ಕ್ಯೂಬೆಕ್ ಸಿಟಿ ಮಸೀದಿಯಲ್ಲಿ ಗುಂಡು ಹಾರಾಟ : ಮುಸ್ಲಿಮರ ಮೇಲಿನ ಭಯೋತ್ಪಾದಕ ದಾಳಿ - ಕೆನಡ ಪ್ರಧಾನಿ

Update: 2017-01-30 10:16 GMT

ಒಟ್ಟಾವ (ಕೆನಡ), ಜ. 30: ಕ್ಯೂಬೆಕ್ ಮಸೀದಿಯಲ್ಲಿ ರವಿವಾರ ರಾತ್ರಿ ಪ್ರಾರ್ಥನೆಯ ವೇಳೆ ನಡೆದ ಗುಂಡಿನ ದಾಳಿ ‘ಮುಸ್ಲಿಮರ ಮೇಲೆ ನಡೆದ ಭಯೋತ್ಪಾದಕ ದಾಳಿ’ಯಾಗಿದೆ ಎಂದು ಕೆನಡದ ಪ್ರಧಾನಿ ಜಸ್ಟಿನ್ ಟ್ರೂಡೊ ಹೇಳಿದ್ದಾರೆ.

‘‘ಆರಾಧನಾ ಮತ್ತು ನಿರಾಶ್ರಿತ ಕೇಂದ್ರದಲ್ಲಿ ಮುಸ್ಲಿಮರ ಮೇಲೆ ನಡೆದ ಈ ಭಯೋತ್ಪಾದಕ ದಾಳಿಯನ್ನು ನಾವು ಖಂಡಿಸುತ್ತೇವೆ’’ ಎಂದು ಟ್ರೂಡೊ ಹೇಳಿಕೆಯೊಂದರಲ್ಲಿ ಹೇಳಿದ್ದಾರೆ.

ಕ್ಯೂಬೆಕ್ ನಗರದ ಮಸೀದಿಯಲ್ಲಿ ಬಂದೂಕುಧಾರಿಗಳು ಗುಂಡು ಹಾರಿಸಿದಾಗ ಐವರು ಮೃತಪಟ್ಟಿದ್ದಾರೆ ಎಂದು ಮಸೀದಿಯ ಅಧ್ಯಕ್ಷರು ರವಿವಾರ ಸುದ್ದಿಗಾರರಿಗೆ ತಿಳಿಸಿದರು.

ಕ್ಯೂಬೆಕ್ ಸಿಟಿ ಇಸ್ಲಾಮಿಕ್ ಕಲ್ಚರಲ್ ಸೆಂಟರ್‌ನಲ್ಲಿದ್ದ ಸುಮಾರು 40 ಮಂದಿಯ ಮೇಲೆ ಮೂವರು ಬಂದೂಕುಧಾರಿಗಳು ಗುಂಡು ಹಾರಿಸಿದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ‘ರಾಯ್ಟರ್ಸ್’ಗೆ ತಿಳಿಸಿದರು.

‘‘ಇದು ಇಲ್ಲಿ ಯಾಕೆ ನಡೆಯುತ್ತಿದೆ? ಇದು ಅನಾಗರಿಕ ಕೃತ್ಯ’’ ಎಂದು ಮಸೀದಿಯ ಅಧ್ಯಕ್ಷ ಮುಹಮ್ಮದ್ ಯಾಂಗುಯಿ ಹೇಳೀದರು.

ಹೆಚ್ಚಿನ ಪ್ರಮಾಣದಲ್ಲಿ ಸಾವುಗಳು ಸಂಭವಿಸಿವೆ ಎಂದು ಕ್ಯೂಬೆಕ್ ಪೊಲೀಸರು ತಿಳಿಸಿದರು. ಆದರೆ, ಸಾವಿನ ಸಂಖ್ಯೆಯನ್ನು ಖಚಿತಪಡಿಸಲು ನಿರಾಕರಿಸಿದರು.

ಘಟನೆಗೆ ಸಂಬಂಧಿಸಿ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ, ಆದರೆ ಅವರ ಬಗ್ಗೆ ಹೆಚ್ಚಿನ ವಿವರಗಳು ತಕ್ಷಣಕ್ಕೆ ಲಭಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News