ರಾಜೀವ್ ಹತ್ಯೆ ಸಾಧ್ಯತೆಯನ್ನು 5 ವರ್ಷ ಮೊದಲೇ ಊಹಿಸಿದ್ದ ಸಿಐಎ

Update: 2017-01-29 13:49 GMT

ಹೊಸದಿಲ್ಲಿ, ಜ.29: ರಾಜೀವ್ ಗಾಂಧಿ ಹತ್ಯೆಯಾದಲ್ಲಿ ಅಥವಾ ಭಾರತೀಯ ರಾಜಕೀಯದಿಂದ ಹಠಾತ್ ನಿರ್ಗಮಿಸಿದಲ್ಲಿ ಏನಾಗಬಹುದೆಂಬ ಬಗ್ಗೆ ಅವರು ಹತ್ಯೆಯಾಗುವುದಕ್ಕೆ ಐದು ವರ್ಷ ಮೊದಲೇ ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ, ಅತ್ಯಂತ ವಿಸ್ತೃತವಾದ ಹಾಗೂ ಕೂಲಂಕಶವಾದ ವರದಿಯನ್ನು ಸಿದ್ಧಪಡಿಸಿತ್ತು ಎಂದು ಇತ್ತೀಚಿನ ಬಯಲಿಗೆ ಬಂದ ವರದಿಯೊಂದು ತಿಳಿಸಿದೆ.

        1986ರ ಮಾರ್ಚ್‌ನಲ್ಲಿ ‘‘ ರಾಜೀವ್ ಆನಂತರದ ಭಾರತ’’ಎಂಬ ವರದಿಯನ್ನು ತಯಾರಿಸಿತ್ತು. ತನ್ನ ಹಿರಿಯ ಅಧಿಕಾರಿಗಳ ಪ್ರತಿಕ್ರಿಯೆಗಾಗಿ ಸಿದ್ಧಪಡಿಸಲಾಗಿದ್ದ ವರದಿಯನ್ನು ಅದು ಇತ್ತೀಚೆಗೆ ಬಹಿರಂಗಪಡಿಸಿತ್ತು.

ಪ್ರಧಾನಿ ರಾಜೀವ್‌ಗಾಂಧಿಯವರ ಅಧಿಕಾರಾವಧಿ 1989ರಲ್ಲಿ ಮುಗಿಯುವ ಮೊದಲೇ ಅವರು ಹತ್ಯೆಯಾಗುವ ಸಾಧ್ಯತೆಯಿದೆ ಎಂದು ವರದಿಯ ಪ್ರಥಮ ವಾಕ್ಯದಲ್ಲೇ ಹೇಳಲಾಗಿದೆ. ಆದಾಗ್ಯೂ, ಆನಂತರದ ವರದಿಯು, ರಾಜೀವ್ ಹತ್ಯೆಯ ಬೆದರಿಕೆಯನ್ನು ಎದುರಿಸುತ್ತಿದ್ದಾರೆಂದು ಹೇಳಿದೆ.

 ಐದು ವರ್ಷಗಳ ಆನಂತರ ರಾಜೀವ್‌ಗಾಂಧಿ, ತಮಿಳುನಾಡಿನ ಶ್ರೀಪೆರುಂಬದೂರಿನಲ್ಲಿ 1991ರ ಮೇ 21ರಂದು ಹತ್ಯೆಯಾದರು.

  ರಾಜೀವ್ ಇಲ್ಲದೆ ಭಾರತದ ರಾಜಕೀಯ ನಾಯಕತ್ವದಲ್ಲಿ ಹಠಾತ್ ಬದಲಾವಣೆಯಾದಲ್ಲಿ ಆಂತರಿಕ ಹಾಗೂ ವಿದೇಶಿ ರಾಜಕೀಯ ಸನ್ನಿವೇಶವು ಯಾವ ರೂಪವನ್ನು ತಾಳುವುದೆಂಬ ಬಗ್ಗೆಯೂ ವರದಿಯು ವಿಶ್ಲೇಷಿಸಿದೆ. ರಾಜೀವ್ ಹತ್ಯೆಯು ಅಮೆರಿಕ, ರಶ್ಯ ಮತ್ತಿತರ ದೇಶಗಳ ಜೊತೆಗೆ ಭಾರತದ ಸಂಬಂಧಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿರುವುದಾಗಿ ಅದು ಹೇಳಿದೆ. ಆ ಸಮಯದಲ್ಲಿ ವಿವಿಧ ತೀವ್ರವಾದಿ ಗುಂಪುಗಳಿಂದ ರಾಜೀವ್ ಜೀವಕ್ಕೆ ಅಪಾಯವಿದ್ದು, ಅವರ ಹತ್ಯೆಯಾಗುವ ಸಾಧ್ಯತೆಯಿರುವುದಾಗಿಯೂ ವರದಿ ಹೇಳಿತ್ತು.

ಒಂದು ವೇಳೆ ರಾಜೀವ್ ಗಾಂಧಿ ಸಿಖ್ಖ್ ಅಥವಾ ಕಾಶ್ಮೀರಿಯಿಂದ ಹತ್ಯೆಯಾದಲ್ಲಿ ವ್ಯಾಪಕವಾದ ಕೋಮುಗಲಭೆ ಭುಗಿಲೇಳುವ ಸಾಧ್ಯತೆಯಿದೆಯೆಂದು ವರದಿ ತಿಳಿಸಿದೆ.

ರಾಜೀವ್‌ರ ‘ಹಠಾತ್ ನಿರ್ಗಮಿಸಿ’ದಲ್ಲಿ ಪಿ.ವಿ.ನರಸಿಂಹರಾವ್ ಅಥವಾ ವಿ.ಪಿ.ಸಿಂಗ್, ಹಂಗಾಮಿ ಉತ್ತರಾಧಿಕಾರಿಗಳಾಗುವ ಸಾಧ್ಯತೆಯಿದೆಯೆಂದು ವರದಿ ಅಭಿಪ್ರಾಯಿಸಿತ್ತು. 1991ರ ಲೋಕಸಭಾ ಚುನಾವಣೆಯಲ್ಲಿ ಅಧಿಕಾರಕ್ಕೇರಿದ ಕಾಂಗ್ರೆಸ್ ನೇತೃತ್ವದ ಸರಕಾರಕ್ಕೆ ಪಿ.ವಿ.ನರಸಿಂಹರಾವ್ ಪ್ರಧಾನಿಯಾಗಿ ನೇಮಕಗೊಂಡಿದ್ದರು.

ರಾಜೀವ್ ಅವರು ಮತಾಂಧ ಹಿಂದುವಲ್ಲದೆ, ರೋಷತಪ್ತ ಕಾಶ್ಮೀರಿ ಮುಸ್ಲಿಮರು ಅಥವಾ ಸಿಖ್ಖ್ ಭಯೋತ್ಪಾದಕರಿಂದ ಹತ್ಯೆಯಾಗುವ ಸಾಧ್ಯತೆ ಬಹಳಷ್ಟಿದೆಯೆಂದು ಅದು ಊಹಿಸಿತ್ತು.

 ಆದಾಗ್ಯೂ ಈ ವಿಶ್ಲೇಷಣಾ ವರದಿಯಲ್ಲಿ ಮಹತ್ವದ ಭಾಗವೊಂದನ್ನು ತೆಗೆದುಹಾಕಲಾಗಿದ್ದು, ಅದು ಶ್ರೀಲಂಕಾದ ಎಲ್ಟಿಟಿಇ ತಮಿಳು ಉಗ್ರರಿಗೆ ಸಂಬಂಧಿಸಿದ್ದೇ ಎಂಬುದು ಸ್ಪಷ್ಟವಾಗಿಲ್ಲ. ಎಲ್ಟಿಟಿಇ ಉಗ್ರರು ಹಾಗೂ ಶ್ರೀಲಂಕಾ ಸರಕಾರದ ಮಧ್ಯೆ ಭುಗಿಲೆದ್ದ ಸಂಘರ್ಷವನ್ನು ಬಗೆಹರಿಸುವಲ್ಲಿ ರಾಜೀವ್ ಅವರು ನಡೆಸಿದ ಸಂಧಾನ ಪ್ರಯತ್ನಗಳ ಬಗ್ಗೆ ವರದಿಯ ಒಂದು ಅಧ್ಯಾಯವು ವಿವರವಾಗಿ ವಿಶ್ಲೇಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News