×
Ad

ಮೂಡಬಿದಿರೆ: ಅಗ್ನಿ ಆಕಸ್ಮಿಕ- ಹಟ್ಟಿ, ಬಚ್ಚಲು ಬೆಂಕಿಗಾಹುತಿ

Update: 2017-01-29 22:18 IST

ಮೂಡುಬಿದಿರೆ, ಜ.29: ಶ್ರೀ ಗುರುಮಠ ಕಾಳಿಕಾಂಬಾ ದೇವಳದ ಸಮೀಪ ಮನೆಯೊಂದಕ್ಕೆ ಹೊಂದಿಕೊಂಡಂತಿರುವ ಬಚ್ಚಲು ಮತ್ತು ಹಟ್ಟಿಯಲ್ಲಿ   ಅಕಸ್ಮಾತ್ ಬೆಂಕಿ ಕಾಣಿಸಿಕೊಂಡು  ಸಂಪೂರ್ಣ ಸುಟ್ಟು ಹೋಗಿ ರೂ. 1 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದ ಘಟನೆ  ನಡೆದಿದ್ದು  ಅಗ್ನಿ ಶಾಮಕ ದಳದವರು ಹೆಚ್ಚಿನ ಅನಾಹುತ ಆಗುವುದನ್ನು ತಡೆಯುವಲ್ಲಿ ಸಫಲರಾದರು.

ದಿ. ರವಿಕೀರ್ತಿ ಜೈನ್ ಅವರ ಈ ಕಟ್ಟಡಗಳಿಗೆ ಬೆಂಕಿ ಹಿಡಿದ ವೇಳೆ ಮನೆಯಲ್ಲಿ  ಜೈನ್ ಅವರ ಪುತ್ರ ಜಯಪ್ರಭಾ ಮತ್ತು ಇತರರು ಪೇಟೆಗೆ ಹೋಗಿದ್ದು ಮನೆಯಲ್ಲಿ ಮಕ್ಕಳು ಟಿ.ವಿ. ನೋಡುತ್ತಿದ್ದರೆಂದೂ ಬೆಂಕಿ ಕಾಣಿಸಿದ್ದನ್ನು ಗಮನಿಸಿದ ಮಕ್ಕಳು ಹತ್ತಿರದ ಮನೆಯವರನ್ನು  ಕೂಗಿ ಕರೆದರೆಂದೂ ತಿಳಿದುಬಂದಿದೆ.

ಕೂಡಲೇ  ಹತ್ತಾರು ಮನೆಯವರು ಒಟ್ಟಾಗಿ ನೀರು ಹೊತ್ತು ತಂದು ಬೆಂಕಿ ಆರಿಸಲು ಹರಸಾಹಸ ಪಡತೊಡಗಿದರು.  ಆದರೆ ಅದಾಗಲೇ ಮರದ ಸಾಮಾಗ್ರಿಗಳಿಗೆ ಹಿಡಿದ ಬೆಂಕಿಯನ್ನು  ಆರಿಸಲಾಗಲಿಲ್ಲ. ಬಳಿಕ ಅಗ್ನಿ ಶಾಮಕ ದಳದವರು ಆಗಮಿಸಿ ತುರ್ತು ಕಾರ್ಯಾಚರಣೆಗೈದರು.  ಬೆಂಕಿ ಅವಘಡಕ್ಕೆ  ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣವಾಗಿರಬಹುದೆಂದು ಅಂದಾಜಿಸಲಾಗಿದೆ. 

ನಿಖರ ಕಾರಣ ತಿಳಿದಿಲ್ಲ,  ನಷ್ಟದ ಅಂದಾಜು ಇನ್ನಷ್ಟೇ ಆಗಬೇಕಾಗಿದೆ.  ನಿಬಿಢ ಮನೆಗಳಿರುವ ಈ ಕೇರಿಯಲ್ಲಿ ಸ್ವಲ್ಪ ತಡವಾಗುತ್ತಿದ್ದರೆ ಅಪಾಯ ಸಂಭವಿಸುತ್ತಿತ್ತೆಂದು ಹತ್ತಿರದವರು ತಿಳಿಸಿದ್ದಾರೆ. 

ವಾರ್ಡ್ ಸದಸ್ಯ ಎಂ. ಬಾಹುಬಲಿ ಪ್ರಸಾದ್ ಕೂಡಲೇ ಸ್ಥಳಕ್ಕಾಗಮಿಸಿ ಸೂಕ್ತ ಕ್ರಮ ಜರಗಿಸಲು ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News