×
Ad

​ ಮಕ್ಕಳಿಗೆ ನೀಡುವ 'ಎಂಆರ್' ಲಸಿಕೆಯಿಂದ ಅಡ್ಡಪರಿಣಾಮವಿಲ್ಲ: ಡಾ. ದೀಪಾ ಪ್ರಭು ಸ್ಪಷ್ಟಣೆ

Update: 2017-01-30 13:33 IST

ಬಂಟ್ವಾಳ, ಜ.30: ದಡಾರ ಮತ್ತು ರುಬೆಲ್ಲಾ ಕಾಯಿಲೆಗಳಿಂದ ರಕ್ಷಣೆ ನೀಡುವ ನಿಟ್ಟಿನಲ್ಲಿ ಮಕ್ಕಳಿಗೆ ನೀಡುವ ದಡಾರ-ರುಬೆಲ್ಲಾ (ಎಂಆರ್) ಲಸಿಕೆಯಿಂದ ಯಾವುದೇ ಅಡ್ಡಪರಿಣಾಮ ಉಂಟಾಗುವುದಿಲ್ಲ ಎಂದು ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು ಸ್ಪಷ್ಟಪಡಿಸಿದ್ದಾರೆ.

ಎಂಆರ್ ಲಸಿಕೆಯ ಬಗ್ಗೆ ಬಂಟ್ವಾಳ ತಾಲೂಕಿನ ಕೆಲವೆಡೆ ಪೋಷಕರಲ್ಲಿ ಉಂಟಾದ ಗೊಂದಲದ ಹಿನ್ನೆಲೆಯಲ್ಲಿ ತನ್ನನ್ನು ಮೊಬೈಲ್ ಫೋನ್ ಮೂಲಕ ಸಂಪರ್ಕಿಸಿದ ಪತ್ರಿಕಾ ಸಿಬ್ಬಂದಿಯೊಂದಿಗೆ ಮಾತನಾಡಿದ ಅವರು, ಮಾರಣಾಂತಿಕ ಕಾಯಿಲೆಯಾಗಿರುವ ದಡಾರವನ್ನು ನಿಯಂತ್ರಿಸಲು 9 ತಿಂಗಳಿಂದ 15 ವರ್ಷದೊಳಗಿನ ಎಲ್ಲ ಮಕ್ಕಳಿಗೆ ದಡಾರ-ರುಬೆಲ್ಲಾ (ಎಂಆರ್) ಲಸಿಕೆಯನ್ನು ನೀಡುವ ಅಭಿಯಾನವನ್ನು ಸರಕಾರ ಹಮ್ಮಿಕೊಂಡಿದೆ.

ಅಭಿಯಾನದ ಪ್ರಯುಕ್ತ ಎಲ್ಲ ಶಾಲೆ, ಅಂಗನವಾಡಿ ಕೇಂದ್ರಗಳಲ್ಲಿ ಮತ್ತು ಸರಕಾರಿ ಆಸ್ಪತ್ರೆಗಳಲ್ಲಿ ಫೆಬ್ರವರಿ 7ರಿಂದ 28ರ ವರೆಗೆ ಲಸಿಕೆ ನೀಡುವ ಕಾರ್ಯ ನಡೆಯಲಿದೆ. ಲಸಿಕೆಯನ್ನು ಇಂಜೆಕ್ಷನ್ ಮೂಲಕ ಮಕ್ಕಳಿಗೆ ನೀಡಲಾಗುವುದು ಎಂದು ಅವರು ಹೇಳಿದರು. ಮೊದಲ 10 ದಿನ ಎಲ್ಲ ಶಾಲೆ, ಅಂಗನವಾಡಿಗಳಲ್ಲಿ ಮಕ್ಕಳಿಗೆ ಲಸಿಕೆ ನೀಡಿದರೆ, ಉಳಿದ 10 ದಿವಸದಲ್ಲಿ ಶಾಲೆಗೆ ಬಾರದ ಮನೆಯಲ್ಲಿರುವ ಚಿಕ್ಕ ಮಕ್ಕಳಿಗೆ ಸ್ಥಳೀಯ ಆರೋಗ್ಯ ಕಾರ್ಯಕರ್ತರ ನೆರವಿನೊಂದಿಗೆ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು, ಶುಶ್ರೂಕಿಯರು ಮನೆ ಮನೆಗೆ ತೆರಳಿ ಲಸಿಕೆ ನೀಡಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ದಡಾರ ಎಂಬುದು ಮಾರಣಾಂತಿಕ ಕಾಯಿಲೆಯಾಗಿದ್ದು, ಕೆಮ್ಮು ಮತ್ತು ಸೀನುವುದರ ಮೂಲಕ ಇತರರಿಗೆ ಹರಡುತ್ತದೆ. ತುರಿಕೆ, ವಿಪರೀತ ಜ್ವರ, ಕೆಮ್ಮು, ನೆಗಡಿ ಮತ್ತು ಕೆಂಗಣ್ಣು ದಡಾರ ಕಾಯಿಲೆಯ ಮುಖ್ಯ ಲಕ್ಷಣವಾಗಿದೆ. ರುಬೆಲ್ಲಾ ರೋಗವು ಗರ್ಭಿಣಿ ಸ್ತ್ರೀಯರಲ್ಲಿ ಕಾಣಿಸಿಕೊಂಡಾಗ ಹುಟ್ಟುವ ಮಕ್ಕಳಲ್ಲಿ ಜನ್ಮತಃ ಗ್ಲುಕೋಮಾ, ಕಣ್ಣಿನಪೊರೆ, ಕಿವುಡುತನ, ಮೆದಳು ಜ್ವರ, ಮಾನಸಿಕ ಅಸ್ವಸ್ಥತೆ, ಬುದ್ಧಿಮಾಂದ್ಯತೆ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುತ್ತದೆ. ಅಲ್ಲದೆ ರುಬೆಲ್ಲಾ ವೈರಸ್ ಗರ್ಭಪಾತಕ್ಕೂ ಸಹ ಕಾರಣವಾಗಬಹುದು ಎಂದು ತಿಳಿಸಿದ ಅವರು, ದೇಶದಲ್ಲಿ ಈ ಎರಡು ಕಾಯಿಲೆಗಳ ಪೀಡಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು ಈ ಕಾಯಿಲೆಗಳನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ಸರಕಾರ ಈ ಅಭಿಯಾನವನ್ನು ಹಮ್ಮಿಕೊಂಡಿದೆ.

2020ರಲ್ಲಿ ಭಾರತವನ್ನು ದಡಾರ-ರುಬೆಲ್ಲಾ ಮುಕ್ತ ದೇಶವನ್ನಾಗಿ ಘೋಷಿಸುವ ಗುರಿಯನ್ನು ಹೊಂದಲಾಗಿದೆ ಎಂದರು. ಎಂಆರ್ ಲಸಿಕೆ ನೀಡುವುದರಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ಆದರೆ ಸಾಮಾನ್ಯವಾಗಿ ಕೆಲವು ಮಕ್ಕಳಿಗೆ ಯಾವುದೇ ಲಸಿಕೆ ನೀಡಿದರೂ ಜ್ವರ ಕಾಣಿಸಿಕೊಳ್ಳುತ್ತದೆ. ಅಂಥಹ ಮಕ್ಕಳಿಗೆ ಎಂಆರ್ ಲಸಿಕೆ ನೀಡಿದ ಬಳಿಕ ಸ್ಪಲ್ಪ ಜ್ವರ ಕಾಣಿಸಬಹುದು. ಶಾಲೆ, ಅಂಗನವಾಡಿಯಲ್ಲಿ ಮಕ್ಕಳಿಗೆ ಲಸಿಕೆ ನೀಡುವ ಸಂದರ್ಭದಲ್ಲಿ ಪ್ರತೀ ಮಕ್ಕಳಿಗೆ ಜ್ವರ ಮಾತ್ರೆಯನ್ನು ಕೂಡಾ ವಿತರಿಸಲಾಗುವುದು. ಲಸಿಕೆ ಪಡೆದ ಬಳಿಕ ಜ್ವರ ಕಾಣಿಸಿಕೊಂಡ ಮಕ್ಕಳಿಗೆ ಆ ಮಾತ್ರೆಯನ್ನು ನೀಡಬಹುದಾಗಿದೆ ಎಂದು ಹೇಳಿದ ಅವರು ಲಸಿಕೆ ಹಾಗೂ ಅಭಿಯಾನದ ಬಗ್ಗೆ ಯಾವುದೇ ಸಂದೇಶವಿದ್ದರೆ ಸ್ಥಳೀಯ ಆರೋಗ್ಯ ಕಾರ್ಯಕರ್ತರು ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಸಂದೇಶ ಬಗೆಹರಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.

ಈ ಹಿಂದೆ ಎಂಆರ್ ಲಸಿಕೆ ನೀಡಿದ್ದರು ಸಹ ಅಭಿಯಾನದಲ್ಲಿ ಎಂಆರ್ ಲಸಿಕೆಯನ್ನು ಪಡೆಯಬಹುದಾಗಿದೆ. ಕೆಲವು ಖಾಸಗಿ ಶಾಲೆಗಳಲ್ಲಿ ಲಸಿಕೆ ನೀಡಲು ಅನುಮತಿಗಾಗಿ ಫೋಷಕರ ಸಹಿಗಾಗಿ ಮಕ್ಕಳಿಗೆ ಫಾರಂಗಳನ್ನು ವಿತರಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದು ಲಸಿಕೆ ನೀಡಿದ ಬಳಿಕ ಯಾವುದೇ ಅಡ್ಡ ಪರಿಣಾಮ ಉಂಟಾದರೆ ಹೆತ್ತವರು ಶಾಲೆಗೆ ಬಂದು ಜಗಳ ಮಾಡುವುದು ಬೇಡ ಎಂಬ ಉದ್ದೇಶದಿದ ಶಾಲಾ ಆಡಳಿತ ಮಂಡಳಿಯ ನಿರ್ಧಾರವಾಗಿದೆ. ಅದಕ್ಕೂ ಇಲಾಖೆಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News