಯನ್ನು ಅರಿಯುವ ಕುತೂಹಲ ಮೂಡಿಸಬೇಕು ಎಂದು ಖ್ಯಾತ ಸಾಹಿತಿ ಡಾ.ನಾ.ಮೊಗಸಾಲೆ ಹೇಳಿದ್ದಾರೆ.

 ಬಾರಕೂರಿನ ಸಂಕಮ್ಮ ತಾಯಿ ರೆಸಾರ್ಟ್ಸ್ ಸಭಾಭವನದಲ್ಲಿ ಶನಿವಾರ, ಬಾರಕೂರಿನ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರದ ವತಿಯಿಂದ ಧರ್ಮಸ್ಥಳದ ಶಾಂತಿವನ ಟ್ರಸ್ಟ್, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಳಗಾವಿ, ಮಂಗಳೂರಿನ ರಾಮಕೃಷ್ಣ ಆಶ್ರಮ ಮತ್ತು ಬಾರ್ಕೂರು ಆನ್‌ಲೈನ್ ಡಾಟ್‌ಕಾಮ್‌ಗಳ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದರ 155ನೆಯ ಜಯಂತಿ ಪ್ರಯುಕ್ತ ಉಡುಪಿ ಜಿಲ್ಲಾ ಮಟ್ಟದ ಪ್ರೌಢ ಶಾಲಾ ವಿದ್ಯಾರ್ಥಿ ಗಳಿಗಾಗಿ ಹಮ್ಮಿಕೊಳ್ಳಲಾದ 16ನೇ ವರ್ಷದ ಮಕ್ಕಳ ಸಾಹಿತ್ಯ ಸಮ್ಮೇಳನ ವನ್ನು ಉ್ಘಾಟಿಸಿ ಅವರು ಮಾತನಾಡುತಿದ್ದರು.

ಇಂದಿನ ಶಿಕ್ಷಣ ಪದ್ದತಿಯಲ್ಲಿ ಸೀಮಿತ ಪಠ್ಯ, ಸೀಮಿತ ಜ್ಞಾನದಿಂದ ಮಕ್ಕಳನ್ನು ದ್ವೀಪಗಳನ್ನಾಗಿ ಬೆಳೆಸುತ್ತಿದ್ದೇವೆ. ಬದಲಾಗಿ ಸಂಸ್ಕೃತಿಯ ಚಿತ್ರಣವನ್ನು ಮಕ್ಕಳ ಮುಂದೆ ಪ್ರತಿಬಿಂಬಿಸಿ ಅವರನ್ನು ಹೊರ ಜಗತ್ತಿನತ್ತ ಮುನ್ನಡೆಸಬೇಕು ಎಂದು ಡಾ.ಮೊಗಸಾಲೆ ಹೆತ್ತವರಿಗೆ ಕಿವಿಮಾತು ಹೇಳಿದರು.

ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಕೋಟದ ವಿವೇಕ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಯ ವಿದ್ಯಾರ್ಥಿ ಸ್ವಸ್ತಿಕ್ ಭಂಡಾರಿ ಮಾತನಾಡಿ, ವಿಜ್ಞಾನ ತಂತ್ರಜ್ಞಾನದೊಂದಿಗೆ ಬದಲಾವಣೆಗೆ ತಕ್ಕಂತೆ ಬದುಕುತ್ತಾ ಜೊತೆಜೊತೆಗೆ ನೈತಿಕತೆ, ಮಾನವೀಯ ವೌಲ್ಯಗಳನ್ನು ಗಟ್ಟಿಗೊಳಿಸಿ, ಒಳ್ಳೆಯ ವ್ಯಕ್ತಿತ್ವವನ್ನು ರೂಪಿಸಲು ಸಾಹಿತ್ಯ ನೆರವಾಗುತ್ತದೆ ಎಂದರು.

 ಹಿರಿಯರ ಮಾರ್ಗದರ್ಶನ, ಪರಂಪರೆ, ಸಂಸ್ಕೃತಿಯನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪಾಶ್ಚಾತ್ಯ ಸಂಸ್ಕೃತಿಯ ಬೆನ್ನಿಗೆ ಬೀಳದೇ, ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡು, ಯಕ್ಷಗಾನದಂತಹ ಅದ್ಭುತ ಕಲೆ, ಕನ್ನಡ ಭಾಷೆ, ನುಡಿ ಸಂಸ್ಕೃತಿ, ಕುವೆಂಪು, ಬೇಂದ್ರೆ, ರನ್ನ, ಪಂಪರಂತಹ ಕವಿಗಳ ಸಾಹಿತ್ಯವನ್ನು ಮನದಲ್ಲಿಟ್ಟುಕೊಂಡು ಅವುಗಳನ್ನು ಉಳಿಸಿ ಬೆಳೆಸುವ ಪ್ರಯತವನ್ನು ವಿದ್ಯಾರ್ಥಿಗಳು ಮಾಡಬೇಕು ಎಂದರು. ಬ್ರಹ್ಮಾವರ ರೋಟರಿ ಅಧ್ಯಕ್ಷ ಹಾಗೂ ರಂಗನಟ, ನಿರ್ದೇಶಕ ಆಲ್ವಿನ್ ಆಂದ್ರಾದೆ ಮಕ್ಕಳ ಸ್ವರಚಿತ ಕವನಸಂಕಲನ ಬಿಡುಗಡೆಗೊಳಿಸಿದರು. ಸಮಾರಂಭ ದಲ್ಲಿ ಶಾಂತಿವನ ಟ್ರಸ್ಟ್‌ನ ಕಾರ್ಯದರ್ಶಿ ಬಿ.ಸೀತಾರಾಮ ತೋಳ್ಪಾಡಿತ್ತಾಯ, ಯೋಗ ನಿರ್ದೇಶಕ ಐ.ಶಶಿಕಾಂತ್ ಜೈನ್, ಮಟಪಾಡಿ ಶ್ರೀನಿಕೇತನ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಅಶೋಕ್ ಕುಮಾರ್ ಶೆಟ್ಟಿ, ನಿವೃತ್ತ ಜಿಲ್ಲಾ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ವಸಂತ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಜಿಲ್ಲಾ ಕಸಾಪದ ಮಾಜಿ ಕೋಶಾಧಿಕಾರಿ ಭುವನಪ್ರಸಾದ್ ಹೆಗ್ಡೆ, ಬ್ರಹ್ಮಾವರ ವಲಯದ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಭುಜಂಗ ಶೆಟ್ಟಿ, ಪ್ರಧಾನ ಸಂಘಟಕ ರಾಮಭಟ್ಟ ಸಜಂಗದ್ದೆ, ಸಮಿತಿಯ ಬಿ.ಶ್ರೀನಿವಾಸ ಶೆಟ್ಟಿಗಾರ್, ಅಶೋಕ್ ಸಿ. ಪೂಜಾರಿ, ಬಿ.ಗುರುರಾಜ್ ರಾವ್ ಮತ್ತಿತರರು ಉಪಸ್ಥಿತರಿದ್ದರು.

ಅಹಲ್ಯಾ ಸ್ವಾಗತಿಸಿ, ಸುಶ್ಮಿತಾ ವಂದಿಸಿದರು. ನವ್ಯ, ಮಂಥನ್ ಮತ್ತು ಪ್ರಕಾಶ್ ಆಚಾರ್ಯ ವಡ್ಡರ್ಸೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News