×
Ad

ಹೂವುಗಳಲ್ಲಿ ಅರಳಿದ ವೀಣೆ, ಕಾಪು ದೀಪಸ್ತಂಭ; ನವಧಾನ್ಯದ ನಂದಿ

Update: 2017-01-29 22:12 IST

ಉಡುಪಿ, ಜ.29: ಜಿಲ್ಲೆಯ ಕೃಷಿ, ತೋಟಗಾರಿಕೆ ಹಾಗೂ ಕೃಷಿ ಸಂಬಂಧಿತ ಇಲಾಖೆಗಳು ಹಾಗೂ ದ.ಕ., ಚಿಕ್ಕಮಗಳೂರು ಉಡುಪಿ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಒಕ್ಕೂಟಗಳ ಸಹಯೋಗದಲ್ಲಿ ಮೂರು ದಿನಗಳ ಕಾಲ ದೊಡ್ಡಣಗುಡ್ಡೆಯ ಪುಷ್ಪ ಹರಾಜು ಕೇಂದ್ರದ ಆವರಣದಲ್ಲಿ ಹಮ್ಮಿಕೊಳ್ಳಲಾದ ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನ, ಸಾವಯವ-ಸಿರಿಧಾನ್ಯ ಮೇಳ ಪ್ರತಿದಿನ ಜಿಲ್ಲೆ ಹಾಗೂ ಹೊರ ಜಿಲ್ಲೆಗಳ ಸಾವಿರಾರು ಮಂದಿಯನ್ನು ಅದರಲ್ಲೂ ಮುಖ್ಯವಾಗಿ ಮಹಿಳೆಯರು ಹಾಗೂ ಮಕ್ಕಳನ್ನು ಸೂಜಿಗಲ್ಲಿನಂತೆ ಆಕರ್ಷಿಸಿದೆ.

ಕಳೆದ ವರ್ಷ ಸಾಮಾನ್ಯ ರೀತಿಯಲ್ಲಿ ನಡೆದ ಈ ಫಲಪುಷ್ಪ ಪ್ರದರ್ಶನ ಈ ಬಾರಿ ಹೆಚ್ಚು ವ್ಯವಸ್ಥಿತವಾಗಿ, ವೈವಿಧ್ಯಮಯವಾಗಿ, ವಿಸ್ತರಿತ ರೀತಿಯಲ್ಲಿ ಆಯೋಜನೆಗೊಂಡಿರುವುದು ಜನರನ್ನು ಆಕರ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ರೈತರು ಹಾಗೂ ರೈತ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿರುವುದು ಸಹ ಇದಕ್ಕೆ ಇಂಬು ನೀಡುತ್ತಿದೆ.

ಕೇವಲ ಫಲಪುಷ್ಪ ಪ್ರದರ್ಶನ, ನವಧಾನ್ಯಗಳ ಪ್ರದರ್ಶನಕ್ಕಷ್ಟೇ ಸೀಮಿತವಾಗದೇ, ಕೃಷಿ ಹಾಗೂ ಅದಕ್ಕೆ ಸಂಬಂಧಿಸಿದಂತೆ ವಿವಿಧ ವಸ್ತು, ಉಪಕರಣಗಳ ಪ್ರದರ್ಶನ ಹಾಗೂ ಮಾರಾಟವೂ ಇಲ್ಲಿ ಆಯೋಜನೆ ಗೊಂಡಿರುವುದರಿಂದ ವಿವಿಧ ಮಳಿಗೆಗಳು ಜನರಿಂದ ಕಿಕ್ಕಿರಿದು ತುಂಬಿದೆ. ಮಾರುಕಟ್ಟೆಗೆ ಬಂದಿರುವ ಕೃಷಿ ಮತ್ತು ತೋಟಗಾರಿಕೆಗೆ ಸಂಬಂಧಿಸಿದ ಹೊಸ ಹೊಸ ಉಪಕರಣಗಳ ಕುರಿತು ಮಾಹಿತಿ ಪಡೆಯಲು ಜನರು ಹೆಚ್ಚಿನ ಆಸಕ್ತಿ ತೋರುತ್ತಿರುವುದು ಕಂಡುಬಂತು.

ಇದರೊಂದಿಗೆ ಇದೀಗ ನಗರ ಪ್ರದೇಶಗಳ ಹಾಗೂ ಬಹುಮಹಡಿ ಕಟ್ಟಡಗಳಲ್ಲಿರುವ ಫ್ಲಾಟ್‌ಗಳಲ್ಲಿ ವಾಸಿಸುತ್ತಿರುವವರ ಫ್ಯಾಶನ್ ಎನಿಸಿಕೊಳ್ಳುತ್ತಿರುವ ಟೆರೆಸ್ ಗಾರ್ಡನ್ ಹಾಗೂ ಕಿಚನ್ ಗಾರ್ಡನ್‌ಗಳತ್ತ ಮಹಿಳೆಯರು ವಿಶೇಷವಾಗಿ ಆಕರ್ಷಿತರಾಗುತಿದ್ದು, ಅವುಗಳ ಕುರಿತಾದ ಪ್ರಾತ್ಯಕ್ಷಿಕೆಯತ್ತ ಹೆಚ್ಚಿನ ಆಸಕ್ತಿ, ಕುತೂಹಲ ತೋರುತ್ತಿರುವುದು ಕಂಡುಬಂತು.

ಆಕರ್ಷಿಕ ಹೂವುಗಳ ಮಾದರಿ:

ಆದರೆ ಈ ಪ್ರದರ್ಶನದ ಪ್ರಧಾನ ಆಕರ್ಷಣೆಯಾಗಿದ್ದುದು ವೈವಿಧ್ಯಮಯ ಹೂವುಗಳಿಂದ ನಿರ್ಮಿಸಿದ ವಿವಿಧ ಮಾದರಿಗಳಾಗಿದ್ದವು. ಬಣ್ಣ ಬಣ್ಣದ ಗುಲಾಬಿ ಹೂವುಗಳಿಂದ ನಿರ್ಮಾಣಗೊಂಡ ಕಾಪು ದೀಪಸ್ತಂಭ, ವೀಣೆ, ಪಿಟೀಲು, ತಬಲಾ, ಯಕ್ಷಗಾನದ ವೇಷವೊಂದರ ಕಿರೀಟ ಮುಖವರ್ಣಿಕೆ ಜನರನ್ನು ಸೆಳೆದವು. ದೀಪಸ್ತಂಭವನ್ನು 9000 ಗುಲಾವಿ ಹೂವುಗಳಿಂದ ಹಾಗೂ ಯಕ್ಷಗಾನ ಕಿರೀಟವನ್ನು 3000 ಗುಲಾಬಿ ಮತ್ತು 1000 ಜರ್ಬೆರಾ ಹೂವುಗಳಿಂದ ನಿರ್ಮಿಸಲಾಗಿದೆ. ಮಹಿಳೆಯರು ಹಾಗೂ ಮಕ್ಕಳು ಇವುಗಳ ಎದುರು ನಿಂತು ಸೆಲ್ಫಿ ತೆಗೆಸಿಕೊಳ್ಳಲು ಮುಗಿಬೀಳುತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಇನ್ನು ಮಕ್ಶಳ ಆಕರ್ಷಣೆಗಾಗಿ ಮಕ್ಕಳ ನೆಚ್ಚಿನ ಕಾರ್ಟೂನ್ ಚಿತ್ರ ‘ಛೋಟಾ ಭೀಮ್’ ಕುಟುಂಬವನ್ನು 1,000 ಆರ್ಕಿಡ್ ಹೂ ಹಾಗೂ 800 ಆಲ್‌ಸ್ಟ್ರೋಮೇರಿಯಾ ಹೂವುಗಳಿಂದ ನಿರ್ಮಿಸಿ ಪ್ರದರ್ಶಿಸಲಾಗಿದೆ. ತೋಟಗಾರಿಕಾ ಬೆಳೆಗಳಲ್ಲಿ ತೆಂಗು, ಅಡಿಕೆ, ಗೇರು, ಕಾಳುಮೆಣಸು ಹಾಗೂ ವಿವಿಧ ಬಗೆಯ ಹಣ್ಣು ಹಾಗೂ ಗಿಡಗಳನ್ನು ಪ್ರದರ್ಶಿಸಲಾಗಿತ್ತು. ಇವುಗಳ ಮಾರಾಟ ವ್ಯವಸ್ಥೆಯನ್ನೂ ಇಲ್ಲಿ ಮಾಡಲಾಗಿದೆ. ವಿಶ್ವ ಮಾನ್ಯತೆ ಪಡೆದಿರುವ ಜಿಲ್ಲೆಯ ಹೆಮ್ಮೆಯ ಶಂಕಪುರ ಮಲ್ಲಿಗೆ ಹಾಗೂ ಮಟ್ಟು ಗುಳ್ಳಗಳನ್ನು ಸಹ ಇಲ್ಲಿ ಪ್ರದರ್ಶಿಸಲಾಗಿದೆ.

ನವಧಾನ್ಯಗಳಿಂದ ರಚಿಸಲಾದ ನಂದಿ, ಹುಬ್ಬಳ್ಳಿಯ ಸರೋಜಾ ಬಡಿಗೇರ ಎಂಬ ಕಲಾವಿದೆ ಶಾವಿಗೆಯಿಂದ ರಚಿಸಿದ ಕರ್ನಾಟಕದ ತೋಟಗಾರಿಕಾ ಪಿತಾಮಹರೆನಿಸಿದ ಎಂ.ಎಚ್.ಮರಿಗೌಡರ ಮೂರ್ತಿ ಸಂದರ್ಶಕರ ವಿಶೇಷ ಆಕರ್ಷಣೆಯ ಕೇಂದ್ರಬಿಂದುವೆನಿಸಿಕೊಂಡವು. ಬೇರೆಬೇರೆ ತರಕಾರಿಗಳಿಂದ ಕೆತ್ತಿ ರಚಿಸಲಾದ ವಿವಿಧ ಪ್ರಾಣಿಗಳ ಹಾಗೂ ಕಲಾಕೃತಿಗಳ ರಚನೆಗಳೂ ಜನರನ್ನು ತಮ್ಮತ್ತ ಸೆಳೆದವು.

ರಾಗಿ, ಉದ್ದು, ಹೆಸರು, ಹುರುಳಿ, ನವಣೆ, ಜೋಳ, ಬರಗು ಕೊರಲೆ, ಸಜ್ಜೆ, ಸಾಮೆ, ಊದಲು ಮುಂತಾದ ನವ ಸಿರಿಧಾನ್ಯಗಳ ಪ್ರದರ್ಶನ, ಅವುಗಳ ಉಪಯೋಗದ ಕುರಿತು ಮಾಹಿತಿ, ಜಿಲ್ಲೆಗೆ ಹೊಸದಾಗಿ ಪರಿಚಯಿಸುತ್ತಿರುವ ಭತ್ತ, ಮೀನು ಹಾಗೂ ಕೋಳಿ ಸಾಕಣೆಯ ಸಮಗ್ರ ಕೃಷಿ ಪದ್ಧತಿ ಪ್ರಾತ್ಯಕ್ಷಿಕೆಯೂ ರೈತರ ಕುತೂಹಲ ಕೆರಳಿಸುವಲ್ಲಿ ಯಶಸ್ವಿಯಾಯಿತು.

ಇನ್ನು ಸಾವಯವ ಗ್ರಾಮ, ಭೂಸಮೃದ್ಧಿ ಯೋಜನೆ, ಜಲಾನಯನ ಮಾದರಿ ಹಾಗೂ ಸಮಗ್ರ ಕೃಷಿ ಪದ್ಧತಿಗಳನ್ನು ಪ್ರದರ್ಶಿಸಿ ರೈತರಿಗೆ ಅವುಗಳ ಕುರಿತು ಹೆಚ್ಚಿನ ಮಾಹಿತಿಗಳನ್ನು ಒದಗಿಸಲಾಗುತ್ತಿದೆ. ಸಾವಯವ ವಸ್ತುಗಳ ಪ್ರದರ್ಶನ, ಆಹಾರ ಮಳಿಗೆಗಳೂ ಈ ಪ್ರದರ್ಶನದಲ್ಲಿವೆ.

ನಮ್ಮ ಪಾರಂಪರಿಕ ಕೃಷಿ ಪದ್ಧತಿಯಲ್ಲಿ ಬಳಕೆಯಾಗುತಿದ್ದ ಕೃಷಿ ಉಪಕರಣಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದು, ನೇಗಿಲು, ನೊಗ, ಇಂದು ಕಾಣಲೇ ಸಿಗದ ಚಿಮಣಿ, ಲಾಟೀಲು ಇವುಗಳ ಬಗ್ಗೆ ಸಾಕಷ್ಟು ಮಂದಿ ಆಸಕ್ತಿಯಿಂದ ವಿಚಾರಿಸುತ್ತಿರುವುದು ಕಂಡುಬಂತು.

ನಮ್ಮ ರೈತರು ಹಾಗೂ ಜನಸಾಮಾನ್ಯರಲ್ಲಿ ಕೃಷಿಯ ಕುರಿತಂತೆ ಆಸಕ್ತಿ ಮೂಡಿಸಿ ಹೊಸ ಹೊಸ ಬೆಳವಣಿಗೆಗಳ ಕುರಿತು ಅವರ ಗಮನ ಸೆಳೆಯುವುದು ಈ ಪ್ರದರ್ಶನದ ಮುಖ್ಯ ಉದ್ದೇಶ. ಇದರಲ್ಲಿ ನಾವು ಸಾಕಷ್ಟು ಯಶಸ್ವಿಯೂ ಆಗಿದ್ದೇವೆ ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಚಂದ್ರಶೇಖರ್ ನಾಯ್ಕ್ ತಿಳಿಸಿದರು.

 ‘ಈ ಬಾರಿಯ ಪ್ರದರ್ಶನ ಆಕರ್ಷಕವಾಗಿದೆ. ಇಲಾಖೆ ಹಾಗೂ ಅಧಿಕಾರಿಗಳು ಜನರನ್ನು ತಲುಪಲು ಮುತುವರ್ಜಿಯಿಂದ ಈ ಬಾರಿ ಪ್ರದರ್ಶನವನ್ನು ಹಮ್ಮಿಕೊಂಡಿದ್ದಾರೆ. ಅವರಲ್ಲಿ ಆಸಕ್ತಿ ಹಾಗೂ ಶೃದ್ದೆಯೂ ಕಂಡುಬಂದಿದೆ. ಕೃಷಿ, ತೋಟಗಾರಿಕೆ ಹಾಗೂ ಫಲಪುಷ್ಪ ಬೆಳೆಗಳಲ್ಲಿ ಸಾಕಷ್ಟು ವೈವಿಧ್ಯತೆ ಇದ್ದು, ಆಸಕ್ತರಿಗೆ ಮಾಹಿತಿಗಳನ್ನು ಒದಗಿಸಲು ಶ್ರಮಿಸಿದ್ದಾರೆ ’ ಎಂದು ಪ್ರದರ್ಶನದ ವೀಕ್ಷಣೆಗೆ ಬಂದ ರೈತ ಎಂ.ಕೆ.ಮುಕುಂದ ತಿಳಿಸಿದರು.

ಈ ಪ್ರದರ್ಶನ ಸೋಮವಾರ ಸಂಜೆಯವರೆಗೆ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿರುತ್ತದೆ. ಸೋಮವಾರ ತೋಟಗಾರಿಕಾ ಬೆಳೆಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ಮಾಹಿತಿಗಳನ್ನು ನೀಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News