ಈ ಫೋರ್ಡ್ ಗುಜರಾತ್ ನಲ್ಲಿ ಏನು ಮಾಡುತ್ತಿದ್ದಾರೆ?

Update: 2017-01-30 06:58 GMT

ಅಹ್ಮದಾಬಾದ್, ಜ.30: ವಿಶ್ವವಿಖ್ಯಾತ ಫೋರ್ಡ್ ಮೊಟಾರ್ ಕಂಪೆನಿಯ ಸ್ಥಾಪಕ ಹೆನ್ರಿ ಫೋರ್ಡ್ ಅವರ ಮರಿ ಮೊಮ್ಮಗ ಆಲ್ಫ್ರೆಡ್‌ ಬಿ ಫೋರ್ಡ್(ಅಂಬರಸಿಯ ದಾಸ್) ಇದೀಗ ಗುಜರಾತಿನಲ್ಲಿದ್ದಾರೆ. ಅವರೇನು ಮಾಡುತ್ತಿದ್ದಾರೆ ಗೊತ್ತೇನು ?

ಇಸ್ಕಾನ್ ಯೋಜನೆಯಾದ ಟೆಂಪಲ್ ಆಫ್ ದಿ ವೇದಿಕ್ ಪ್ಲಾನೆಟೋರಿಯಂ ಅಧ್ಯಕ್ಷರಾಗಿ ವಿಶ್ವದ ಎರಡನೆ ಅತಿ ದೊಡ್ಡ ಗೋಪುರವನ್ನು ಚೈತನ್ಯ ಮಹಾಪ್ರಭು ಜನ್ಮಸ್ಥಳ, ಪಶ್ಚಿಮ ಬಂಗಾಳದ ಮಾಯಾಪುರದಲ್ಲಿ ನಿರ್ಮಿಸಲುದ್ದೇಶಿಸಿರುವ ಅವರು ತಮ್ಮ ಯೋಜನೆಗಾಗಿ ಅಹ್ಮದಾಬಾದ್ ನಗರದಲ್ಲಿ ಫೆಬ್ರವರಿ 4 ಹಾಗೂ 5ರಂದು ದೇಣಿಗೆ ಸಂಗ್ರಹಿಸುವ ಸಲುವಾಗಿ ಇಸ್ಕಾನ್ ದೇವಳಗಳಲ್ಲಿ ಸಭೆ ನಡೆಸಲಿದ್ದಾರೆ.

ಆಲ್ಫ್ರೆಡ್ ಫೋರ್ಡ್ ಅವರು ಇಸ್ಕಾನ್ ನಿಂದ ಪ್ರಭಾವಿತರಾಗಿದ್ದಾರಲ್ಲದೆ 1974ರಲ್ಲಿ ಹವಾಯಿಯಲ್ಲಿ ಶ್ರೀಲ ಪ್ರಭುಪಾದ ಅವರಿಂದ ವೈಷ್ಣವ ದೀಕ್ಷೆ ಕೂಡ ಪಡೆದವರಾಗಿದ್ದಾರೆ.

ಸುಮಾರು 150 ಗಣ್ಯ ವ್ಯಕ್ತಿಗಳು ಭಾಗವಹಿಸಲಿರುವ ಸಭೆಯೊಂದರಲ್ಲಿ ಆಲ್ಫ್ರೆಡ್ ಫೋರ್ಡ್ ಅವರು ಮಾಯಾಪುರದಲ್ಲಿ ನಿರ್ಮಿಸಲುದ್ದೇಶಿಸಿರುವ ದೇವಳದ ಬಗ್ಗೆ ಮಾಹಿತಿ ನೀಡಲಿದ್ದಾರೆ ಹಾಗೂ ಭಕ್ತಾದಿಗಳನ್ನು ಸಂದರ್ಶಿಸಲಿದ್ದಾರೆಂದು ಇಸ್ಕಾನ್ ಅಹಮದಾಬಾದ್ ಇಲ್ಲಿನ ಉಪಾಧ್ಯಕ್ಷ ಕಲಾನಾಥ್ ಚೈತನ್ಯ ದಾಸ್ ಹೇಳಿದ್ದಾರೆ.

ಪ್ರಸ್ತಾವಿತ ದೇಗುಲದ ನಿರ್ಮಾಣ ವೆಚ್ಚ ರೂ 500 ಕೋಟಿಯಿಂದ ರೂ 700 ಕೋಟಿಯಷ್ಟಾಗಲಿದ್ದು ಅದರ ಗೋಪುರ ಇಸ್ತಾಂಬುಲ್ ನಗರದಲ್ಲಿರುವ ಹಗಿಯ ಸೋಫಿಯಕ್ಕಿಂತಲೂ ಎತ್ತರವಿರುವುದು.

ಇಸ್ಕಾನ್ ಮುಖ್ಯ ಕಾರ್ಯಾಲಯ ಮಾಯಾಪುರದಲ್ಲಿದ್ದು ಅಲ್ಲಿ ನಿರ್ಮಾಣವಾಗಲಿರುವ ದೇವಳವೈದಿಕ ಜೀವನದ ಮಹತ್ವವನ್ನು ಬಿಂಬಿಸುವುದಲ್ಲದೆಅದರೊಳಗೆ ವಿಶ್ವದ ಮಾದರಿಯೊಂದನ್ನು ಶ್ರೀಮದ್ ಭಾಗ್ವತ್ ನಲ್ಲಿ ವಿವರಿಸಿದಂತೆ ನಿರ್ಮಿಸಲಾಗುವುದು. ದೇವಳದ ಗೋಪುರ 113 ಮೀಟರ್ ಎತ್ತರವಿದ್ದರೆ ಅದು ವ್ಯಾಟಿಕನ್ ನಲ್ಲಿರುವ ಸೈಂಟ್ ಪೀಟರ್ಸ್ ಬ್ಯಾಸಿಲಿಕಾ (138 ಮೀಟರ್) ನಂತರದಲ್ಲಿ ಎರಡನೇ ಸ್ಥಾನ ಹೊಂದುವುದು. ಮಾಯಾ ಪುರ ಸಂಕೀರ್ಣ 350 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ.

ಶನಿವಾರವಲ್ಲಭ್ ವಿದ್ಯಾನಗರಕ್ಕೆ ಭೇಟಿ ನೀಡಿದ ಅವರು ಅಹಮದಾಬಾದ್ ನಗರಕ್ಕೆ ಭೇಟಿ ನೀಡುವ ಮೊದಲು ವಡೋದರ ಹಾಗೂ ಸೂರತ್ ಸಂದರ್ಶಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News