ವಿನೋದ್ ರಾಯ್ ಬಿಸಿಸಿಐಗೆ ಹೊಸ ಬಾಸ್
ಹೊಸದಿಲ್ಲಿ, ಜ.30: ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆಗಳಲ್ಲಿ ಒಂದಾಗಿರುವ ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿಗೆ ಕೊನೆಗೂ ಸುಪ್ರೀಂ ಕೋರ್ಟ್ ಆಡಳಿತ ಸಮಿತಿಯನ್ನು ರಚಿಸಿದ್ದು, ಮಾಜಿ ಸಿಎಜಿ ವಿನೋದ್ ರಾಯ್ ಅವರು ಬಿಸಿಸಿಐ ಮುಖ್ಯಸ್ಥರಾಗಿದ್ದಾರೆ.
ಇತಿಹಾಸಕಾರ ರಾಮಚಂದ್ರ ಗುಹಾ, ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಡಯನಾ ಎಡುಲ್ಸಿ, ಐಡಿಎಫ್ ಬ್ಯಾಂಕ್‌ನ ಆಡಳಿತ ನಿರ್ದೆಶಕ ವಿಕ್ರಮ್ ಲಿಮಯೆ ಬಿಸಿಸಿಐನ ಆಡಳಿತ ಸಮಿತಿಯ ನೂತನ ಸದಸ್ಯರು.
ಬಿಸಿಸಿಐಗೆ ಚುನಾವಣೆ ನಡೆಯುವ ತನಕ ರಾಯ್ ನೇತೃತ್ವದ ಆಡಳಿತ ಸಮಿತಿ ಅಧಿಕಾರದಲ್ಲಿರುತ್ತದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಇದೇ ವೇಳೆ ಬಿಸಿಸಿಐನ ಆಡಳಿತ ಸಮಿತಿಗೆ ಕ್ರೀಡಾ ಸಚಿವಾಲಯದ ಕಾರ್ಯದರ್ಶಿಯನ್ನು ನೇಮಕ ಮಾಡುವಂತೆ ಕೇಂದ್ರ ಸರಕಾರ ಪರ ಅಟಾರ್ನಿ ಜನರಲ್ ಮಾಡಿದ್ದ ಮನವಿಯನ್ನು ತಿರಸ್ಕರಿಸಿದೆ.
ಬಿಸಿಸಿಐ ಜಂಟಿ ಕಾರ್ಯದರ್ಶಿ ಅಮಿತ್ ಚೌದರಿ ಅವರು ಐಸಿಸಿ ಸಭೆಯಲ್ಲಿ ಬಿಸಿಸಿಐಯನ್ನು ಪ್ರತಿನಿಧಿಸಲಿದ್ದಾರೆ. ಐಸಿಸಿ ಸಭೆ ಮುಂದಿನ ಫೆಬ್ರವರಿ ಮೊದಲ ವಾರ ನಡೆಯಲಿದೆ.
ಇದಕ್ಕೂ ಮೊದಲು ನ್ಯಾಯಾಲಯಾವು ಆಮಿಕಸ್ ಕ್ಸೂರಿಗಳಾದ ಅನಿಲ್ ದಿವಾನ್ ಮತ್ತು ಗೋಪಾಲ್ ಸುಬ್ರಹ್ಮಣ್ಯಂ ಮುಚ್ಚಿದ ಲಕೋಟೆಯಲ್ಲಿ ಬಿಸಿಸಿಐ ಆಡಳಿತ ಸಮಿತಿಗೆ ನೇಮಕ ಮಾಡಲು ನ್ಯಾಯಾಲಯಕ್ಕೆ ಸಲ್ಲಿಸಿದ್ದ 9 ಮಂದಿಯ ಹೆಸರನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಈ ಪಟ್ಟಿಯಲ್ಲಿರುವ ಕೆಲವು ಮಂದಿಯ ವಯಸ್ಸು 70 ವರ್ಷ ದಾಟಿದ್ದರಿಂದ ಈ ಪಟ್ಟಿಯನ್ನು ನ್ಯಾಯಾಲಯ ಪರಿಗಣಿಸಲಿಲ್ಲ.
ಇದೆ ವೇಳೆ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ಎ.ಎಂ.ಖಾನ್ವಿಲ್ಕರ್ ಮತ್ತು ಡಿ.ವೈ ಚಂದ್ರ ಚೂಡ ಅವರನ್ನೊಳಗೊಂಡ ನ್ಯಾಯಪೀಠವು ಬಿಸಿಸಿಐನ ಆಡಳಿತ ಸಮಿತಿಯಲ್ಲಿ ಮುಂದುವರಿಯಲು ಅರ್ಹತೆ ಇರುವ ಮೂವರ ಹೆಸರನ್ನು ಸೂಚಿಸುವಂತೆ ಬಿಸಿಸಿಐಗೆ ಸೂಚಿಸಿದೆ.
ಸುಪ್ರೀಂ ಕೋರ್ಟ್ ಈ ವರ್ಷದ ಆರಂಭದಲ್ಲಿ ನ್ಯಾಯಾಲಯದ ಆದೇಶವನ್ನು ಪಾಲಿಸದ ಕಾರಣಕ್ಕಾಗಿ ಬಿಸಿಸಿಐ ಅಧ್ಯಕ್ಷರಾದ ಅನುರಾಗ್ ಠಾಕೂರ್ ಮತ್ತು ಕಾರ್ಯದರ್ಶಿ ಅಜಯ್ ಶಿರ್ಕೆ ಅವರನ್ನು ಹುದ್ದೆಯಿಂದ ವಜಾಗೊಳಿಸಿತ್ತು