ರಾಹುಲ್ ಮತ್ತು ನಾನು ಸೈಕಲ್‌ನ ಎರಡು ಚಕ್ರಗಳು: ಅಖಿಲೇಶ್
ಹೊಸದಿಲ್ಲಿ, ಜ.29: ರಾಹುಲ್ ಗಾಂಧಿ ಮತ್ತು ತಾನು ಅಭಿವೃದ್ಧಿ ಎಂಬ ಸೈಕಲ್‌ನ ಎರಡು ಚಕ್ರಗಳಿದ್ದಂತೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಬಣ್ಣಿಸಿದರೆ , ರಾಹುಲ್ ಗಾಂಧಿ ಕಾಂಗ್ರೆಸ್- ಸಮಾಜವಾದಿ ಪಕ್ಷದ ಮೈತ್ರಿಯನ್ನು ಗಂಗಾ-ಯಮುನ ನದಿಗಳ ಸಂಗಮಕ್ಕೆ ಹೋಲಿಸಿದ್ದಾರೆ.
ಇಬ್ಬರು ಯುವ ಮುಖಂಡರು ಲಕ್ನೊದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಹೀಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಮೈತ್ರಿಯ ಬಳಿಕ ಉಭಯ ಪಕ್ಷಗಳ ನಡುವಿನ ಸ್ನೇಹ ಸಂಬಂಧದ ದ್ಯೋತಕವಾಗಿ ಉಭಯ ನಾಯಕರು ಒಂದೇ ರೀತಿ ಬಿಳಿ ಕುರ್ತಾ ಮತ್ತು ಕಪ್ಪು ಜಾಕೆಟ್ ಧರಿಸಿ ಸುದ್ದಿಗೋಷ್ಠಿಗೆ ಆಗಮಿಸಿದ್ದು ವಿಶೇಷವಾಗಿತ್ತು.
ಕಾಂಗ್ರೆಸ್-ಎಸ್‌ಪಿ ಮೈತ್ರಿಕೂಟವು ರಾಜ್ಯದಲ್ಲಿ ಶಾಂತಿ, ಸಮೃದ್ಧಿ ಮತ್ತು ಅಭಿವೃದ್ಧಿಯ ಹೊಸ ಶಖೆಗೆ ಕಾರಣವಾಗಲಿದೆ ಎಂದ ಇಬ್ಬರು ಮುಖಂಡರು, ಬಿಜೆಪಿ ಸೋಲಿಸುವುದೇ ಈ ಮೈತ್ರಿಕೂಟದ ಪ್ರಧಾನ ಉದ್ದೇಶವಾಗಿದೆ ಎಂದಿದ್ದಾರೆ. ತಮ್ಮಿಬ್ಬರ ನಡುವಿನ ವೈಯಕ್ತಿಕ ನಿಕಟ ಬಾಂಧವ್ಯ ಮತ್ತು ಸ್ನೇಹಕ್ಕೆ ಸಹಭಾಗಿತ್ವದ ರೂಪ ನೀಡಿದ್ದೇವೆ ಎಂದು ಅಖಿಲೇಶ್ ಹೇಳಿದರು.
ಹೆಚ್ಚುಕಡಿಮೆ ಸಮಾನ ವಯಸ್ಕರಾದ ನಾವಿಬ್ಬರು ಸ್ನೇಹಿತರು ಎಂಬುದು ಬೇರೆ ಮಾತು. ಆದರೆ ಬಿಜೆಪಿಯ ದ್ವೇಷ ರಾಜಕಾರಣಕ್ಕೆ ಅಂತ್ಯ ಹಾಡಲು ನಾವು ಬಯಸಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದರು. ರಾಯ್‌ಬರೇಲಿ ಮತ್ತು ಅಮೇಠಿ ಕ್ಷೇತ್ರ ಲೋಕಸಭಾ ವ್ಯಾಪ್ತಿಯ 10 ವಿಧಾನಸಭಾ ಕ್ಷೇತ್ರಗಳ ಸ್ಥಾನ ಹಂಚಿಕೆ ವಿಷಯದಲ್ಲಿ ಉಭಯ ಪಕ್ಷಗಳ ಮಧ್ಯೆ ಆರಂಭಿಕ ಹಂತದಲ್ಲಿ ತಲೆದೋರಿದ್ದ ಭಿನ್ನಾಭಿಪ್ರಾಯ ಒಂದು ಹಂತದಲ್ಲಿ ಮೈತ್ರಿಯನ್ನು ಮುರಿದುಬಿಡುವ ಹಂತಕ್ಕೆ ತಲುಪಿತ್ತು. ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರಾಹುಲ್, ಇದೊಂದು ಗೌಣ ವಿಷಯ. ಇದಕ್ಕೆ ಹೆಚ್ಚಿನ ಮಹತ್ವ ನೀಡಬೇಕಿಲ್ಲ ಎಂದುತ್ತರಿಸಿದರು.
ಒಬ್ಬರು ಒಂದು ಹೇಳುವುದು, ಇನ್ನೊಬ್ಬರು ಅದನ್ನು ನಿರಾಕರಿಸುವುದು. ಒಮ್ಮೆ ಸಿಟ್ಟಾದಂತೆ ನಟಿಸುವುದು, ಮತ್ತೊಮ್ಮೆ ಶಾಂತವಾಗುವುದು... ಸಂಧಾನ ಮಾತುಕತೆ ಎಂದರೆ ಇವೆಲ್ಲಾ ಸಾಮಾನ್ಯ. ಇವನ್ನು ಗಂಭೀರವಾಗಿ ಪರಿಗಣಿಸಬೇಡಿ ಎಂದರು. 403 ವಿಧಾನಸಭಾ ಕ್ಷೇತ್ರಗಳ ಪೈಕಿ 105 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಲಿದ್ದರೆ ಉಳಿದ ಕ್ಷೇತ್ರಗಳು ಎಸ್‌ಪಿ ಪಾಲಾಗಿವೆ.
2019ರ ಲೋಕಸಭಾ ಚುನಾವಣೆಗೂ ಈ ಮೈತ್ರಿಕೂಟ ವಿಸ್ತರಣೆಗೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕದ ರಾಹುಲ್, ಈಗಿನ್ನೂ ಆರಂಭಿಕ ಹಂತದಲ್ಲಿದ್ದೇವೆ. ಮಾತುಕತೆಗೆ ನಾವು ಮುಕ್ತವಾಗಿದ್ದೇವೆ. ಇದು ಸಾಧ್ಯವಿದೆ ಎಂದರು.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ಎಸ್‌ಪಿ ಸಂಸ್ಥಾಪಕ, ಅಖಿಲೇಶ್ ಯಾದವ್ ಅವರ ತಂದೆ ಮುಲಾಯಂ ಸಿಂಗ್ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳುವರೇ ಎಂಬ ಪ್ರಶ್ನೆಗೆ ನೇರವಾಗಿ ಉತ್ತರಿಸದ ಅಖಿಲೇಶ್, ನಮಗೆ ಅವರ ಆಶೀರ್ವಾದವಿದೆ ಎಂದಷ್ಟೇ ಹೇಳಿದರು. ಸುದ್ದಿಗೋಷ್ಠಿಯ ಬಳಿಕ ಉಭಯ ನಾಯಕರು 6 ಕಿ.ಮೀ. ವ್ಯಾಪ್ತಿಯ ರೋಡ್‌ಶೋಗೆ ಹಸಿರು ನಿಶಾನೆ ತೋರಿದರು. ಮುಸ್ಲಿಂ ಮತದಾರರನ್ನು ಸೆಳೆಯುವ ಉದ್ದೇಶದಿಂದ ಲಕ್ನೋದ ಮುಸ್ಲಿಂ ಬಾಹುಳ್ಯವಿರುವ ಪ್ರದೇಶದಲ್ಲಿ ಈ ರೋಡ್‌ಶೋ ನಡೆಯಲಿದೆ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಂ ಮತಗಳು ಕಾಂಗ್ರೆಸ್-ಎಸ್‌ಪಿ ಪಕ್ಷಗಳ ಮಧ್ಯೆ ಹಂಚಿ ಹೋಗಿತ್ತು.