ಮದುವೆ ಮನೆಗೆ ನುಗ್ಗಿ ವರನ ಸಹೋದರನಿಗೆ ಇರಿದ ಆರೆಸ್ಸೆಸ್ ಕಾರ್ಯಕರ್ತರು
ಕಯ್ಪಮಂಗಲಂ,ಜ.30: ಮದುವೆ ಮನೆಗೆ ನುಗ್ಗಿ ಆರೆಸ್ಸೆಸ್ ಕಾರ್ಯಕರ್ತರು ವರನ ಸಹೋದರನನ್ನು ಇರಿದು ಗಾಯಗೊಳಿಸಿದ ಘಟನೆ ಕೇರಳದ ವಯಿಯಂಬ ಮಲಯಾಟ್ಟಿಲ್ ದೇವಳದ ಸಮೀಪ ನಡೆದಿದೆ. ಆರೆಸ್ಸೆಸಿಗರ ದಾಂಧಲೆಯಿಂದ ಗಾಯಗೊಂಡಿರುವ ರಾಫಿ(29) ಎಂಬವರನ್ನು ಇಡಪ್ಪಳ್ಳಿ ಅಮೃತ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ರವಿವಾರ ಬೆಳಗ್ಗಿನ ಜಾವ ನಡೆದಿದೆ.
ರಾಫಿಯ ಸಹೋದರ ಡಿವೈಎಫ್‌ಐ ಪದಾಧಿಕಾರಿ ಶಫೀಖ್‌ನ ವಿವಾಹ ರವಿವಾರ ನಡೆಯುವುದಿತ್ತು. ಶನಿವಾರ ರಾತ್ರೆ ನಡೆದಿದ್ದ ರಸಮಂಜರಿ ಕಾರ್ಯಕ್ರಮ ಇತ್ಯಾದಿಗಳಲ್ಲಿ ಪಾಲ್ಗೊಂಡು ರವಿವಾರ ಬೆಳಗ್ಗಿನ ಜಾವ ಮದುವೆ ಮನೆಯಿಂದ ಹೊರಬಂದಾಗ ರಾಫಿಯನ್ನು ಸ್ಥಳೀಯ ನಿವಾಸಿಗಳು ಮತ್ತು ಆರೆಸ್ಸೆಸ್ ಕಾರ್ಯಕರ್ತರಾದ ಸುಮೇಶ್, ಜಿನೋಜ್, ಉಣ್ಣಿಕೃಷ್ಣನ್, ಪ್ರಶಾಂತ್, ಸಜೀವ್ ಎಂಬವರು ಇರಿದಿದ್ದಾರೆ. ಆರೋಪಿಗಳ ವಿರುದ್ಧ ಮದಿಲಗಂ ಪೊಲೀಸರು ಕೇಸು ದಾಖಲಿಸಿಕಕೊಂಡಿದ್ದಾರೆ.
ಉದ್ವಿಗ್ನ ಸ್ಥಿತಿ ನೆಲೆಸಿದ್ದರಿಂದ ಪರಿಸರದಲ್ಲಿ ಪೊಲೀಸ್ ಬಿಗು ಬಂದೋಬಸ್ತು ಏರ್ಪಡಿಸಲಾಗಿದೆ.ಈ ಪ್ರದೇಶದಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್ ಘರ್ಷಣೆ ನಡೆಸುತ್ತಿವೆ ಎಂದು ಡಿವೈಎಫ್‌ಐ ಆರೋಪಿಸಿದೆ. ಆರೆಸ್ಸೆಸ್ ಶಾಖೆ ಮತ್ತು ಆಯುಧ ತರಬೇತಿ ನೀಡಲಾಗುತ್ತಿರುವ ಮಲಯಾಟ್ಟಿಲ್ ಕಡೆಯವರು ರಾಫಿಯನ್ನು ಇರಿದಿದ್ದಾರೆಂದು ಊರುವರು ಹೇಳಿದ್ದಾರೆ. ಘಟನೆಯನ್ನು ವಿರೋಧಿಸಿ ರವಿವಾರವೇ ಈ ಪ್ರದೇಶಗಳಲ್ಲಿ ಡಿವೈಎಫ್‌ಐ ಪ್ರತಿಭಟನೆ ನಡೆಸಿದೆ. ನೂರಾರು ಮಂದಿ ಭಾಗವಹಿಸಿದ್ದರು ಎಂದು ವರದಿ ತಿಳಿಸಿದೆ.