ವಲಸೆ ನಿಷೇಧ ಗ್ರೀನ್ ಕಾರ್ಡ್ ಹೊಂದಿರುವವರಿಗೂ ಅನ್ವಯ: ಆಂತರಿಕ ಭದ್ರತಾ ಇಲಾಖೆ ಸ್ಪಷ್ಟನೆ
ಹೂಸ್ಟನ್, ಜ. 29: ಏಳು ಮುಸ್ಲಿಮ್ ಬಾಹುಳ್ಯದ ದೇಶಗಳ ಜನರು ಅಮೆರಿಕ ಪ್ರವೇಶಿಸುವುದನ್ನು ತಡೆಯುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಆದೇಶವು, ಆ ದೇಶಗಳ ಗ್ರೀನ್‌ಕಾರ್ಡ್ ಹೊಂದಿರುವವರಿಗೂ ಅನ್ವಯಿಸುತ್ತದೆ ಎಂದು ಅಮೆರಿಕದ ಆಂತರಿಕ ಭದ್ರತಾ ಇಲಾಖೆ ಹೇಳಿದೆ.
‘‘ಆದೇಶವು ಗ್ರೀನ್ ಕಾರ್ಡ್ ಹೊಂದಿರುವವರನ್ನೂ ನಿಷೇಧಿಸುತ್ತದೆ’’ ಎಂದು ಆಂತರಿಕ ಭದ್ರತಾ ಇಲಾಖೆಯ ಉಸ್ತುವಾರಿ ವಕ್ತಾರೆ ಗಿಲಿಯನ್ ಕ್ರಿಸ್ಟಿನ್‌ಸನ್ ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
ಅಮೆರಿಕದಲ್ಲಿ ಖಾಯಂ ಕಾನೂನುಬದ್ಧ ವಾಸ್ತವ್ಯ ಹೊಂದಿರುವುದಕ್ಕೆ ಪುರಾವೆಯಾಗಿ ವ್ಯಕ್ತಿಗಳಿಗೆ ಗ್ರೀನ್ ಕಾರ್ಡ್ ನೀಡಲಾಗುತ್ತದೆ.
ನಿಷೇಧಕ್ಕೊಳಗಾಗಿರುವ ದೇಶಗಳ ನಿವಾಸಿಗಳು ಗ್ರೀನ್ ಕಾರ್ಡ್ ಹೊಂದಿದ್ದರೆ ಹಾಗೂ ಈಗ ಅವರು ಅಮೆರಿಕದ ಹೊರಗಿದ್ದರೆ, ಅವರು ಅಮೆರಿಕಕ್ಕೆ ವಾಪಸಾಗಲು ಹಲವು ಹಂತಗಳಲ್ಲಿ ಅರ್ಹತೆ ಪಡೆಯಬೇಕಾಗುತ್ತದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ಅಮೆರಿಕದಲ್ಲಿರುವ ಗ್ರೀನ್ ಕಾರ್ಡ್‌ದಾರರು ದೇಶದಿಂದ ಹೊರಗೆ ಹೋಗುವ ಮೊದಲು ಕಾನ್ಸುಲರ್ ಅಧಿಕಾರಿಯೊಬ್ಬರನ್ನು ಭೇಟಿಯಾಗಬೇಕಾಗುತ್ತದೆ ಎಂದರು.