ಕಂಪ್ಯೂಟರ್ ವೈರ್ ನಿಂದ ಕುತ್ತಿಗಿಗೆ ಬಿಗಿದು ಮಹಿಳಾ ಟೆಕ್ಕಿಯ ಕೊಲೆ..!
ಪುಣೆ, ಜ.30: ಮಹಿಳಾ ಎಂಜಿನಿಯರ್ ಒಬ್ಬರನ್ನು ಕುತ್ತಿಗೆಗೆ ಕಂಪ್ಯೂಟರ್ ವೈರ್ ನಿಂದ ಬಿಗಿದು ಬರ್ಬರವಾಗಿ ಕೊಲೆಗೈದ ಘಟನೆ ಪುಣೆಯ ಹಿಂಜೆವಾಡಿಯ ಐಟಿ ಪಾರ್ಕ್‌ನ ಇನ್ಫೋಸಿಸ್ ಕಚೇರಿಯಲ್ಲಿ ರವಿವಾರ ರಾತ್ರಿ ನಡೆದಿದೆ.
ಕೇರಳ ಮೂಲದ ರಸಿಲಾ ರಾಜು ಒ.ಪಿ (25) ಕೊಲೆಯಾಗಿರುವ ಮಹಿಳಾ ಎಂಜಿನಿಯರ್. ಪುಣೆಯ ಇನ್ಫೋಸಿಸ್ ಕಚೇರಿಯ ಉದ್ಯೋಗಿಯಾಗಿರುವ ಅವರು ರಸಿಲಾ ಕುರ್ಚಿಯಲ್ಲಿ ಕುಳಿತು ಕೆಲಸ ಮಾಡುತ್ತಿದ್ದ ವೇಳೆ ಅವರ ದಾಳಿ ನಡೆಸಿ ಕಂಪ್ಯೂಟರ್ ವೈರ್ ನಿಂದ ಕುತ್ತಿಗಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆಗೈಯಲಾಗಿದೆ. ಅದೇ ಸಂಸ್ಥೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ಭಾಬೆನ್ ಸೈಕಿಯಾ (26) ಎಂಬಾತನನ್ನು ಕೊಲೆ ಆರೋಪಿ ಎಂದು ಶಂಕಿಸಲಾಗಿದ್ದು, ಆತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ರಸಿಲಾ ಅವರಿಗೆ ರವಿವಾರ ವಾರದ ರಜೆ ಆಗಿದ್ದರೂ, ತಾನು ವಹಿಸಿಕೊಂಡಿದ್ದ ಪ್ರೊಜೆಕ್ಟ್ ವರ್ಕ್ಸ್‌ನ್ನು ಮುಗಿಸುವುದಕ್ಕಾಗಿ ಕಚೇರಿಗೆ ಬಂದಿದ್ದರು. ರಾತ್ರಿ ವೇಳೆ ಇನ್ಫೋಸಿಸ್ ಬೆಂಗಳೂರು ಕಚೇರಿಯ ಸೂಪರ್ ವೈಸರ್ ಒಬ್ಬರು ರಸಿಲಾ ಅವರಿಗೆ ಕರೆ ಮಾಡಿದಾಗ ಅವರು ಫೋನ್ ಎತ್ತಲಿಲ್ಲ. ಈ ಕಾರಣಕ್ಕಾಗಿ ಅವರು ಎಲ್ಲಿದ್ದಾರೆಂದು ಪತ್ತೆ ಹಚ್ಚಲು ಅವರ ಟೀಮ್ ಮ್ಯಾನೇಜರ್ ಗೆ ತಿಳಿಸಿದರು ಎನ್ನಲಾಗಿದೆ.
ರಸಿಲಾ ಸಹೋದ್ಯೋಗಿಗಳು ಅವರಿಗಾಗಿ ಶೋಧ ನಡೆಸಿದಾಗ ಇನ್ಫೋಸಿಸ್ ಕಟ್ಟಡದ 9ನೆ ಮಹಡಿಯಲ್ಲಿ ಕೊಲೆಗೈದ ಸ್ಥಿತಿಯಲ್ಲಿ ರಸಿಲಾ ಮೃತದೇಹ ಪತ್ತೆಯಾಗಿದೆ. ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.