ಪ್ರದರ್ಶನ ನೀಡುತ್ತಿರುವಾಗಲೇ ಕುಸಿದು ಬಿದ್ದು ಭರತನಾಟ್ಯ ಕಲಾವಿದ ಸಾವು
ಕೊಚ್ಚಿ,ಜ.30:ಗುರುವಿನೊಂದಿಗೆ ವೇದಿಕೆಯಲ್ಲಿ ಭರತನಾಟ್ಯ ಪ್ರದರ್ಶಿಸುತ್ತಿದ್ದ ನಾಟ್ಯಪಟುವೊಬ್ಬರು ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಕೇರಳ ಪರವೂರ್ ವಕ್ಕೇಕ್ಕರ ಕಟ್ಟತುರುತ್ ಭದ್ರಕಾಳಿ ದೇವಳದ ಜಾತ್ರೆವೇಳೆ ಈ ಘಟನೆ ನಡೆದಿದೆ. ಸ್ಥಳೀಯ ಪ್ರಸಿದ್ಧ ನೃತ್ಯಪಟು ಓಮನಕುಟ್ಟನ್ ಮೃತಪಟ್ಟ ಭರತನಾಟ್ಯಪಟು.
ಕಳೆದ ದಿವಸ ರಾತ್ರಿ ತನ್ನ ಗುರು ಶಿವನ್ ಮಾಲ್ಯಂಕರರೊಂದಿಗೆ ಓಮನಕುಟ್ಟನ್ ನೃತ್ಯ ಪ್ರದರ್ಶಿಸುತ್ತಿರುವಾಗ ಕುಸಿದು ಬಿದ್ದಿದ್ದರು. ಪ್ರೇಕ್ಷಕರು ಭರತನಾಟ್ಯಪಟುಕುಸಿದು ಬಿದ್ದಿರುವುದು ನೃತ್ಯದ ಒಂದು ಭಾಗವೆಂದೇ ಭಾವಿಸಿದ್ದರು.
ಆದರೆ ಓಮನಕುಟ್ಟನ್ ಕುಸಿದು ಬಿದ್ದೊಡನೆ ಗುರು ಶಿವನ್ ಅವರು ಪರದೆ ಕೆಳಗಿಳಿಸಲು ಸೂಚಿಸಿ ನೃತ್ಯವನ್ನು ಅರ್ಧಕ್ಕೆ ಮೊಟಕುಗೊಳಿಸಿದರು. ಓಮನಕುಟ್ಟನ್‌ರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರು ಅಲ್ಲಿ ಮೃತಪಟ್ಟರು. ಓಮನಕುಟ್ಟನ್ ಸ್ಥಳೀಯವಾಗಿ ಪ್ರಸಿದ್ಧ ಭರತನಾಟ್ಯಪಟು ಆಗಿದ್ದಾರೆ. ರಾಷ್ಟ್ರೀಯ ಸಾಕ್ಷರತಾ ಯಜ್ಞದ ಅಂಗವಾಗಿ ಬಿಹಾರದಲ್ಲಿ 400 ನೃತ್ಯಕಾರ್ಯಕ್ರಮಗಳನ್ನು ಇವರು ಕೊಡುವ ಮೂಲಕ ಖ್ಯಾತಿ ಗಳಿಸಿದ್ದರು ಎಂದು ವರದಿ ತಿಳಿಸಿದೆ.