ವಾರ್ಷಿಕ ಮಹಾಸಭೆ
ಬಂಟ್ವಾಳ, ಜ. 28: ರಾಜ್ಯದಲ್ಲಿ ಅರಣ್ಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿವಿಧ ಬೇಡಿಕೆಗಳ ಪೈಕಿ ಆಯ್ದುಕೊಂಡು ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಭರವಸೆ ನೀಡಿದ್ದಾರೆ.
ತಾಲೂಕಿನ ಬಿ.ಸಿ.ರೋಡ್‌ನಲ್ಲಿ ರಾಜ್ಯ ಉಪ ವಲಯ ಅರಣ್ಯಾಧಿಕಾರಿಗಳ ಸಂಘದ ವತಿಯಿಂದ ಶನಿವಾರ ನಡೆದ ವಾರ್ಷಿಕ ಮಹಾಸಭೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂಘದ ಅಧ್ಯಕ್ಷ ಮಹಾಬಲ ಡಿ. ಎಸ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಪ್ಪತ್ತು ವರ್ಷಗಳಿಂದ ಅರಣ್ಯ ಅಧಿಕಾರಿಗಳಿಗೆ ಯಾವುದೇ ಮುಂಭಡ್ತಿ ಇಲ್ಲದೆ ನಿರಾಶೆ ಹೊಂದಿದ್ದಾರೆ. ಈ ತಾರತಮ್ಯ ಹೋಗಲಾಡಿಸಿ ಮೂಲ ವೇತನವನ್ನು ವಿದ್ಯಾರ್ಹತೆ ಮತ್ತು ಕೆಲಸದ ಪ್ರಮಾಣ ಆಧರಿಸಿ ಹೆಚ್ಚಳಗೊಳಿಸಬೇಕು ಎಂದರು. ಇದೇ ವೇಳೆ ಇಲಾಖೆಯಲ್ಲಿ ದುಡಿದು ನಿವೃತ್ತಿಗೊಂಡ ಕೆ.ಕೃಷ್ಣಪ್ಪ ಪಿ., ಎಂ.ಕರಿಯಪ್ಪ, ಪಂಜ ಶಿವಪ್ಪ ಧನದ, ಕೆ.ಪುರಂದರ ಭಟ್ ಮಂಗಳೂರು, ಎಂ.ಎಂ.ಯೂಸುಫ್ ಇವರನ್ನು ಸನ್ಮಾನಿಸಲಾಯಿತು.
ಗೇರು ಅಭಿವೃದ್ದಿ ನಿಗಮ ಅಧ್ಯಕ್ಷ ಬಿ.ಎಚ್.ಖಾದರ್, ಮಂಗಳೂರು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಸಂಜಯ್ ಎಸ್. ಬಿಜೂರ್, ಬಂಟ್ವಾಳ ಲಯನ್ಸ್ ಕ್ಲಬ್ ಕಾರ್ಯದರ್ಶಿ ಅಶೋಕ ಆಚಾರ್ಯ ಮಾತನಾಡಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕೆ.ಟಿ.ಹನುಮಂತಪ್ಪ ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ಪ್ರಕಾಶ್ ಬಿ.ಟಿ. ಸ್ವಾಗತಿಸಿ, ಉಪಾಧ್ಯಕ್ಷ ಶಿವಾನಂದ ಆಚಾರ್ಯ ವಂದಿಸಿದರು. ಪತ್ರಕರ್ತ ಗೋಪಾಲ ಅಂಚನ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮ ಬಳಿಕ ಉರಗತಜ್ಞ ಕಿರಣ್ ಪಿಂಟೊರಿಂದ ಮಾಹಿತಿ ಕಾರ್ಯಾಗಾರ ನಡೆಯಿತು.