×
Ad

ನಾಳೆ ‘ದೆಂಜಿಪ್ಪಾಡಿ ಪುನರ್ವಸತಿ ಕೇಂದ್ರ’ದ ಉದ್ಘಾಟನೆ

Update: 2017-01-29 00:10 IST

ಬಂಟ್ವಾಳ, ಜ.28: ನಿವೃತ್ತ ಮುಸ್ಲಿಮ್ ಅಧಿಕಾರಿಗಳ ಸಂಘ ಮಂಗಳೂರು ಇದರ ಯೋಜನೆಯಂತೆ ಅವಿಭಜಿತ ದ.ಕ. ಜಿಲ್ಲೆಯಲ್ಲೇ ಮೊದಲ ಬಾರಿಗೆ ಮುಸ್ಲಿಮ್ ವೃದ್ಧರ ಪಾಲನೆಗಾಗಿ ತಾಲೂಕಿನ ಪಾಣೆಮಂಗಳೂರಿನ ಆಲಡ್ಕದಲ್ಲಿ ಸಜ್ಜುಗೊಂಡಿರುವ ‘ದೆಂಜಿಪ್ಪಾಡಿ ಪುನರ್ವಸತಿ ಕೇಂದ್ರ’ ಜ.30ರಂದು ಉದ್ಘಾಟನೆಗೊಳ್ಳಲಿದೆ. ಆಲಡ್ಕದಲ್ಲಿರುವ ದೆಂಜಿಪ್ಪಾಡಿ ಕುಟುಂಬಕ್ಕೆ ಸೇರಿದ 20 ಸೆಂಟ್ಸ್ ಜಮೀನು ಹಾಗೂ ಮನೆಯನ್ನು ಧಾರ್ಮಿಕ ಸೇವೆಗಾಗಿ ಈ ಹಿಂದೆಯೇ ವಕ್ಫ್ ಮಾಡಲಾಗಿತ್ತು. ಈ ಮನೆಯಲ್ಲಿ ಮುಸ್ಲಿಮ್ ವೃದ್ಧರ ಪಾಲನಾ ಕೇಂದ್ರ ತೆರೆಯಲು ನಿವೃತ ಮುಸ್ಲಿಮ್ ಅಧಿಕಾರಿಗಳ ಸಂಘದ ಹಾಲಿ ಉಪಾಧ್ಯಕ್ಷರಾಗಿರುವ ದೆಂಜಿಪ್ಪಾಟಿ ಮನೆತನದ ಹಾಜಿ ಅಬ್ದುಲ್ ಖಾದರ್ ಅನುಮತಿ ನೀಡಿದ್ದಾರೆ. ‘ದೆಂಜಿಪ್ಪಾಡಿ ಪುನರ್ವಸತಿ ಕೇಂದ್ರ’ವನ್ನು ಜ.30ರಂದು ಬೆಳಗ್ಗೆ 10ಕ್ಕೆೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಲಿದ್ದಾರೆ. ದ.ಕ. ಜಿಲ್ಲಾ ಖಾಝಿ ಅಹ್ಮದ್ ಮುಸ್ಲಿಯಾರ್ ದುಆ ನೆರವೇರಿಸಲಿದ್ದಾರೆ.

ಸಚಿವ ಯು.ಟಿ.ಖಾದರ್, ಸರಕಾರದ ಮುಖ್ಯ ಸಚೇತಕ ಐವನ್ ಡಿಸೋಜ, ಸಂಸದ ನಳಿನ್ ಕುಮಾರ್ ಕಟೀಲು, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ವೈ.ಅಬ್ದುಲ್ಲಾ ಕುಂಞಿ ಹಾಗೂ ಧಾರ್ಮಿಕ, ಸಾಮಾಜಿಕ ಮುಖಂಡರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಸ್ಥೆ 50 ವರ್ಷ ದಾಟಿದ ದುರ್ಬಲ, ಬಡ, ನಿರ್ಗತಿಕ, ಅನಾಥ ಮುಸ್ಲಿಮ್ ವೃದ್ಧರನ್ನು ಸಂರಕ್ಷಣೆ ಮಾಡುವ ಉದ್ದೇಶವನ್ನು ಹೊಂದಿದೆ. ಇದಕ್ಕಾಗಿ ಉತ್ತಮ ಆಡಳಿತಾಧಿಕಾರಿ, ವೈದ್ಯರು, ಪುರುಷ ದಾದಿಯರು, ಆಯಾಗಳು, ಬಾಣಸಿಗ, ಕಾವಲುಗಾರರು, ಸ್ವಚ್ಛತಾಗಾರರು ಮತ್ತು ಮೇಲ್ವಿಚಾರಕರನ್ನೊಳಗೊಂಡ ಉತ್ತಮ ಆಡಳಿತ ಸಿಬ್ಬಂದಿಯನ್ನು ನೇಮಿಸಲಿದೆ. ಜಮಾಅತ್‌ಆಡಳಿತ ಮಂಡಳಿ ಮತ್ತು ಸ್ವಯಂ ಸೇವಾ ಸಂಸ್ಥೆಗಳು ತಮ್ಮ ಜಮಾಅತ್ ವ್ಯಾಪ್ತಿಯಲ್ಲಿರುವ ಅನಾಥ, ನಿರ್ಗತಿಕ ವೃದ್ಧ(ಪುರುಷ)ರನ್ನು ಈ ಕೇಂದ್ರಕ್ಕೆ ದಾಖಲಿಸಬಹುದಾಗಿದೆ. ‘ದೆಂಜಿಪ್ಪಾಡಿ ಪುನರ್ವಸತಿ ಕೇಂದ್ರ’ದಲ್ಲಿ ದಾಖಲಾಗುವ ವೃದ್ಧರಿಗೆ ಸಕಲ ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗುವುದರಿಂದ ಕೇಂದ್ರದ ಖರ್ಚು ವೆಚ್ಚವನ್ನು ಕ್ರೋಡೀಕರಿಸಲು ಸಂಸ್ಥೆಯು ದಾನಿಗಳ ಸಹಕಾರವನ್ನು ಬಯಸಿದೆ.

ದೇಣಿಗೆ ನೀಡಲು ಇಚ್ಛಿಸುವವರು ್ಕRetired Muslim officials Association (R) Mangalore, ಹೆಸರಿಗೆ ಡಿ.ಡಿ. ಅಥವಾ ಚೆಕ್‌ಗಳನ್ನು ಕಳುಹಿಸಬಹುದು. ಇಲ್ಲವೆ ನೇರವಾಗಿ ಸಂಘದ ಉಳಿತಾಯ ಖಾತೆ ಸಂಖ್ಯೆ 05960101011124, ಕಾರ್ಪೊರೇಶನ್ ಬ್ಯಾಂಕ್, ಕದ್ರಿ CPB ಶಾಖೆ, ಮಂಗಳೂರು, IFSC CODE: CORP0000596, MICR CODE: 575017016 ಇದಕ್ಕೆ ಜಮಾಯಿಸಬಹುದು ಎಂದು ಸಂಸ್ಥೆಯ ಅಧ್ಯಕ್ಷ ಝಾಹಿದ್ ಹುಸೈನ್ ಹಾಜಿ ಮತ್ತು ಪ್ರಧಾನ ಕಾರ್ಯದರ್ಶಿ ಕೋರಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಮೊ.ನಂ.: 7760470344, 9845249369ರನ್ನು ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News