×
Ad

‘ಧಾರ್ಮಿಕತೆಯ ಹೆಸರಿನಲ್ಲಿ ವಿಷಬೀಜ ಬಿತ್ತುವ ಕಾರ್ಯ ಅಪಾಯಕಾರಿ’

Update: 2017-01-29 00:21 IST

ಬೆಳ್ತಂಗಡಿ(ಮಂಜಯ್ಯಹೆಗ್ಗಡೆ ವೇದಿಕೆ), ಜ.28: ಇತಿಹಾಸದ ಘಟನೆಗಳಿಗೆ, ವ್ಯಕ್ತಿಗಳಿಗೆ ಧಾರ್ಮಿಕ ನೆಲೆಯಲ್ಲಿ, ಧಾರ್ಮಿಕತೆಯ ಹೆಸರಿನಲ್ಲಿ ವಿಷಬೀಜ ಬಿತ್ತುವ ಕಾರ್ಯ ನಡೆಯುತ್ತಿದ್ದು ಇದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ನಿವೃತ್ತ ಪ್ರಾಧ್ಯಾಪಕ ಡಾ.ಪುಂಡಿಕ್ಯಾ ಗಣಪಯ್ಯ ಭಟ್ ಹೇಳಿದರು.

ಅವರು ಉಜಿರೆಯಲ್ಲಿ ನಡೆಯುತ್ತಿರುವ 21ನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆಶಯಗೋಷ್ಠಿಯಲ್ಲಿ ಸ್ವಚ್ಛಸಮಾಜ ವಿಚಾರದ ಬಗ್ಗೆ ಮಾತನಾಡುತ್ತಾ ಈ ವಿಚಾರಗಳನ್ನು ಹಂಚಿಕೊಂಡರು. ನೂರಾರು ವರ್ಷಗಳ ಹಿಂದಿನ ವ್ಯಕ್ತಿಯನ್ನು ಇಂದಿನ ಮಟ್ಟಕ್ಕೆ ತಂದು ನಿಲ್ಲಿಸಿ ಧರ್ಮಗಳ ನೆಲೆಯಲ್ಲಿ ವಿಚಾರಣೆ ನಡೆಸಿ ತೀರ್ಪು ನೀಡುವುದು ಮೂರ್ಖತನವಾಗುತ್ತದೆ ಎಂದರು.

ಇಂದು ನಮ್ಮ ಸಮಾಜ ಕಲುಷಿತವಾಗುತ್ತಿರುವುದಕ್ಕೆ ಪರರ ವಿಚಾರಗಳಿಗೆ ಗೌರವ ಕೊಡದಿರುವುದು ಹಾಗೂ ಪರಧರ್ಮಗಳನ್ನು ಗೌರವಿಸದಿರುವುದೇ ಕಾರಣವಾಗಿದೆ. ನಮ್ಮ ಸುಶಿಕ್ಷಿತ ಸಮುದಾಯದಲ್ಲಿ ಈ ಅಸಹನೆ ಅತ್ಯಂತ ಹೆಚ್ಚಾಗಿ ಬೆಳೆಯುತ್ತಿದೆ. ಇತರರ ಚಿಂತನೆಗಳಿಗೆ ಅವಕಾಶವೇ ಇಲ್ಲ ಎಂಬ ರೀತಿಯಲ್ಲಿ ತಮ್ಮ ವಿಚಾರಗಳನ್ನು ಇತರರ ಮೇಲೆ ಹೇರುವ ಪ್ರವೃತ್ತಿ ಬೆಳೆಯುತ್ತಿದೆ. ಈ ಬಗ್ಗೆ ಜನ ಜಾಗೃತರಾಗಬೇಕಾಗಿದೆ ಎಂದರು.

 ಸಣ್ಣ ಘಟನೆಗಳನ್ನು ಮುಂದಿಟ್ಟುಕೊಂಡು ಇಡೀ ಸಮಾಜವೇ ಹಾಳಾಗಿದೆ ಎಂದು ಹೇಳುವ ಪ್ರವೃತ್ತಿ ಬೆಳೆಯುತ್ತಿದೆ. ಹಿಂದಿನದೆಲ್ಲವೂ ಒಳ್ಳೆಯದು ಈಗಿನದೆಲ್ಲವೂ ಹಾಳಾಗಿದೆ ಎಂಬ ಧ್ವನಿಯಲ್ಲಿ ಮಾತನಾಡುತ್ತಿರುತ್ತಾರೆ. ಆದರೆ ಅಂದಿನ ವ್ಯವಸ್ಥೆಯಲ್ಲಿ ಇದ್ದ ಮೌಲ್ಯಗಳು ಇಂದು ಹೇಗೆ ಪ್ರಸ್ತುತ ಎಂದು ಚಿಂತಿಸಬೇಕಾಗಿದೆ. ಅಂದಿನ ಅವಿಭಕ್ತಕುಟುಂಬ ಇಂದಿನ ದಿನದಲ್ಲಿ ಹೇಗೆ ಇರಲು ಸಾಧ್ಯ ಎಂದು ಚಿಂತಿಸಿದಾಗ ಬದಲಾವಣೆಗಳು ಹೇಗೆ ಅನಿವಾರ್ಯ ಎಂದು ತಿಳಿಯಲು ಸಾಧ್ಯ ಎಂದರು.

ಪರಿಪೂರ್ಣ ಸ್ವಚ್ಛ ಸಮಾಜ ಎಂಬುದು ಒಂದು ಕಲ್ಪನೆ ಮಾತ್ರ ಅದು ಎಂದೂ ಕಾರ್ಯರೂಪಕ್ಕೆ ಬರಲು ಸಾಧ್ಯವಿಲ್ಲ ಅಂದಿನ ಸಮಾಜವೂ ಪೂರ್ಣ ಸ್ವಚ್ಛವಾಗಿಲ್ಲದ ಕಾರಣದಿಂದಾಗಿಯೇ ಬುದ್ಧ, ಕ್ರೈಸ್ತ, ಮಹಾವೀರ, ವಿವೇಕಾನಂದರು ಆಗಾಗಿನ ಕಾಲದಲ್ಲಿ ಹುಟ್ಟಿಬಂದರು ಎಂದು ವಿವರಿಸಿದರು.

ಭಾಷೆಯ ಸ್ವಚ್ಛತೆಯ ಬಗ್ಗೆ ಮಾತನಾಡಿದ ಡಾ.ಸತ್ಯನಾರಾಯಣ ಮಲ್ಲಿಪಟ್ಟಣ, ಮನಸ್ಸುಗಳನ್ನು ಘಾಸಿಗೊಳಿಸದೆ ಮಾತನಾಡುವ ಭಾಷೆಯೇ ಸ್ವಚ್ಛ ಭಾಷೆಯಾಗಿದೆ. ಕೇವಲ ಬಹಿರಂಗ ಶುದ್ಧಿಗೆ ಪ್ರಾಮುಖ್ಯತೆಯನ್ನು ನೀಡದೆ ಅಂತರಂಗಶುದ್ಧ್ದಿಗೆ ಮಹತ್ವ ನೀಡಬೇಕಾಗಿದೆ. ಕನ್ನಡದ ಒಳಗೆ ಅನಗತ್ಯವಾಗಿ ಸೇರ್ಪಡೆಯಾಗುತ್ತಿರುವ ಇಂಗ್ಲಿಷ್ ಪದಗಳು ಭಾಷೆಯನ್ನು ಕಲುಷಿತಗೊಳಿಸುತ್ತಿದೆ. ಕನ್ನಡವನ್ನು ನಿರಾಕರಿಸುವ ಪ್ರವೃತ್ತಿ ಇಂದು ಎಲ್ಲೆಡೆ ಬೆಳೆಯುತ್ತಿದೆ ಹೈಬ್ರಿಡ್ ಕನ್ನಡ, ಹೈಟೆಕ್ ಕನ್ನಡಗಳು ಕಂಗ್ಲಿಷ್ ಭಾಷೆಗಳು ಇಂದು ಎಲ್ಲೆಡೆ ರಾರಾಜಿಸುತ್ತಿದೆ ಇದು ಭಾಷೆ ಎದುರಿಸುತ್ತಿರುವ ದುರಂತವಾಗಿದೆ ಎಂದರು.

  

ಕನ್ನಡ ಚಾನೆಲ್‌ಗಳಲ್ಲಿ ಬರುವ ನಿರೂಪಕರು ಸಿನೆಮಾ, ಕ್ರೀಡಾ ವರದಿಗಳು ಚಾನೆಲ್‌ಗಳಲ್ಲಿ ಬರುವ ಸಿನೆಮಾ ತಾರೆಯರು ಇಂಗ್ಲಿಷ್ ತುಂಬಿರುವ ಕನ್ನಡದಲ್ಲಿ ಮಾತನಾಡುತ್ತಾರೆ. ನಮ್ಮ ಕನ್ನಡದಲ್ಲಿ ಶಬ್ದಗಳೇ ಇಲ್ಲವೇನೋ ಎಂದು ಭಾವಿಸಬೇಕಾದ ಸ್ಥಿತಿಯಿದೆ. ಆದರೆ ನಮ್ಮ ಕನ್ನಡದಲ್ಲಿ ವಿಶ್ವದ ಯಾವುದೇ ವಿಚಾರಗಳ ಬಗ್ಗೆ ಕನ್ನಡದಲ್ಲಿ ಹೇಳಲು ಸಾಧ್ಯವಿದೆ. ಅದಕ್ಕೆ ವಿಷಯದ ಜ್ಞ್ಞಾನ ಹಾಗೂ ಭಾಷೆಯ ಮೇಲಿನ ಹಿಡಿತ ಅಗತ್ಯವಾಗಿದೆ. ಈಗ ಕನ್ನಡದಲ್ಲಿ ಕನ್ನಡ ಶಬ್ದಗಳನ್ನು ಹುಡುಕಬೇಕಾದ ಕಾಲ ಬಂದಿದೆ. ಇನ್ನಾದರೂ ನಾವು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.

ಶಕುಂತಳಾ ಆರ್ ಕಿಣಿ ಸ್ವಚ್ಛ ಜೀವನದ ಬಗ್ಗೆ ಮಾತನಾಡಿದರು. ಗೋಷ್ಠಿಯ ಅಧ್ಯಕ್ಷತೆಯನು ಶಿವರಾಮ ಶಿಶಿಲ ವಹಿಸಿದ್ದರು. ಲಕ್ಷ್ಮೀ ಮಚ್ಚಿನ ಕಾರ್ಯ್ರಮ ನಿರೂಪಿಸಿದರು, ಅಶ್ರಫ್ ಅಲಿಕುಂಞಿ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News