×
Ad

ಜಿಎಸ್‌ಟಿ ಸಮಿತಿಯ ನಿರ್ಧಾರಕ್ಕೆ ಪ್ರತಿಭಟನೆ : ಕರಿಪಟ್ಟಿ ಧರಿಸಿ ಕೆಲಸ ಮಾಡಲು ತೆರಿಗೆ ಇಲಾಖೆ ಸಿಬ್ಬಂದಿಗಳ ನಿರ್ಧಾರ

Update: 2017-01-29 19:28 IST

ಹೊಸದಿಲ್ಲಿ, ಜ.29: ವಿತ್ತ ಸಚಿವ ಅರುಣ್ ಜೇಟ್ಲೀ ನೇತೃತ್ವದ ಜಿಎಸ್‌ಟಿ (ಸರಕು ಸೇವಾ ತೆರಿಗೆ) ಸಮಿತಿ ಇತ್ತೀಚೆಗೆ ಕೈಗೊಂಡ ಕೆಲವು ನಿರ್ಧಾರಗಳನ್ನು ಪ್ರತಿಭಟಿಸಿ, ಹುತಾತ್ಮ ದಿನಾಚರಣೆಯಾದ ಇಂದು (ಜ.30) ಸುಮಾರು 70 ಸಾವಿರದಷ್ಟು ತೆರಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕೈಗೆ ಕರಿಯ ಪಟ್ಟಿ ಧರಿಸಿಕೊಂಡು ಕೆಲಸ ಮಾಡಲಿದ್ದಾರೆ.

  ಈ ನಿರ್ಧಾರಗಳು ರಾಜ್ಯ ಸರಕಾರದ ಪರವಾಗಿದ್ದು , ತೆರಿಗೆ ವಿಧಿಸುವ ಮತ್ತು ಸಂಗ್ರಹಿಸುವ ಕೇಂದ್ರ ಸರಕಾರದ ಸಾರ್ವಭೌಮತೆಯ ಪರವಾಗಿಲ್ಲ ಎಂದು ತಿಳಿಸಿರುವ ಸೆಂಟ್ರಲ್ ಬೋರ್ಡ್ ಆಫ್ ಎಕ್ಸೈಸ್ ಆ್ಯಂಡ್ ಕಸ್ಟಮ್ಸ್‌ನ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಸಂಘಟನೆ , ಯಾವುದೇ ನಿರ್ಧಾರವು ತರ್ಕಸಮ್ಮತ ಮತ್ತು ಪಾರದರ್ಶಕವಾಗಿರಬೇಕು ಎಂದಿದೆ.

   ಅದಾಗ್ಯೂ, ಜಿಎಸ್‌ಟಿ ಸಮಿತಿಯ ಇತ್ತೀಚಿನ ಸಭೆಯಲ್ಲಿ ಕೈಗೊಂಡ ನಿರ್ಧಾರದಿಂದ ಜಿಎಸ್‌ಟಿಯ ಮೂಲ ಸ್ವರೂಪದಲ್ಲೇ ರಾಜಿ ಮಾಡಿಕೊಂಡಂತಾಗಿದೆ. ಇದರಿಂದ ಹೆಚ್ಚಿನ ಗೊಂದಲ ಸೃಷ್ಟಿಯಾಗಲಿದ್ದು ಇದು ತೆರಿಗೆ ಸಂಗ್ರಹ ಕಾರ್ಯಕ್ಕೆ ಮಾತ್ರವಲ್ಲ, ವ್ಯಾಪಾರ, ವಾಣಿಜ್ಯ ಮತ್ತು ಕೈಗಾರಿಕೆಗಳಿಗೂ ಹಾನಿಕಾರಕವಾಗಿದೆ ಎಂದು ಸಂಘಟನೆ ಅಭಿಪ್ರಾಯಪಟ್ಟಿದೆ.

     ಸಮಿತಿಯು ಜ.16ರಂದು ನಡೆಸಿದ ಸಭೆಯಲ್ಲಿ 12 ನಾಟಿಕಲ್ ಮೈಲು ಪ್ರಾದೇಶಿಕ ವ್ಯಾಪ್ತಿಯಲ್ಲಿ ನಡೆಯುವ ಆರ್ಥಿಕ ಚಟುವಟಿಕೆಗಳ ಮೇಲೆ ತೆರಿಗೆ ವಿಧಿಸುವ , ವಾರ್ಷಿಕ 1.5 ಕೋಟಿ ರೂ.ಗಿಂತ ಕಡಿಮೆ ಪಾವತಿಯಾಗುವ ತೆರಿಗೆ ಪ್ರಕರಣಗಳನ್ನು ನಿರ್ವಹಿಸುವ ಅಧಿಕಾರ ಸೇರಿದಂತೆ ಕೆಲವು ಪ್ರಮುಖ ಅಧಿಕಾರವನ್ನು ರಾಜ್ಯಗಳಿಗೆ ನೀಡಲಾಗಿತ್ತು. ಈ ನಿರ್ಧಾರಗಳನ್ನು ಕೂಡಲೇ ಪರಿಷ್ಕರಿಸುವ ಅಗತ್ಯವಿದೆ ಎಂದು ಸಂಘಟನೆ ಆಗ್ರಹಿಸುತ್ತಿದೆ.

 ನಾವು ಸಾಂವಿಧಾನಿಕ ರೀತಿಯಲ್ಲಿ ಪ್ರತಿಭಟನೆ ಆರಂಭಿಸುತ್ತಿದ್ದು ಆರಂಭಿಕ ಹಂತವಾಗಿ ಜ.30ರಂದು ಕರಿಪಟ್ಟಿ ಧರಿಸಿ ಕೆಲಸ ನಿರ್ವಹಿಸಲಿದ್ದೇವೆ ಎಂದು ಸಂಘಟನೆಯ ಮೂಲಗಳು ತಿಳಿಸಿವೆ. ಇಂಡಿಯನ್ ರೆವೆನ್ಯೂ ಸರ್ವಿಸ್, ಆಲ್ ಇಂಡಿಯಾ ಅಸೋಸಿಯೇಷನ್ ಆಫ್ ಸೆಂಟ್ರಲ್ ಎಕ್ಸೈಸ್ ಗಝೆಟೆಡ್ ಎಕ್ಸಿಕ್ಯೂಟಿವ್ ಆಫೀಸರ್ಸ್, ಆಲ್ ಇಂಡಿಯಾ ಸೆಂಟ್ರಲ್ ಎಕ್ಸೈಸ್ ಇನ್‌ಸ್ಪೆಕ್ಟರ್ಸ್ ಅಸೋಸಿಯೇಷನ್, ಆಲ್ ಇಂಡಿಯಾ ಸೆಂಟ್ರಲ್ ಎಕ್ಸೈಸ್ ಆ್ಯಂಡ್ ಸರ್ವಿಸ್ ಟ್ಯಾಕ್ಸ್ ಮಿನಿಸ್ಟೀರಿಯಲ್ ಆಫೀಸರ್ಸ್ ಅಸೋಸಿಯೇಷನ್‌ನ ಸದಸ್ಯರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News