ಹಗಲು ಕಾಂಗ್ರೆಸ್ ರಾತ್ರಿ ಆರೆಸ್ಸೆಸ್ಸಿಗರಾಗುವವರು ಬೇಕಿಲ್ಲ: ಎ.ಕೆ. ಆಂಟನಿ
Update: 2017-01-29 11:32 IST
ತಿರುವನಂತಪುರಂ, ಜ. 29: ಕೇರಳದ ಕಾಂಗ್ರೆಸ್ ನಾಯಕರಿಗೆ ಎ.ಕೆ. ಆಂಟನಿ ಕಟುವಾದ ಎಚ್ಚರಿಕೆ ರವಾನಿಸಿದ್ದಾರೆ. ಹಗಲು ಕಾಂಗ್ರೆಸ್ ರಾತ್ರಿ ಆರೆಸ್ಸೆಸ್ಸಿಗರಾಗುವವರು ಪಕ್ಷಕ್ಕೆ ಅಗತ್ಯವಿಲ್ಲ ಎಂದು ಕೆಪಿಸಿಸಿ ಕಾರ್ಯಕಾರಿಣಿಯಲ್ಲಿ ಅವರು ಹೇಳಿದ್ದಾರೆ.
ದೃಢವಾದ ಜಾತ್ಯತೀತ ಮುಖ ಇರುವವರು ಮಾತ್ರ ಕಾಂಗ್ರೆಸ್‌ಗೆ ಅಗತ್ಯವಿದೆ. ಕಾಲಿನ ಅಡಿಯ ಮಣ್ಣು ಎತ್ತುವ ಕೆಲಸ ಬಿಜೆಪಿಯಿಂದ ಆಗುತ್ತಿದೆ. ಅದನ್ನು ಎದುರಿಸುವ ಶಕ್ತಿ ತೋರಿಸಬೇಕೆಂದು ಆಂಟನಿ ಆಗ್ರಹಿಸಿದರು.
ನಾಯಕರು ಪರಸ್ಪರ ಕಚ್ಚಾಡುತ್ತಿದ್ದರೆ ಪಕ್ಷ ದುರ್ಬಲವಾಗುತ್ತದೆ. ಪಕ್ಷ ಇಲ್ಲದಿದ್ದರೆ ಯಾರೂ ಇಲ್ಲ. ಪಕ್ಷದಿಂದ ಹೊರಗೆ ಹೋದರೆ ನಾವು ಯಾರೂ ಅಲ್ಲ ಎಂದು ಆಂಟನಿ ನೆನಪಿಸಿದರು. ಉಮ್ಮನ್ ಚಾಂಡಿ ಭಾಗವಹಿಸಿದ್ದ ಸಭೆಯಲ್ಲಿ ಆಂಟನಿ ಈ ವಿಮರ್ಶೆ ಮಾಡಿದ್ದಾರೆ.
ಯುವಜನ ವಿದ್ಯಾರ್ಥಿ ನಾಯಕರು ಹೇಳಿಕೆಗಳಲ್ಲಿ ಬದುಕುತ್ತಿದ್ದಾರೆ. ತಪ್ಪನ್ನು ಎದುರಿಸುವ ಶಕ್ತಿಯನ್ನು ಯುವಕರು ತೋರಿಸಬೇಕೆಂದು ಆಂಟನಿ ಕರೆನೀಡಿದ್ದಾರೆಂದು ವರದಿ ತಿಳಿಸಿದೆ.