ಕೋಡಿಂಬಾಡಿ: ನೂತನ ಮಸೀದಿ ಉದ್ಘಾಟನೆ
ಪುತ್ತೂರು, ಜ.29: ಪುತ್ತೂರು ಸಮೀಪ ಕೋಡಿಂಬಾಡಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಮಸೀದಿಯ ಉದ್ಘಾಟನಾ ಕಾರ್ಯಕ್ರಮವು ಜ.27 ರಂದು ನಡೆಯಿತು.
ಮೂಡಿಗೆರೆ ಖಾಝಿಯವರಾದ ಎಂ.ಕಾಸಿಂ ಮುಸ್ಲಿಯಾರ್ ಇವರ ನೇತೃತ್ವದಲ್ಲಿ ಜುಮಾ ಖುತುಬ ಪಾರಾಯಣ ನಡೆಯಿತು. ಮಂಗಳೂರು ಖಾಝಿ ತ್ವಾಖ ಅಹ್ಮದ್ ಮುಸ್ಲಿಯಾರ್ ಜುಮಾ ನಮಾಝ್ ಗೆ ನೇತೃತ್ವ ವಹಿಸಿದ್ದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಕಟ್ಟಡ ಸಮಿತಿ ಗೌರವಾಧ್ಯಕ್ಷ ಕೆಂಪಿ ಮುಸ್ತಫಾ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭಾರತ ಸರ್ವಧಮೀರ್ಯರ ದೇಶವಾಗಿದ್ದು, ಇಲ್ಲಿ ಕೋಮು ಸೌಹಾರ್ದ ಕಾಪಾಡುವುದು ಎಲ್ಲರ ಕರ್ತವ್ಯವಾಗಿದೆ. ಇಲ್ಲಿ ಕೆಲವು ಕೋಮುಶಕ್ತಿಗಳು ಸೌಹಾರ್ದವನ್ನು ಕೆಡಿಸಲು ಪ್ರಯತ್ನ ಮಾಡುತ್ತಿದೆ ಇದರ ವಿರುದ್ಧ ಹೋರಾಟ ಅನಿವಾರ್ಯ ಎಂದರು.
ನಂತರ ಮಾತನಾಡಿದ ಮಂಗಳೂರು ಖಾಝಿ, ಸೌಹಾರ್ದದಿಂದ ಬಾಳಿದರೆ ಬಲಿಷ್ಠ ಭಾರತ ಕಟ್ಟಲು ಸಾಧ್ಯವಿದೆ ಯಾವ ಧರ್ಮವು ಹಿಂಸೆಯನ್ನು ಪ್ರತಿಪಾದಿಸುವುದಿಲ್ಲ. ಮಸೀದಿ ಮಂದಿರಗಳು ಮಾನವೀಯ ಮೂಲ್ಯಗಳನ್ನು ಒಗ್ಗೂಡಿಸುವ ತಾಣವಾಗಿದೆ ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಉದ್ಯಮಿ ಅಶೋಕ್ ಕುಮಾರ್ ರೈ ಶುಭಾಷಯದ ಮಾತುಗಳನ್ನಾಡಿದರು.
ಹಲವಾರು ವರ್ಷಗಳಿಂದ ಖತೀಬರಾಗಿ ಸೇವೆ ಸಲ್ಲಿಸುತ್ತಿರುವ ಕೆ.ಎಂ.ಎ ಕೊಡುಂಗಾಯ್ ಉಸ್ತಾದ್ ಹಾಗೂ ಕೆಂಪಿ ಮುಸ್ತಫಾ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಹಲವಾರು ಹಿಂದೂ ಮುಖಂಡರು ಮತ್ತು ಭಾಂಧವರು ಭಾಗವಹಿಸಿದ್ದು ಊರಿನ ಸೌಹಾರ್ದತೆಗೆ ಸಾಕ್ಷಿಯಾಯಿತು.