×
Ad

ಬಿಎಂಎಸ್ ದೇಶದಲ್ಲಿಯೇ ಅತೀ ದೊಡ್ಡ ಸಂಘಟನೆ : ಡಾ. ಎಂ.ಕೆ. ಪ್ರಸಾದ್

Update: 2017-01-29 22:43 IST

ಪುತ್ತೂರು , ಜ.29 : ಬಿಎಂಎಸ್ ದೇಶದಲ್ಲಿಯೇ ಅತೀ ದೊಡ್ಡ ಸಂಘಟನೆಯಾಗಿದ್ದು, ಇದೊಂದು ದೇಶಭಕ್ತರ ಸಂಘಟನೆಯಾಗಿದೆ, ಪುತ್ತೂರು ಘಟಕವು ರಾಜ್ಯದಲ್ಲಿಯೇ ಶಿಸ್ತುಬದ್ಧ ಸಂಘಟನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಬಿಎಂಎಸ್ ಅಟೋರಿಕ್ಷಾ ಚಾಲಕ ಮಾಲಕರ ಸಂಘದ ಗೌರವ ಅಧ್ಯಕ್ಷ ಡಾ. ಎಂ.ಕೆ. ಪ್ರಸಾದ್ ಹೇಳಿದರು.

ಅವರು ಪುತ್ತೂರಿನ ಪುರಭವನದಲ್ಲಿ ನಡೆದ ಬಿಎಂಎಸ್ ಅಟೋರಿಕ್ಷಾ ಚಾಲಕ ಮಾಲಕರ ಸಂಘದ 35ನೇ ವರ್ಷದ ಮಹಾಸಭೆಯಲ್ಲಿ ಮಾತನಾಡಿದರು.

ಯಾವುದೇ ಫಲಾಪೇಕ್ಷೆಯಿಲ್ಲದೆ ಸೇವಾ ಮನೋಭಾವದಿಂದ ದುಡಿಯುತ್ತಿರುವ ರಿಕ್ಷಾ ಚಾಲಕರು ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿದ್ದಾರೆ. ಇದೀಗ ಪೆಟ್ರೋಲ್ ಬೆಲೆ ಏರಿಕೆ, ಎಫ್‌ಸಿ, ಇನ್ಸೂರೆನ್ಸ್ ದರ ಏರಿಕೆಯ ಕಾರಣಗಳಿಂದ ರಿಕ್ಷಾ ಚಾಲಕ ಮಾಲಕರಿಗೆ ತೊಂದರೆಯಾಗುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರದ ವಿರುದ್ದ ಕೂಗೆದ್ದಿದೆ. ನಮ್ಮ ಕೂಗಿಗೆ ಸ್ಪಂಧನೆ ಸಿಗುವ ತನಕ ನಿರಂತರ ಕೇಂದ್ರಕ್ಕೆ ಪತ್ರ ರವಾನೆ ಮಾಡಲಾಗುವುದು ಎಂದರು.

ಸಾರಿಗೆ ಕಾನೂನು ನಿಯಮ ಪಾಲನೆಯ ವಿಚಾರದಲ್ಲಿ ರಿಕ್ಷಾ ಚಾಲಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಂಘಟನೆಯ ಮೂಲಕ ವಾಚ್ ಡಾಗ್ ಟೀಮ್ ರಚಿಸಿ ಪರಿಶೀಲನೆ ನಡೆಸುವ ಕೆಲಸವಾಗಬೇಕು. ಪುತ್ತೂರಿಗೆ ಸಿಟಿ ಬಸ್ಸು ಹಾಕಿದಲ್ಲಿ ಸಾವಿರಾರು ರಿಕ್ಷಾ ಚಾಲಕರಿಗೆ ತೊಂದರೆಯಾಗುವ ಕಾರಣ ಈ ಯೋಜನೆಯನ್ನು ಇಲಾಖೆ ಕೈಬಿಡಬೇಕು ಎಂದರು.

ಪುತ್ತೂರು ನಗರಸಭಾ ಉಪಾಧ್ಯಕ್ಷ ವಿಶ್ವನಾಥ ಗೌಡ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಬಿಎಂಎಸ್ ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ ಗೌಡ ಶುಭ ಹಾರೈಸಿದರು.

ಬಿಸಿರೋಡ್‌ನ ನ್ಯಾಯವಾದಿ ಪ್ರಸಾದ್ ಕುಮಾರ್ ದಿಕ್ಸೂಚಿ ಭಾಷಣ ಮಾಡಿದರು.

ಈ ಸಂದರ್ಭದಲ್ಲಿ ಸಂಘದ ನಿಟಕಪೂರ್ವ ಅಧ್ಯಕ್ಷ ರಂಜನ್ ಪಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಂಘದ ಎಲ್ಲಾ ಸದಸ್ಯರಿಗೆ ಉಚಿತ ಸಮವಸ್ತ್ರ ವಿತರಣೆ ಮಾಡಲಾಯಿತು. ಸಂಘದ ನೂತನ ಅಧ್ಯಕ್ಷರಾಗಿ ಭಾಸ್ಕರ ನಾಯಕ್ ಮತ್ತು ಕಾರ್ಯದರ್ಶಿಯಾಗಿ ಮಹೇಶ್ ಮಣಿಯ ಅವರನ್ನು ಘೋಷಿಸಲಾಯಿತು.

ವೇದಿಕೆಯಲ್ಲಿ ಕೊಂಕಣ್ ಗ್ಯಾಸ್‌ನ ಮಾಲಕ ಉದಯ ಭಟ್, ಟಿವಿಎಸ್ ಕಾಂಚನ ಇದರ ಮೇಲ್ವಿಚಾರಕ ಅರ್ಜುನ್, ಸಂಘದ ಮಾಜಿ ಅಧ್ಯಕ್ಷ ಹುಸೈನ್, ತಾಲೂಕಿನ ವಿವಿಧ ಘಟಕಗಳ ಅಧ್ಯಕ್ಷರು ಉಪಸ್ಥಿತರಿದ್ದರು.

ಸಂಘದ ಮಾಜಿ ಅಧ್ಯಕ್ಷ ಸುರೇಶ್ ಸುಧಾಕರ್ ಸ್ವಾಗತಿಸಿದರು. ನೂತನ ಕಾರ್ಯದರ್ಶಿ ಮಹೇಶ್ ಪ್ರಭು ಮಣಿಯ ವಂದಿಸಿದರು. ಸತೀಶ್ ಮಣಿಯ ನಿರೂಪಿಸಿದರು.

ಜಿಲ್ಲಾ ಕಾರ್ಯದರ್ಶಿ ಬಿ. ಮೋಹನ್ ಹೆಗ್ಡೆ ಕಾರ್ಮಿಕ ಗೀತೆ ಹಾಡಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News