ಜ.ಕಾರ್ಯಪ್ಪ ಹತ್ಯೆಗೆ ಆರೆಸ್ಸೆಸ್ ಸಂಚು ಹೂಡಿತ್ತೇ? : ಸಿಐಎನಿಂದ ಕೋಲಾಹಲಕಾರಿ ವರದಿ ಬಹಿರಂಗ
ಹೊಸದಿಲ್ಲಿ,ಜ.28: ಬಹುತೇಕ ಭಾರತೀಯರನ್ನು ಬೆಚ್ಚಿಬೀಳಿಸುವಂತಹ ಹಾಗೂ ಮೋದಿ ಸರಕಾರಕ್ಕೆ ದೊಡ್ಡ ಮಟ್ಟದಲ್ಲಿ ಮುಜುಗರವನ್ನುಂಟು ಮಾಡುವ ಬೆಳವಣಿಗೆಯೊಂದರಲ್ಲಿ, ಅಮೆರಿಕದ ಕೇಂದ್ರೀಯ ತನಿಖಾ ಸಂಸ್ಥೆ (ಸಿಐಎ) ಬಿಡುಗಡೆಗೊಳಿಸಿದ ವರದಿಯೊಂದು ದೇಶದ ಪ್ರಪ್ರಥಮ ಸೇನಾ ವರಿಷ್ಠ ಜ. ಕೆ.ಎಂ. ಕಾರ್ಯಪ್ಪ ಅವರ ಹತ್ಯೆಗೆ ಸಂಚು ರೂಪಿಸುವಂತೆ ಆರೆಸ್ಸೆಸ್ ಉತ್ತರ ಭಾರತದ ಸೇನಾಧಿಕಾರಿಗಳನ್ನು ಪ್ರಚೋದಿಸುತ್ತು ಎಂಬುದನ್ನು ಬಹಿರಂಗಪಡಿಸಿದೆ.
ಭಾರತೀಯ ಸೇನೆಯ ಅಧಿಕಾರಿಗಳಲ್ಲಿ ಒಡಕು ಎಂಬ ಶಿರೋನಾಮೆಯ ಈ ವರದಿಯನ್ನು ಸಿಐಎ 1950, ಜೂನ್ 12ರಂದು ಸಲ್ಲಿಸಿತ್ತು. ಭಾರತೀಯ ಸೇನಾಪಡೆಯ ವರಿಷ್ಠರಾದ ಜನರಲ್ ಕಾರ್ಯಪ್ಪ ಅವರ ಹತ್ಯೆಯ ಪ್ರಯತ್ನವನ್ನು, ಅವರು ಇತ್ತೀಚೆಗೆ (1950ರ ಆರಂಭದಲ್ಲಿ) ಪೂರ್ವ ಪಂಜಾಬ್‌ನಲ್ಲಿ ಪರಿಶೀಲನೆಗೆ ತೆರಳಿದ್ದ ಸಂದರ್ಭದಲ್ಲಿ ನಡೆಸಲಾಗಿತ್ತು. ಈ ಸಂಚಿಗೆ ಸಂಬಂಧಿಸಿ ಆರು ಮಂದಿಗೆ ಮರಣದಂಡನೆಯನ್ನು ವಿಧಿಸಲಾಗಿತ್ತು. ಈ ಸಂಚಿನಲ್ಲಿ ಹಲವಾರು ಉನ್ನತ ಮಟ್ಟದ ಸೇನಾಧಿಕಾರಿಗಳು ಶಾಮೀಲಾಗಿದ್ದರು’’ ಸಿಐಎ ತನ್ನ ವರದಿಯಲ್ಲಿ ತಿಳಿಸಿದೆ.
‘‘ದಕ್ಷಿಣ ಭಾರತದವರಾದ ಜನರಲ್ ಕಾರ್ಯಪ್ಪ ಅವರನ್ನು ಭಾರತೀಯ ಸೇನೆಯ ಸಿಖ್ಖ್ ಅಧಿಕಾರಿಗಳು ದ್ವೇಷಿಸುತ್ತಿದ್ದರು. ಕಾರಿಯಪ್ಪ ವಿರುದ್ಧ ಭಿನ್ನಾಭಿಪ್ರಾಯಗಳನ್ನು ಹರಡುವಂತೆ ಆರೆಸ್ಸೆಸ್ ಕೆಲವು ವಿಶ್ವಾಸಘಾತುಕ ಹಾಗೂ ಕರ್ತವ್ಯನಿಷ್ಠೆರಹಿತ ಸಿಖ್ಖ್ ಸೇನಾಧಿಕಾರಿಗಳ ಮನವೊಲಿಸಿತ್ತು. ಉತ್ತರ-ದಕ್ಷಿಣ ಭಾರತೀಯರೆಂಬ ಸೇನಾಧಿಕಾರಿಗಳ ನಡುವೆ ಇರುವ ಒಡಕನ್ನು ಆರೆಸ್ಸೆಸ್ ಬಂಡವಾಳ ಮಾಡಹೊರಟಿತು. ತಿರುವಾಂಕೂರು, ಮಹಾರಾಷ್ಟ್ರ ಹಾಗೂ ಮದ್ರಾಸ್‌ಗಳ ಅಧಿಕಾರಿಗಳು ಜನರಲ್ ಕಾರಿಯಪ್ಪ ಅವರಿಗೆ ನಿಷ್ಠರಾಗಿದ್ದರು ಎಂದು ವರದಿ ತಿಳಿಸಿದೆ.
ಜನರಲ್ ಕಾರ್ಯಪ್ಪ ಸೂಚಿಸಿದಂತೆ ಭಾರತವು ತಾತ್ಕಾಲಿಕವಾಗಿ ಸೇನಾಡಳಿತದಡಿಗೆ ಬರಬೇಕೆಂದು ಜನರಲ್ ಕಾರ್ಯಪ್ಪ 1965ರಲ್ಲಿ ಸಲಹೆ ನೀಡಿದ್ದರು. ಆಗ ಕಾರಿಯಪ್ಪ ಅವರು ಸೇನಾ ವರಿಷ್ಠ ಹುದ್ದೆಯಿಂದ ನಿವೃತ್ತರಾಗಿ ಫೀಲ್ಡ್‌ಮಾರ್ಶಲ್ ಪದವಿಯನ್ನು ಆಲಂಕರಿಸಿದ್ದರು. ಭಾರತದಲ್ಲಿ ಅಲ್ಪಾವಧಿಗೆ ಸೇನಾಡಳಿತವನ್ನು ಹೇರಿದಲ್ಲಿ ಭಾರತವು ಕಮ್ಯೂನಿಸ್ಟ್ ಬೆದರಿಕೆಯನ್ನು ಎದುರಿಸಲು ಹಾಗೂ ಪ್ರಾದೇಶಿಕ ತೊಂದರೆಗಳನ್ನು ನಿಭಾಯಿಸಲು ನೆರವಾಗಲಿದೆಯೆಂದು ಕಾರಿಯಪ್ಪ ಹೇಳಿರುವುದನ್ನು ಬ್ಲಿಟ್ಜ್ ಪತ್ರಿಕೆಯು ವರದಿಯೊಂದರಲ್ಲಿ ಪ್ರಕಟಿಸಿದ್ದನ್ನು ಸಿಐಎ ಉಲ್ಲೇಖಿಸಿದೆ. 1950ರಲ್ಲಿ ಪಂಜಾಬ್‌ನಲ್ಲಿ ತನ್ನ ಸಹದ್ಯೋಗಿ ಅಧಿಕಾರಿಗಳು ನಡೆಸಿದ ಹತ್ಯೆ ಸಂಚಿನಿಂದ ಪ್ರಭಾವಿತರಾಗಿ ಅವರು ಈ ಹೇಳಿಕೆ ನೀಡಿದ್ದಿರಬಹುದೆಂದು ಸಿಐಎ ತನ್ನ ವರದಿಯಲಿ ಹೇಳಿದೆ.