ಸುಪ್ರೀಂಕೋರ್ಟ್ ಅನುಮತಿ ನೀಡಿದರೆ ಅಯೋಧ್ಯೆಯಲ್ಲಿ 6 ತಿಂಗಳಲ್ಲಿ ರಾಮಮಂದಿರ ನಿರ್ಮಾಣ : ಸುಬ್ರಮಣಿಯನ್ ಸ್ವಾಮಿ
ಮಂಗಳೂರು.ಜ.29: ಸುಪ್ರೀಂಕೋರ್ಟ್ ಅನುಮತಿ ನೀಡಿದರೆ ಅಯೋಧ್ಯೆಯಲ್ಲಿ ಕೇವಲ 6-8ತಿಂಗಳಲ್ಲಿ ಪೂರ್ಣ ಪ್ರಮಾಣದ ರಾಮಮಂದಿರ ನಿರ್ಮಾಣವಾಗಲಿದೆ ಎಂದು ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ತಿಳಿಸಿದ್ದಾರೆ.
ನಗರದ ಸಂಘ ನಿಕೇತನದಲ್ಲಿ ಸಿಟಿಝನ್ ಕೌನ್ಸಿಲ್ ಆಫ್ ಇಂಡಿಯಾ ಸಂಘಟನೆಯ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಭಾರತದ ಅಸ್ಮಿತೆಗಾಗಿ ರಾಮಮಂದಿರ ನಿರ್ಮಾಣ ಎಂಬ ವಿಷಯದ ಬಗ್ಗೆ ಅವರು ಇಂದು ಉಪನ್ಯಾಸ ನೀಡಿದರು.
ರಾಮ ಮಂದಿರ ನಿರ್ಮಾಣದ ಬಗ್ಗೆ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ಇನ್ನೂ ಬಾಕಿ ಉಳಿದಿದೆ. ಉಳಿದಂತೆ ರಾಮಮಂದಿರ ನಿರ್ಮಾಣಕ್ಕೆ ಪೂರಕವಾದ ಬಹುತೇಕ ಕೆಲಸಗಳು ನಡೆಯುತ್ತಿದೆ. ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಮಸ್ಯೆ ಇರುವ ವಿಚಾರಗಳ ಬಗ್ಗೆ ಎಪ್ರಿಲ್ ಒಳಗೆ ವಿಎಚ್‌ಪಿ ಹಾಗೂ ಇತರ ಸಂಘಟನೆಗಳ ಜೊತೆ ಮಾತುಕತೆ ನಡೆಸುವ ಇಂಗಿತವೂ ಇದೆ. ಉತ್ತರ ಪ್ರದೇಶದ ಚುನಾವಣೆ ಪೂರ್ಣಗೊಂಡ ಬಳಿಕ ಈ ಬಗ್ಗೆ ಮತ್ತೆ ವಿಚಾರಣೆಯನ್ನು ತ್ವರಿತಗೊಳಿಸಲು ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸಲಿದ್ದೇನೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಇತ್ತೀಚೆಗೆ ರಾಮಮಂದಿರ ನಿರ್ಮಾಣದ ಬಗ್ಗೆ ಮಾತನಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಸುಬ್ರಮಣಿಯನ್ ಸ್ವಾಮಿ ತಿಳಿಸಿದರು.
ಉತ್ತರ ಪ್ರದೇಶದಲ್ಲಿ ಅಲ್ಲಿನ ಸರಕಾರ ಅಯೋಧ್ಯೆಗೆ ಸಂದರ್ಶಿಸಲು 100 ರೂ. ಪ್ರವೇಶ ದರವನ್ನು ನಿಗದಿಪಡಿಸಿ ಸಂಗ್ರಹಿಸಿದ ಕೊಟ್ಯಾಂತರ ರೂಪಾಯಿ ಹಣವನ್ನು ಅಲ್ಲಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಬಳಸಿರುವುದಿಲ್ಲ. ಇದರ ವಿರುದ್ಧ ಸಂವಿಧಾನದಲ್ಲಿ ನೀಡಿರುವ ಧಾರ್ಮಿಕ ಹಕ್ಕಿನ ಉಲ್ಲಂಘನೆಯಾಗುತ್ತಿದೆ ಎಂದು ನಾನು ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿದ್ದೇನೆ. ಅದು ವಿಚಾರಣೆಯ ಹಂತದಲ್ಲಿದೆ ಎಂದವರು ತಿಳಿಸಿದರು.
ಭಾರತದಲ್ಲಿ ಬ್ರಿಟೀಷರ ಆಳ್ವಿಕೆಯ ನಂತರ ಈ ದೇಶದ ಗುರುತು(ಐಡೆಂಟಿಟಿ ) ನಾಶಮಾಡುವ ಯತ್ನ ನಡೆದಿತ್ತು. ಅದಕ್ಕೆ ಇಲ್ಲಿನ ಚರಿತ್ರೆಯನ್ನು ತಿರುಚಲಾಗಿದೆ. ಆದರೆ ಭಾರತದ ಹಿಂದುತ್ವದ ಗುರುತನ್ನು ಅವರಿಗೆ ನಾಶಮಾಡಲು ಸಾಧ್ಯವಾಗಲಿಲ್ಲ. ದೇಶದ ಐಡೆಂಟಿಯ ಪ್ರತೀಕವಾದ ರಾಮ ಮಂದಿರ ಮೊದಲು ನಿರ್ಮಾಣವಾಗಬೇಕು . ಮುಂದಿನ ಹಂತದಲ್ಲಿ ಕಾಶಿ,ಮಥುರಾದಲ್ಲೂ ಕೆಡವಿದ ದೇವಾಲಯ ನಿರ್ಮಾಣವಾಗಬೇಕು. ದೇಶದ ವಿವಿಧ ಭಾಷೆಗಳಲ್ಲಿ ಸೇರಿರುವ ಸಂಸ್ಕೃತ ಭಾಷೆ ರಾಷ್ಟ್ರದ ಪ್ರಮುಖ ಸಂಪರ್ಕ ಭಾಷೆಯಾಗಬೇಕಾಗಿದೆ ಎಂದು ಸುಬ್ರಮಣಿಯನ್ ಸ್ವಾಮಿ ತಿಳಿಸಿದರು.
ಸಮಾರಂಭದಲ್ಲಿ ಸಿಟಿಝನ್ ಕೌನ್ಸಿಲ್ ಮಂಗಳೂರು ಘಟಕದ ಅಧ್ಯಕ್ಷ ಸುನಿಲ್ ಆಚಾರ್, ಉದ್ಯಮಿ ಸೀತಾರಾಮ, ಪ್ರಕಾಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.