×
Ad

‘ಮನ್‌ಕಿ ಬಾತ್’ನಲ್ಲಿ ವಿದ್ಯಾರ್ಥಿಗಳಿಗೆ ಕರೆ ಪರೀಕ್ಷೆಯನ್ನು ಆನಂದಿಸಿ, ಭಯ ಬೇಡ : ಪ್ರಧಾನಿ ಮೋದಿ

Update: 2017-01-29 20:18 IST

ಹೊಸದಿಲ್ಲಿ, ಜ.29: ಪರೀಕ್ಷೆಯನ್ನು ಹಬ್ಬದ ರೀತಿ ಆನಂದಿಸಬೇಕು. ಪರೀಕ್ಷೆ ಎಂದರೆ ಒತ್ತಡಕ್ಕೆ ಪರ್ಯಾಯ ಪದ ಎಂಬ ಭಾವನೆ ಬೇಡ. ಇದನ್ನು ಜೀವನದ ಪರೀಕ್ಷೆ ಎಂದು ಭಾವಿಸದೆ, ಹೆಚ್ಚು ನಕ್ಕರೆ ಹೆಚ್ಚು ಅಂಕ ಎಂಬ ಧ್ಯೇಯವನ್ನು ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಮತ್ತವರ ಪೋಷಕರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ತಮ್ಮ ‘ಮನ್ ಕಿ ಬಾತ್’ ತಿಂಗಳ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಅಧ್ಯಯನದ ನಡುವೆ ಸ್ವಲ್ಪ ಹೊತ್ತು ವಿಶ್ರಮಿಸಬೇಕು. ಸೂಕ್ತ ರೀತಿಯ ವಿಶ್ರಾಂತಿ ಅಗತ್ಯ. ಮೆದುಳಿಗೆ ವಿಶ್ರಾಂತಿ ದೊರೆತರೆ ಸ್ಮರಣೆ ಶಕ್ತಿ ಹೆಚ್ಚುತ್ತದೆ ಎಂದರು. ಪ್ರತಿಸ್ಪರ್ಧೆ(ಇತರರೊಂದಿಗೆ ಸ್ಪರ್ಧೆ)ಗಿಂತ ಸ್ವಯಂ ಸ್ಪರ್ಧೆ(ತನ್ನೊಡನೇ ಸ್ಪರ್ಧೆ)ಯನ್ನು ಆಯ್ಕೆ ಮಾಡಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದ ಅವರು, ಸ್ವಯಂ ಸ್ಪರ್ಧೆಯನ್ನು ಆರಿಸಿಕೊಂಡ ಸಚಿನ್ ತೆಂಡೂಲ್ಕರ್ ಕ್ರಿಕೆಟ್‌ನ ದಂತಕಥೆಯಾಗಿ ಬಿಟ್ಟರು ಎಂದರು.

 ಪರೀಕ್ಷೆ ಎಂದರೆ ಅದೊಂದು ತಲೆಬಿಸಿ ಎಂಬ ಭಾವನೆಯನ್ನು ವಿದ್ಯಾರ್ಥಿಗಳು ಹೊಂದಿದ್ದಾರೆ. ಆದರೆ ಇದು ಸಂತಸದ ಮೂಲ ಎಂಬುದನ್ನು ಮರೆಯಬಾರದು. ಒಂದು ವರ್ಷದಲ್ಲಿ ನೀವು ಮಾಡಿರುವ ಕಠಿಣ ಪರಿಶ್ರಮವನ್ನು ಜಾಹೀರುಪಡಿಸಲು ಒದಗಿ ಬಂದ ಸುವರ್ಣಾವಕಾಶ ಎಂದು ಭಾವಿಸಬೇಕು. ವಿದ್ಯಾರ್ಥಿಗಳಿಗೆ ಕುತೂಹಲ ಮತ್ತು ಆಸಕ್ತಿ ಅಗತ್ಯ.ಪರೀಕ್ಷೆ ಎಂದರೆ ಒತ್ತಡ ಎಂದು ಭಾವಿಸುವವರು ಭವಿಷ್ಯದಲ್ಲಿ ಮರುಗುತ್ತಾರೆ . ಸಂತಸ ಎಂದು ಭಾವಿಸುವವರು ಗುರಿ ತಲುಪುತ್ತಾರೆ ಎಂದರು.

ಪರೀಕ್ಷೆಯ ಸಂದರ್ಭ ವಿದ್ಯಾರ್ಥಿಗಳಲ್ಲಿ, ಪೋಷಕರಲ್ಲಿ ಹಬ್ಬದ ಭಾವನೆ ಇರಬೇಕು.ಹಬ್ಬದ ವಾತಾವರಣದಲ್ಲಿ ನಾವು ಸಂತಸದಿಂದ ಇರುತ್ತೇವೆ ಮತ್ತು ಸಂತಸದ ಭಾವನೆ ನಮ್ಮಿಂದ ಉತ್ತಮ ಕಾರ್ಯಗಳನ್ನು ಮಾಡಿಸುತ್ತದೆ ಮತ್ತು ನಾವು ಪ್ರಸನ್ನ ವದನರಾಗಿರುತ್ತೇವೆ. ಹೆಚ್ಚು ನಕ್ಕಷ್ಟೂ ಹೆಚ್ಚು ಅಂಕ ಗಳಿಕೆ ಎಂಬುದನ್ನು ವಿದ್ಯಾರ್ಥಿಗಳು, ಪೋಷಕರು ಮರೆಯಬಾರದು ಎಂದರು.

ಪರೀಕ್ಷೆ ಎಂದರೆ ಅದೊಂದು ಜೀವನ್ಮರಣದ ಪ್ರಶ್ನೆ ಎಂಬ ಭಾವನೆ ಇರಬಾರದು ಎಂದ ಅವರು, ಅಂಕ ಗಳಿಕೆಯೇ ಮುಖ್ಯವಲ್ಲ. ಜ್ಞಾನದ ಸಂಪಾದನೆಗೆ ಹೆಚ್ಚಿನ ಆದ್ಯತೆ ಇರಲಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News