ಅಯೋಧ್ಯೆ ವಿವಾದ: ಬಿಜೆಪಿಯನ್ನು ಟೀಕಿಸಿದ ಉದ್ಧವ್

Update: 2017-01-29 14:09 GMT

ಮುಂಬೈ,ಜ.29: ಶಿವಸೇನೆಯು ಸುಲಿಗೆಕೋರರ ಪಕ್ಷವೆಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ರ ನಿಂದನಾತ್ಮಕ ಹೇಳಿಕೆಗೆ ತಾನು ಪ್ರತಿಕ್ರಿಯಿಸುವುದಿಲ್ಲವೆಂದು ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆ ರವಿವಾರ ಹೇಳಿದ್ದಾರೆ. ಆದಾಗ್ಯೂ ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸುವ ಭರವಸೆಯನ್ನು ಈಡೇರಿಸಲು ವಿಫಲವಾಗಿದೆಯೆಂದು ಅವರು ಬಿಜೆಪಿಯ ವಿರುದ್ಧ ಟೀಕಾಸ್ತ್ರ ಎಸೆದಿದ್ದಾರೆ.

  ಫೆಬ್ರವರಿ 21ರಂದು ಮುಂಬೈ ಮಹಾನಗರಪಾಲಿಕೆಗೆ ಚುನಾವಣೆಗಳು ನಡೆಯಲಿರುವಂತೆಯೇ, ಕಾಂಗ್ರೆಸ್ ಕಾರ್ಪೊರೇಟರ್ ಹಾಗೂ ಬಿಎಂಸಿಯ ಮಾಜಿ ಪ್ರತಿಪಕ್ಷ ನಾಯಕ ದೇವೇಂದ್ರ ಅಂಬೇರ್‌ಕರ್ ಇಂದು ತನ್ನ ಸಮಕ್ಷಮದಲ್ಲಿ ಶಿವಸೇನೆಗೆ ಸೇರ್ಪಡೆಯಾದ ಬಳಿಕ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು, ಫಡ್ನವೀಸ್ ಕಳೆದ ರಾತ್ರಿ ಮಾಡಿದ ಬಾಷಣಕ್ಕೆ ಪ್ರತಿಕ್ರಿಯೆ ನೀಡಲು ತಾನು ಬಯಸುವುದಿಲ್ಲ ಎಂದರು.

 ಶನಿವಾರ ರಾತ್ರಿ ಮುಂಬೈಯಲ್ಲಿ ನಡೆದ ಬಿಜೆಪಿ ರ್ಯಾಲಿಯೊಂದರಲ್ಲಿ ಭಾಷಣ ಮಾಡಿದ ಫಡ್ನವೀಸ್, ಶಿವಸೇನೆಯನ್ನು ಸುಲಿಗೆಕೋರರ ಪಕ್ಷವೆಂದು ಜರೆದಿದ್ದರು. ಕಳೆದ ಎರಡು ದಶಕಗಳಲ್ಲಿ ಮುಂಬೈಯಲ್ಲಿ ಶಿವಸೇನೆಯ ಪ್ರಾಬಲ್ಯವಿರುವುದು, ಮಹಾನಗರಕ್ಕಾದ ದೊಡ್ಡ ನಷ್ಟವೆಂದು ಅವರು ಹೇಳಿದ್ದರು.

‘‘ಫಡ್ನವೀಸ್ ಹೇಳಿರುವುದಕ್ಕೆ ನಾನು ಪ್ರತಿಕ್ರಿಯಿಸಲಾರೆ. ಅದಕ್ಕೆ ಮುಂಬೈ ಜನರು ತಕ್ಕ ಉತ್ತರ ನೀಡಲಿದ್ದಾರೆ’’ ಎಂದು ಠಾಕ್ರೆ ಹೇಳಿದರು. ಫಡ್ನವೀಸ್‌ಗೆ ಈ ಹಿಂದೆ ಇದ್ದ ವರ್ಚಸ್ಸು ಈಗ ಕಳಂಕಿತವಾಗಿದೆಯೆಂದು ಹೇಳಿದ ಅವರು, ಅವರೀಗ ಗೂಂಡಾಗಳ ಮುಖ್ಯಮಂತ್ರಿಯಾಗಿದ್ದಾರೆ ಎಂದರು.

 ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸುವ ಚುನಾವಣಾ ಆಶ್ವಾಸನೆಯನ್ನು ಈಡೇರಿಸಲು ಬಿಜೆಪಿ ವಿಫಲವಾಗಿದೆಯೆಂದಜು ಟೀಕಿಸಿದ ಅವರು, ತಾವು ಇದಕ್ಕಾಗಿ ಈ ಹಿಂದೆ ಸಂಗ್ರಹಿಸಿಟ್ಟಿರುವ ಇಟ್ಟಿಗೆಗಳತ್ತ ನೋಡಬೇಕೆಂದು ಉದ್ಧವ್ ವ್ಯಂಗ್ಯವಾಡಿದರು.

   ಸಂವಿಧಾನದ ನಿಯಮಗಳಿಗೆ ಅನುಗುಣವಾಗಿ ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸಲು ಬಿಜೆಪಿ ಯತ್ನಿಸಲಿದೆಯೆಂದು ಪಕ್ಷಾಧ್ಯಕ್ಷ ಅಮಿತ್ ಶಾ ಅವರು ಇತ್ತೀಚೆಗೆ ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೆ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ ಸಂದರ್ಭದಲ್ಲಿ ನೀಡಿದ್ದ ಹೇಳಿಕೆಗೆ ಉದ್ಧವ್ ಹೀಗೆ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News