ಮಂಗಳೂರು: ವಿದ್ಯುತ್ ಅವಘಡ , ಪತಿ-ಪತ್ನಿ ಸಹಿತ ಮೂವರು ಮೃತ್ಯು
ಮಂಗಳೂರು, ಜ.29: ರಾ.ಹೆ.66ರ ಉಜ್ಜೋಡಿ-ಗೋರಿಗುಡ್ಡ ಎಂಬಲ್ಲಿ ರವಿವಾರ ಮಧ್ಯಾಹ್ನ ಸಂಭವಿಸಿದ ವಿದ್ಯುತ್ ಅವಘಡವೊಂದರಲ್ಲಿ ಪತಿ ಮತ್ತು ಪತ್ನಿ ಸಹಿತ ಮೂವರು ಮೃತಪಟ್ಟಿದ್ದಾರೆ.
ಉಜ್ಜೋಡಿ-ಗೋರಿಗುಡ್ಡದ ‘ಯೇಸುಕೃಪ’ ನಿವಾಸಿಗಳಾದ ವಲೇರಿಯನ್ ಲೋಬೊ (55) ಮತ್ತವರ ಪತ್ನಿ ಹೆಝ್ಮಿ ಲೋಬೊ (51) ಹಾಗು ಮೂಡುಬಿದಿರೆ ನಿವಾಸಿ ಸಂದೀಪ್ (28) ಮೃತಪಟ್ಟವರು.
ವಲೇರಿಯನ್ ಲೋಬೊ ಎನ್‌ಎಂಪಿಟಿಯಲ್ಲಿ ಎಸಿ ಮೆಕಾನಿಕ್ ಹಾಗು ಹೆಝ್ಮಿ ಲೋಬೊ ಸ್ಕೂಲ್ ಆಫ್ ರೋಶನಿ ನಿಲಯದ ಫ್ಯಾಮಿಲಿ ಕೌನ್ಸಿಲಿಂಗ್ ಸೆಂಟರ್‌ನ ಉದ್ಯೋಗಿಯಾಗಿದ್ದರೆ, ಸಂದೀಪ್ ಗೋರುಗುಡ್ಡದ ಗುರುಪ್ರಸಾದ್ ಹೊಟೇಲ್‌ನಲ್ಲಿ ಅಡುಗೆಯಾಳಾಗಿದ್ದರು.
ವಲೇರಿಯನ್-ಹೆಝ್ಮಿ ಲೋಬೊ ದಂಪತಿಗೆ ಇಬ್ಬರು ಮಕ್ಕಳು. ಮಗಳು ನಿಶಾ ಲೋಬೊ (21) ಮಣಿಪಾಲದಲ್ಲಿ ಎಂ ಫಾರ್ಮಾ ವ್ಯಾಸಂಗ ಮಾಡುತ್ತಿದ್ದರೆ, ಮಗ ನಿಖಿಲ್ ಲೋಬೊ (19) ಕೋಯಂಬತ್ತೂರಿನಲ್ಲಿ ಕಲಿಯುತ್ತಿದ್ದಾರೆ. ಮೂಡುಬಿದಿರೆಯ ಮಾರೂರು ನಿವಾಸಿಯಾಗಿರುವ ಸಂದೀಪ್ ಕಳೆದ ಐದಾರು ವರ್ಷದಿಂದ ಹೊಟೇಲ್‌ನಲ್ಲಿ ಅಡುಗೆಯಾಳಾಗಿದ್ದರು. ಅವಿವಾಹಿತರಾಗಿದ್ದ ಇವರು ಮದುವೆಯ ಸಿದ್ಧತೆಯಲ್ಲಿದ್ದರು ಎನ್ನಲಾಗಿದೆ.
ಘಟನೆಯ ವಿವರ:
ವಲೇರಿಯನ್ ಲೋಬೊರ ಕೋರಿಕೆಯ ಮೇರೆಗೆ ಮನೆಪಕ್ಕದ ಹೊಟೇಲ್‌ನ ಅಡುಗೆಯಾಳಾದ ಸಂದೀಪ್ ಎಂಬವರು ರವಿವಾರ ಮಧ್ಯಾಹ್ನ ಸುಮಾರು 12:30ಕ್ಕೆ ಕಾಳುಮೆಣಸಿನ ಬಳ್ಳಿ ಹಬ್ಬಿದ್ದ ತೆಂಗಿನಮರಕ್ಕೆ ಹಗ್ಗದಲ್ಲಿ ಕಟ್ಟಿದ್ದ ಎರಡು ಕಬ್ಬಿಣದ ಏಣಿಯನ್ನಿಟ್ಟು ಕಾಳುಮೆಣಸನ್ನು ಕೊಯ್ಯುತ್ತಿದ್ದರು. ವಲೇರಿಯನ್ ಲೋಬೊ ಕೆಳಗೆ ನಿಂತು ಏಣಿಯನ್ನು ಹಿಡಿದುಕೊಂಡಿದ್ದರು. ಅಷ್ಟರಲ್ಲಿ ಹಗ್ಗ ಸಡಿಲಗೊಂಡು ವಾಲಿದ ಏಣಿ ತೆಂಗಿನಮರದ ಕೆಳಗೆ ಹಾದು ಹೋಗಿದ್ದ ವಿದ್ಯುತ್ ತಂತಿಯ ಮೇಲೆ ಬಿತ್ತು. ಈ ಅವಘಡದಿಂದ ಸಂದೀಪ್ ಮತ್ತು ವಲೇರಿಯನ್ ಲೋಬೊರ ಮೇಲೆ ವಿದ್ಯುತ್ ಹರಿಯಿತು. ಇಬ್ಬರ ಬೊಬ್ಬೆ ಕೇಳಿ ಅಲ್ಲೇ ಇದ್ದ ಹೆಝ್ಮಿ ಲೋಬೊ ಇಬ್ಬರನ್ನು ಪಾರು ಮಾಡಲು ಮುಂದಾದರು. ಹೆಝ್ಮಿ ತನ್ನ ಪತಿಯ ಕಾಲುಹಿಡಿದು ಎಳೆಯುವ ಪ್ರಯತ್ನ ಮಾಡಿದ್ದರು. ಈ ದುರ್ಘಟನೆ ನಡೆಯುವಾಗ ಅಕ್ಕಪಕ್ಕ ಯಾರೂ ಇರಲಿಲ್ಲ. ಆದರೆ ಬೊಬ್ಬೆ ಕೇಳಿಸಿಕೊಂಡ ಆಸುಪಾಸಿನವರು ಧಾವಿಸಿ ಬಂದರೂ ಪ್ರಯೋಜನವಾಗಲಿಲ್ಲ. ಮೂವರು ಕ್ಷಣಾರ್ಧದಲ್ಲಿ ಕೊನೆಯುಸಿರೆಳೆದಿದ್ದರು.
ಪ್ರತ್ಯಕ್ಷದರ್ಶಿಯ ಹೇಳಿಕೆ:
‘ಬೊಬ್ಬೆ ಕೇಳಿದ ತಕ್ಷಣ ನಾವು ಓಡಿ ಬಂದೆವು. ಸಂದೀಪ್ ತೆಂಗಿನಮರದ ಬುಡದಲ್ಲಿ ಬಿದ್ದಿದ್ದರೆ, ವಲೇರಿಯನ್‌ರ ಕಾಲು ಹಿಡಿದು ಎಳೆಯುವ ಸ್ಥಿತಿಯಲ್ಲಿ ಹೆಝ್ಮಿ ಕಂಡು ಬಂದರು. ಅಷ್ಟರಲ್ಲಿ ವಿದ್ಯುತ್ ಸಂಪರ್ಕವೂ ಕಡಿದು ಹೋಗಿತ್ತು. ಹಾಗಾಗಿ ಮೂವರನ್ನು ಅಲ್ಲಿಂದ ಮೇಲಕ್ಕೆತ್ತಿದೆವು’ ಎಂದು ಪ್ರತ್ಯಕ್ಷದರ್ಶಿಗಳಾದ ವಸಂತ ಟೈಲರ್ ಮತ್ತು ಗುಣಕರ ಎಂಬವರು ‘ವಾರ್ತಾಭಾರತಿ’ಗೆ ತಿಳಿಸಿದರು.
ಮಗಳು ಬರುತ್ತಿದ್ದರು...:
ಮನೆಯಲ್ಲಿ ತಂದೆ ಮತ್ತು ತಾಯಿ ಮಾತ್ರವಿರುವ ಕಾರಣ ಮಣಿಪಾಲದಲ್ಲಿ ವ್ಯಾಸಂಗ ಮಾಡುವ ಪುತ್ರಿ ನಿಶಾ ವಾರಕ್ಕೊಮ್ಮೆ ಮನೆಗೆ ಬಂದು ಹೋಗುತ್ತಿದ್ದರು. ಎಂದಿನಂತೆ ರವಿವಾರ ಮಧ್ಯಾಹ್ನ ಸುಮಾರು 12:30ಕ್ಕೆ ಆಕೆ ಮನೆಯ ಬಳಿ ಬರುತ್ತಿದ್ದಂತೆಯೇ ಈ ದುರಂತ ಸಂಭವಿಸಿದೆ. ಕಣ್ಣೆದುರೇ ನಡೆದ ಈ ದುರ್ಘಟನೆಯಿಂದ ನಿಶಾ ಆಘಾತಕ್ಕೀಡಾಗಿದರು.
ಸುಟ್ಟುಕರಕಲಾಗಿದ್ದ ದೇಹ:
ಸಂದೀಪ್ ಮತ್ತು ವಲೇರಿಯನ್ ಲೋಬೊರ ದೇಹ ಭಾಗಶ: ಸುಟ್ಟುಕರಕಲಾಗಿತ್ತು. ಸಂದೀಪ್‌ರ ಎರಡೂ ಮೊಣಕೈ ಸುಟ್ಟು ಎರಡು ತುಂಡಾಗಿದೆ. ವಲೇರಿಯನ್‌ರ ಕೈ, ಹೊಟ್ಟೆ ಮತ್ತು ಪಕ್ಕೆಲುಬು ಸುಟ್ಟಿವೆ. ಘಟನೆ ನಡೆದ ಸ್ಥಳದಲ್ಲಿ ವಿದ್ಯುತ್ ಪ್ರವಹಿಸಿದ ಕಾರಣ ಹೆಝ್ಮಿಯ ಎರಡೂ ಕಾಲುಗಳು ಸುಟ್ಟು ಹೋಗಿವೆ. ನೀರಿನ ಪೈಪ್ ಕೂಡ ಕರಕಲಾಗಿದೆ. ತೆಂಗಿಮರಕ್ಕೂ ಬೆಂಕಿ ತಗಲಿದೆ.
ಆಘಾತದಲ್ಲಿ ಕುಟುಂಬ:
ವಲೇರಿಯನ್ ಲೋಬೊ ಮೂಲತ: ಬೋಂದೆಲ್ ನಿವಾಸಿಯಾಗಿದ್ದರೆ ಮತ್ತು ಹೆಝ್ಮಿ ವೆಲೆನ್ಸಿಯಾ ನಿವಾಸಿಯಾಗಿದ್ದು, ಕಳೆದ ಹತ್ತಾರು ವರ್ಷದಿಂದ ಉಜ್ಜೋಡಿ-ಗೋರಿಗುಡ್ಡದ ಸ್ವಂತ ಮನೆಯಲ್ಲಿ ವಾಸವಾಗಿದ್ದರು. ಮಕ್ಕಳು ಹೊರಗಡೆ ವ್ಯಾಸಂಗ ಮಾಡುತ್ತಿದ್ದರೆ, ಪತಿ-ಪತ್ನಿ ಉದ್ಯೋಗಸ್ಥರಾಗಿದ್ದರು. ಮನೆಯಲ್ಲಿ ಗಂಡ-ಹೆಂಡತಿ ಇಬ್ಬರೇ ಇದ್ದ ಕಾರಣ ಸಣ್ಣಪುಟ್ಟ ಕೆಲಸಕ್ಕೆ ಆಸುಪಾಸಿನವರನ್ನು ಈ ದಂಪತಿ ಅವಲಂಬಿಸಿದ್ದರು. ಈ ದುರ್ಘಟನೆಯಿಂದ ಲೋಬೊ ಮತ್ತು ಸಂದೀಪ್‌ರ ಕುಟುಂಬ ತೀವ್ರ ಆಘಾತಕ್ಕೀಡಾಗಿದೆ. ಸುಟ್ಟುಕರಕಲಾಗಿದ್ದ ಮೃತದೇಹವನ್ನು ಕಾಣುತ್ತಲೇ ಲೋಬೊರ ಕುಟುಂಬಸ್ಥರು ಮನೆ ಹಾಗು ವೆನ್ಲಾಕ್ ಶವಗಾರದ ಬಳಿ ದು:ಖಿಸಿ ಅಳುವ ದೃಶ್ಯ ಮನಕರಗುವಂತಿತ್ತು.
ಕಂಕನಾಡಿ ನಗರ (ಗರೋಡಿ) ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.
ಶಾಸಕ ಜೆ.ಆರ್.ಲೋಬೊ ಭೇಟಿ:
ಶಾಸಕ ಜೆ.ಆರ್.ಲೊಬೊ ವೆನ್ಲಾಕ್ ಶವಗಾರಕ್ಕೆ ಭೇಟಿ ನೀಡಿ ದುರ್ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಘಟನಾ ಸ್ಥಳ ಹಾಗು ವೆನ್ಲಾಕ್ ಆಸ್ಪತ್ರೆಗೆ ವೆಲೆನ್ಸಿಯಾ ಚರ್ಚ್‌ನ ಪ್ರಧಾನ ಧರ್ಮಗುರು ಫಾ. ಜೇಮ್ಸ್ ಡಿಸೋಜ, ಸಹಾಯಕ ಧರ್ಮಗುರುಗಳಾದ ಫಾ. ನವೀನ್, ಫಾ. ಅರುಣ್, ಚರ್ಚ್‌ನ ಉಪಾಧ್ಯಕ್ಷ ಅನಿಲ್ ಲೋಬೊ, ಕಾರ್ಪೊರೇಟರ್‌ಗಳಾದ ಆಶಾ ಡಿಸಿಲ್ವ, ಸಬಿತಾ ಮಿಸ್ಕಿತ್, ಅಖಿಲ್ ಆಳ್ವ, ಪ್ರವೀಣ್‌ಚಂದ್ರ ಆಳ್ವ, ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕಿ ಡಾ. ಎಚ್.ಆರ್. ರಾಜೇಶ್ವರಿ ದೇವಿ ಭೇಟಿ ನೀಡಿದರು.