×
Ad

ಎಸ್.ಎಂ.ಕೃಷ್ಣರ ಮಾರ್ಗದರ್ಶನ ಈ ದೇಶಕ್ಕೆ ಅಗತ್ಯ: ಪೇಜಾವರ ಶ್ರೀ

Update: 2017-01-29 23:31 IST

ಉಡುಪಿ, ಜ.29: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಯಾವುದೇ ಪಕ್ಷದಲ್ಲಿ ಬೇಕಾದರೆ ಇರಲಿ, ಅವರ ಮಾರ್ಗದರ್ಶನ ಈ ದೇಶಕ್ಕೆ ಅಗತ್ಯವಾಗಿ ಬೇಕಾಗಿದೆ ಎಂದು ಪರ್ಯಾಯ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಉಡುಪಿ ಶ್ರೀಕೃಷ್ಣಮಠದಲ್ಲಿಂದು ಎಸ್.ಎಂ.ಕೃಷ್ಣ ಅವರ ರಾಜಕೀಯ ನಿವೃತ್ತಿ ಕುರಿತು ಕೇಳಲಾದ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು.

ಇದು ರಾಜಕೀಯ ವಿಚಾರ, ನನಗೇನು ಗೊತ್ತಿಲ್ಲ. ಪಕ್ಷದವರು ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ಯಾವ ಪಕ್ಷದಲ್ಲಿರಬೇಕು ಎಂಬುದು ಅವರಿಗೆ ಬಿಟ್ಟ ವಿಚಾರ ಎಂದರು.

ಉತ್ತರ ಪ್ರದೇಶ ಚುನಾವಣೆ ಪ್ರಣಾಳಿಕೆಯಲ್ಲಿ ಬಿಜೆಪಿ ರಾಮ ಮಂದಿರ ನಿರ್ಮಾಣದ ಪ್ರಸ್ತಾಪ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಸಂವಿಧಾನದ ಚೌಕಟ್ಟಿನಲ್ಲಿ ರಾಮಮಂದಿರ ಕಟ್ಟುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ. ರಾಮಮಂದಿರ ನಿರ್ಮಾಣ ಉದ್ದೇಶವನ್ನು ಬಿಜೆಪಿ ಬಿಟ್ಟಿಲ್ಲ. ಆದರೆ ಪ್ರಕರಣ ನ್ಯಾಯಾಲಯದಲ್ಲಿರುವಾಗ ಯಾವ ಸರಕಾರಕ್ಕೂ ಮಂದಿರ ನಿರ್ಮಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

ರಾಮಮಂದಿರ ನಿರ್ಮಿಸಬೇಕೆಂಬ ಮನಸ್ಸು ಇದ್ದರೂ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಆದರೆ ಜನ ಆ ಬಗ್ಗೆ ಕೇಳುತ್ತಿರುತ್ತಾರೆ. ಅದಕ್ಕೆ ಬಿಜೆಪಿಯವರು ಪ್ರಣಾಳಿಕೆಯಲ್ಲಿ ಅದನ್ನು ಪ್ರಸ್ತಾಪಿಸಿದ್ದಾರೆ. ಇದಕ್ಕೆ ಅನುಕೂಲಕರ ಸನ್ನಿವೇಶ ಬಂದಿಲ್ಲ. ಮಂದಿರ ಇದೆ ಎಂಬ ಕುರಿತು ತೀರ್ಪು ಬಂದಿದೆ. ಆದರೆ ವಿಸ್ತಾರವಾದ ಮಂದಿರ ಕಟ್ಟುವುದಕ್ಕೆ ಸಾಧ್ಯವಿಲ್ಲ. ಇದಕ್ಕೆ ಉತ್ತರ ಕೊಡಬೇಕಾದುದು ನಾನಲ್ಲ, ಬಿಜೆಪಿಯವರು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News