2020 ಹಾಗೂ 2024ರ ಓಲಂಪಿಕ್ಸ್‌ಗೆ ಆಯ್ಕೆ ಪ್ರಕ್ರಿಯೆಗೆ ಆಳ್ವಾಸ್ ಆತಿಥ್ಯ
ಮೂಡುಬಿದಿರೆ , ಜ.29 : 2020 ಹಾಗೂ 2024 ಓಲಂಪಿಕ್ಸ್ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಕ್ರೀಡಾಪಟುಗಳ ಆಯ್ಕೆಗಾಗಿ ಜ.30 ಹಾಗೂ 31ರಂದು ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಈ ಬೃಹತ್ ಕ್ರೀಡಾಪಟುಗಳ ಆಯ್ಕೆ ಕಾರ್ಯಕ್ರಮಕ್ಕೆ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆತಿಥ್ಯ ನೀಡಲಿದ್ದು, ದಕ್ಷಿಣ ಭಾರತದ 6 ರಾಜ್ಯಗಳ 800 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ರಾಷ್ಟ್ರೀಯ ಯುವ ಸಹಕಾರಿ ಸಂಸ್ಥೆಯ ನೇತೃತ್ವದಲ್ಲಿ ಪ್ರಥಮ ಹಂತದಲ್ಲಿ ನಡೆಯುವ ಈ ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆಯಾದ ಕ್ರೀಡಾಳುಗಳನ್ನು ರಾಷ್ಟಮಟ್ಟಕ್ಕೆ ಆಯ್ಕೆಯಾಗುತ್ತಾರೆ. ನಂತರ 2020 ಮತ್ತು 2024ರ ಓಲಂಪಿಕ್ಸ್ ಭಾಗವಹಿಸುವ ಕ್ರೀಡಾಪಟುಗಳನ್ನು ಆರಿಸಲಾಗುತ್ತದೆ.
ಈ ಆಯ್ಕೆ ಪ್ರಕ್ರಿಯೆಯು ಸಂಪೂರ್ಣವಾಗಿ ಪಾರದರ್ಶಕತೆಯಿಂದ ಕೂಡಿರಲಿದ್ದು, ಸಂಪೂರ್ಣ ಉಚಿತವಾಗಿರುತ್ತದೆ. ಆಯ್ಕೆಯಾದ ಕ್ರೀಡಾಪಟುವಿಗೆ ಯಾವುದೇ ತರಬೇತಿಗಳ ಖರ್ಚಿರುವುದಿಲ್ಲ. ಮುಂದಿನ 4ರಿಂದ 8 ವರ್ಷಗಳ ಅವಧಿಗೆ ದೇಶ ವಿದೇಶಗಳಲ್ಲಿ ತರಬೇತಿಯನ್ನು ನೀಡಲಾಗುತ್ತದೆ.
ಈ ಪ್ರಕ್ರಿಯೆಯ ಆತಿಥ್ಯವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವಹಿಸಿಕೊಂಡಿದ್ದು, ಒಟ್ಟು ಸುಮಾರು 1000 ಜನರಿಗೆ ವಸತಿ ಹಾಗೂ ವಾಹನ ಹಾಗೂ ಇತರೆ ವ್ಯವಸ್ಥೆಗಳಿಗೆ ತಯಾರಿ ಮಾಡಲಾಗಿದೆ. ಈಗಾಗಲೇ ಜಿಲ್ಲಾ ಮಟ್ಟದಿಂದ ಆಯ್ಕೆಯಾಗಿರುವ 800 ಮಂದಿ ಕೀಡಾಳುಗಳು ಆಂದ್ರ ಪ್ರದೇಶ, ತೆಲಂಗಾಣ, ಗೋವಾ, ಕೇರಳ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿಂದ ಮೂಡುಬಿದಿರೆಗೆ ಜ.30ರಂದು ಆಗಮಿಸಲಿದ್ದಾರೆ. ಇಲ್ಲಿಂದ ಆಯ್ಕೆಯಾದ ಕ್ರೀಡಾಳುಗಳಿಗೆ ಇನ್ನೊಂದು ಆಯ್ಕೆ ಶಿಬಿರವು ದೆಹಲಿಯ ಜವಾರಲಾಲ್ ಮೈದಾನದಲ್ಲಿ ನಡೆಯಲಿದೆ.
ಪಿ.ಟಿ. ಉಷಾರಿಂದ ಉದ್ಘಾಟನೆ:
ಜನವರಿ 30 ರಂದು ಸಾಯಂಕಾಲ 4.30ಕ್ಕೆ ಸ್ವರಾಜ ಮೈದಾನದಲ್ಲಿ ಆಕರ್ಷಕ ಪಥ ಸಂಚಲನದೊಂದಿಗೆ ಕಾರ್ಯಕ್ರಮ ಆರಂಭವಾಗಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ನ್ಯಾಶನಲ್ ಯುವ ಕೊ-ಓಪರೆಟಿವ್ ಅದ್ಯಕ್ಷ ರಾಜೇಶ್ ಪಾಂಡೆ ವಹಿಸಿಕೊಳ್ಳಲಿದ್ದಾರೆ.
ಆಯ್ಕೆ ಶಿಬಿರದ ಉದ್ಘಾಟನೆಯನ್ನು ವೇಗದ ಓಟಗಾರ್ತಿ ಪಿ.ಟಿ. ಉಷಾ ನೇರವೆರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮೂಡುಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್, ಆಳ್ವಾಸ್ ಪ್ರತಿಷ್ಠಾನದ ಅದ್ಯಕ್ಷ ಡಾ. ಮೋಹನ್ ಆಳ್ವ, ಗೆಲ್ ಇಂಡಿಯನ್ ಸ್ವೀಡ್ ಸ್ಟಾರ್‌ನ ರಾಷ್ಟ್ರೀಯ ಸಂಚಾಲಕ ವಿ. ಮುರಳಿಧರನ್, ವಿಧಾನ ಪರಿಷತ್‌ನ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮಾಜಿ ಸಚಿವರಾದ ಬಿ. ನಾಗರಾಜ ಶೆಟ್ಟಿ, ಅಮರನಾಥ ಶೆಟ್ಟಿ, ರಾಜರಾಜೇಶ್ವರಿ ಇನ್‌ಫ್ರಾಟೆಕ್ ಆಡಳಿತ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ, ದಕ್ಷಿಣ ಭಾರತದ ರಾಜ್ಯಗಳ ಸಂಚಾಲಕರು ಉಪಸ್ಥಿತರಿರುವರು.
ಭಾರತ ಅನಿಲ ಪ್ರಾಧಿಕಾರದ ಕಾರ್ಯಕ್ರಮ
(GAIL) ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಕ್ಷೇತ್ರದಲ್ಲಿ ಭಾರತವನ್ನು ಉನ್ನತಿಯತ್ತ ತರುವುದರ ಕುರಿತು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸಭೆಯಲ್ಲಿ ಪೆಟ್ರೋಲಿಯಂ ಇಲಾಖೆಯ ಅಧೀನ ಸಂಸ್ಥೆ ಭಾರತ ಅನಿಲ ಪ್ರಾಧಿಕಾರ ಈ ಜವಾಬ್ದಾರಿಯನ್ನು ವಹಿಸಿಕೊಂಡಿತ್ತು.
ಗೇಲ್‌ನ ಸಿಎಸ್‌ಆರ್ ನಿಧಿಯನ್ನು ಬಳಸಿಕೊಂಡು ಭಾರತದಲ್ಲಿ ವೇಗದ ಓಟಗಾರರನ್ನು ಹುಡುಕುವುಕ್ಕೆ ತೀರ್ಮಾನಿಸಲಾಗಿತ್ತು. ಈ ಕಾರ್ಯವನ್ನು ಯಶಸ್ವಿಯಾಗಿ ನಿಭಾಯಿಸಲು ದೇಶದಲ್ಲೆಡೆ ಯುವಕರಿಗಾಗಿ ಕೌಶಲ, ಸೆಮಿನಾರ್ ಹಾಗೂ ಸಮ್ಮೇಳನಗಳನ್ನು ನಡೆಸಿಕೊಂಡು ಬರುತ್ತಿರುವ ರಾಷ್ಟ್ರೀಯ ಯುವ ಸಹಕಾರಿ ಸಂಸ್ಥೆಗೆ ವಹಿಸಿಕೊಡಲಾಗಿದೆ.
ಈ ಸಂಸ್ಥೆ ದೇಶದೆಲ್ಲೆಡೆಯಿಂದ 100, 200, 400 ಮೀಟರ್ ವೇಗದ ಓಟಗಾರರನ್ನು ಗ್ರಾಮೀಣ ಹಾಗೂ ನಗರ ಪ್ರದೇಶಗಳಿಂದ ಆಯ್ಕೆ ಮಾಡುತ್ತಿದೆ. ಈಗಾಗಲೇ ಈ ಸಂಸ್ಥೆ ದೇಶದ 29 ರಾಜ್ಯದ 660 ಜಿಲ್ಲೆಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಿದೆ.