ಗ್ರಾಮೀಣತೆಯನ್ನು ಅರಿಯಬೇಕಾದರೆ ಜನಪದ ಗೀತೆಗಳ ಅಧ್ಯಯನ ಅಗತ್ಯ : ಡಾ ಯು. ಮಹೇಶ್ವರಿ
ಮಂಜಯ್ಯಹೆಗ್ಗಡೆ ವೇದಿಕೆ (ಉಜಿರೆ) , ಜ.29 : ಗ್ರಾಮೀಣ ಭಾಗದ ಆಗು ಹೋಗುಗಳ ಬಗ್ಗೆ ತಿಳಿಯಬೇಕಾದರೆ ಜನಪದ ಗೀತೆಗಳ ಅಧ್ಯಯನ ಮಾಡುವುದು ಅವಶ್ಯ ಎಂದು ಹಿರಿಯ ಲೇಖಕಿ ಕಾಸರಗೋಡಿನ ಡಾ ಯು. ಮಹೇಶ್ವರಿ ಹೇಳಿದರು.
ಅವರು ಭಾನುವಾರ 21 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಹಿಳೆ-ಸಂಸ್ಕೃತಿ- ಸಂವರ್ಧನೆ ಗೋಷ್ಠಿಯಲ್ಲಿ ಮಹಿಳೆ-ಜನಪದ ಸಾಹಿತ್ಯ ಬಗ್ಗೆ ಮಾತನಾಡಿದರು.
ಗ್ರಾಮೀಣ ಭಾಗದ ಜನರ ಜ್ಞಾನವನ್ನು ಹೆಚ್ಚಿಸುವ ಜನಪದ ಸಾಹಿತ್ಯ ನಿತ್ಯ ಜೀವನದ ವಿಶ್ವಕೋಶವಾಗಿದೆ. ಅದು ತನ್ನದೆ ಆದ ಭಾವಗಳು, ಸನ್ನಿವೇಶಗಳನ್ನು ಒಳಗೊಂಡಿದೆ . ಜನಪದ ಸಾಹಿತ್ಯದಲ್ಲಿ ಮಹಿಳೆಯರ ಪಾತ್ರ ಮುಖ್ಯವಿದೆ. ಗೀತೆ, ಕಥನ, ತೊಟ್ಟಿಲ ಹಾಡುಗಳು, ನುಡಿಕಟ್ಟು ಮೊದಲಾದ ಪ್ರಕಾರಗಳು ಜೀವನದ ಪ್ರತಿಯೊಂದು ಮೌಲ್ಯವನ್ನು ತಿಳಿಯಪಡಿಸುತ್ತದೆ. ಪ್ರಕೃತಿ, ಭೂಮಿ, ತವರುಮನೆ, ಸಂಸಾರ, ಜನಜೀವನ ಎಲ್ಲದರ ಬಗ್ಗೆಯೂ ಅದು ಸಾದರ ಪಡಿಸುತ್ತದೆ. ಹಿಂದಿನ ಮಹಿಳೆಯರು ಔಪಚಾರಿಕವಾಗಿ ಶಿಕ್ಷಣದಿಂದ ವಂಚಿತರಾಗಿದ್ದರೂ ಅನೌಪಚಾರಿಕವಾಗಿ ಮುಂದುವರೆದಿದ್ದರು. ತಲೆತಲೆಮಾರಿನಿಂದ, ಪಾರಂಪರಿಕವಾಗಿ ಬಂದ ಜನಪದದ ಮುಂದುವರೆಸಿಕೊಂಡು ಬಂದಿದ್ದರು. ಜನಪದ ಜ್ಞಾನದ ಉಗ್ರಾಣವಾಗಿದೆ ಎಂದ ಅವರು , ಮಹಿಳೆ ತ್ಯಾಗ, ದುಡಿಮೆ, ಸಹನೆಯ ಸಾಕಾರಮೂರ್ತಿಯಾಗಿದ್ದಾಳೆ. ಲಿಂಗ ತಾರತಮ್ಯ ವ್ಯಕ್ತವಾಗುತ್ತಿದೆ. ನೇರವಾಗಿ ವ್ಯಕ್ತವಾಗದಿದ್ದರೂ ಪರೋಕ್ಷವಾಗಿ ವ್ಯಕ್ತವಾಗುತ್ತದೆ ಎಂದರು.
ಸುಳ್ಯದ ಡಾ ವೀಣಾ ಎನ್. ಸಂಸ್ಕೃತಿ ಸಂರಕ್ಷಣೆ ಬಗ್ಗೆ ಮಾತನಾಡಿದರು.
ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು, ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಮಹಿಳೆಯರ ಪಾತ್ರ ದೊಡ್ಡದು. ಜವಾಬ್ದಾರಿಯೂ ಇದೆ. ಸಮ್ಮೇಳನಗಳು ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದರು.
ಸಮ್ಮೇಳನಾಧ್ಯಕ್ಷ ಡಾ ಚಿನ್ನಪ್ಪ ಗೌಡ ಉಪಸ್ಥಿತರಿದ್ದರು. ಉಪನ್ಯಾಸಕರಾದ ಶ್ರುತಿ ಜೈನ್ ಕಾರ್ಯಕ್ರಮ ನಿರ್ವಹಿಸಿದರು , ಶಿಲ್ಪ ವಂದಿಸಿದರು.