×
Ad

ಹೊಸ ನೋಟುಗಳಲ್ಲಿ ಅಂಬೇಡ್ಕರ್ ಚಿತ್ರಕ್ಕೆ ಅಠವಳೆ ಆಗ್ರಹ

Update: 2017-01-29 19:24 IST

ಹೊಸದಿಲ್ಲಿ,ಜ.29: ಹೊಸ ಕರೆನ್ಸಿ ನೋಟುಗಳಲ್ಲಿ ಬಿ.ಆರ್.ಅಂಬೇಡ್ಕರ್ ಅವರ ಚಿತ್ರವನ್ನು ಮುದ್ರಿಸುವಂತೆ ಕೇಂದ್ರ ಸಚಿವ ರಾಮದಾಸ್ ಅಠವಳೆ ನೇತೃತ್ವದ ಭಾರತೀಯ ರಿಪಬ್ಲಿಕನ್ ಪಕ್ಷ (ಆರ್‌ಪಿಐ)ವು ಆಗ್ರಹಿಸಿದೆ ಹಾಗೂ ಆರ್ಥಿಕವಾಗಿ ದುರ್ಬಲರಾದ ವರ್ಗಗಳಿಗೆ ಮೀಸಲಾತಿಯನ್ನು ಒದಗಿಸಲು ಸಂವಿಧಾನದಲ್ಲಿ ತಿದ್ದುಪಡಿ ಮಾಡುವಂತೆ ಕರೆ ನೀಡಿದೆ.

   ದಲಿತರು ಮಾತ್ರವಲ್ಲ, ಭಾರತಾದ್ಯಂತ ಜನರು ನೂತನ ಕರೆನ್ಸಿಯ ಮೇಲೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವಿರಬೇಕೆಂದು ಆಗ್ರಹಿಸುತ್ತಿದ್ದಾರೆಂದು ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಖಾತೆಯ ಸಚಿವರೂ ಆದ ಅಠವಳೆ ಹೇಳಿದ್ದಾರೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಆರ್‌ಪಿಐ ಪಕ್ಷದ ರಾಷ್ಟ್ರೀಯ ಸಮಾವೇಶದ ಎರಡನೆಯ ದಿನವಾದ ರವಿವಾರ ಅವರು ಸುದ್ದಿಗಾರರ ಜೊತೆ ಮಾತನಾಡುತ್ತಿದ್ದರು.

‘‘ಕರೆನ್ಸಿ ನೋಟುಗಳಲ್ಲಿ ಮಹಾತ್ಮಗಾಂಧೀಜಿಯವರ ಭಾವಚಿತ್ರವಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಯಾಕೆಂದರೆ ಅವರ ಸ್ವಾತಂತ್ರ ಹೋರಾಟದಿಂದಾಗಿ ಇಂಗ್ಲೀಷರು ಭಾರವನ್ನು ತೊರೆದರು. ಆದರೆ, ಅಂಬೇಡ್ಕರ್ ಅವರ ಭಾವಚಿತ್ರವೂ ಕರೆನ್ಸಿ ನೋಟುಗಳಲ್ಲಿ ಇರಬೇಕೆಂಬ ಭಾವನೆಯೂ ಜನರಲ್ಲಿ ಮನೆಮಾಡಿದೆ’’ಎಂದು ಅವರು ಹೇಳಿದರು.

  ಪ್ರಧಾನಿ ಮೋದಿಯವರ ನಗದು ಅಮಾನ್ಯ ಕ್ರಮಕ್ಕೆ ತನ್ನ ಬೆಂಬಲವನ್ನು ವ್ಯಕ್ತಪಿಸಿದ ಅವರು ಅಂಬೇಡ್ಕರ್ ಕೂಡಾ ಪ್ರತಿ ಹತ್ತು ವರ್ಷಗಳಿಗೊಮ್ಮೆ ಕರೆನ್ಸಿ ಬದಲಾವಣೆಯ ಅಗತ್ಯವನ್ನು ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಕಲಿಯುತ್ತಿದ್ದಾಗ ಬರೆದಿದ್ದ ಪ್ರಬಂಧವೊಂದರಲ್ಲಿ ಪ್ರತಿಪಾದಿಸಿದ್ದರು ಎಂದರು.

   ರಾಜ್ಯ ಹಾಗೂ ಕೇಂದ್ರ ಸರಕಾರಗಳು ಅಂತರ್ಜಾತೀಯ ವಿವಾಹವಾಗುವವರಿಗೆ ಉದ್ಯೋಗದ ಜೊತೆ 5 ಲಕ್ಷ ರೂ. ನೀಡಬೇಕೆಂದು ಅಠವಳೆ ಆಗ್ರಹಿಸಿದರು. ಆರ್ಥಿವಾಗಿ ಹಿಂದುಳಿದಿದ್ದು ಜಾತಿ ಆಧಾರಿತ ಮೀಸಲಾತಿಯ ಸವಲತ್ತುಗಳು ದೊರೆಯದವರಿಗೆ ಮೀಸಲಾತಿಯನ್ನು ಒದಗಿಸಲು ಸಂವಿಧಾನದಲ್ಲಿ ತಿದ್ದುಪಡಿ ಮಾಡುವ ಅಗತ್ಯವಿದೆಯೆಂದು ಅವರ ಹೇಳಿದರು. ಮುಂದಿನ ಸಂಸತ್ ಅಧಿವೇಶನದ ಸಂದರ್ಭದಲ್ಲಿ ತಾನು ಈ ಬಗ್ಗೆ ಪ್ರಧಾನಿಯನ್ನು ಭೇಟಿಯಾಗಿ ಚರ್ಚಿಸುವುದಾಗಿ ಅಠಳೆೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News