ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿ ಪ್ರಕಟ

Update: 2017-01-30 12:41 GMT

ಮಂಗಳೂರು, ಜ.30: ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯು 2016ನೆ ಸಾಲಿನ ಗೌರವ ಪ್ರಶಸ್ತಿ ಪುರಸ್ಕೃತರು ಹಾಗೂ ಪುಸ್ತಕ ಬಹುಮಾನ ವಿಜೇತರ ಪಟ್ಟಿ ಬಿಡುಗಡೆಗೊಂಡಿದೆ.

ಸೋಮವಾರ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಕಾಡಮಿಯ ಅಧ್ಯಕ್ಷೆ ಎಂ.ಜಾನಕಿ ಬ್ರಹ್ಮಾವರ, ಗೌರವ ಪ್ರಶಸ್ತಿಗೆ ಮುದ್ದು ಮೂಡುಬೆಳ್ಳೆ (ತುಳು ಸಾಹಿತ್ಯ), ಕೆ. ಆನಂದ್ ಶೆಟ್ಟಿ (ತುಳು ನಾಟಕ), ತಮ್ಮ ಲಕ್ಷ್ಮಣ (ತುಳು ಸಿನೆಮಾ) ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 50,000 ರೂ. ನಗದು, ಸ್ಮರಣಿಕೆ, ಪ್ರಶಸ್ತಿ ಪತ್ರ ಒಳಗೊಂಡಿದೆ ಎಂದು ಹೇಳಿದರು.

 ಅಕಾಡಮಿಯ 2016ರ ಪುಸ್ತಕ ಬಹುಮಾನಕ್ಕೆ ಪಾಲ್ತಾಡಿ ರಾಮಕೃಷ್ಣ ಆಚಾರ್ (ತುಳು ಅಧ್ಯಯನ ), ಯೋಗೀಶ್ ರಾವ್ ಚಿಗುರುಪಾದೆ (ತುಳು ಕವನ), ಶಶಿರಾಜ್ ಕಾವೂರು (ತುಳು ನಾಟಕ) ಇವರನ್ನು ಆಯ್ಕೆ ಮಾಡಲಾಗಿದೆ. ಪುಸ್ತಕ ಬಹುಮಾನವು 25,000 ರೂ. ನಗದು, ಸ್ಮರಣಿಕೆ, ಪ್ರಶಸ್ತಿ ಪತ್ರವನ್ನು ಹೊಂದಿದೆ ಎಂದು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಅಕಾಡಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ, ಮೋಹನ್ ಕೊಪ್ಪಳ, ಕೆ.ಟಿ. ವಿಶ್ವನಾಥ, ಡಿ.ಎಂ. ಕುಲಾಲ್ ಉಪಸ್ಥಿತರಿದ್ದರು.
 

ಪ್ರಶಸ್ತಿ ಪುರಸೃತರ ಪರಿಚಯ : 

ಮುದ್ದು ಮೂಡುಬೆಳ್ಳೆ:

ಉಡುಪಿ ಜಿಲ್ಲೆಯ ಮೂಡುಬೆಳ್ಳೆಯ ಕೃಷಿಕ ಕುಟುಂಬದಲ್ಲಿ ಜನಿಸಿದ ಇವರು ಮಂಗಳೂರು ಆಕಾಶವಾಣಿಯ ಹಿರಿಯ ಕಾರ್ಯಕ್ರಮ ನಿರೂಪಕರಾಗಿ ಸೇವೆ ಸಲ್ಲಿಸಿದ್ದರು. ಕನ್ನಡ, ತುಳು, ಕೊಂಕಣಿ, ಇಂಗ್ಲಿಷ್ ಭಾಷೆಯಲ್ಲಿ ಸಾಹಿತ್ಯ ರಚನೆ ಮಾಡಿದ್ದಾರೆ.

ಕೆ. ಆನಂದಶೆಟ್ಟಿ :

ಶಾಲಾ ದಿನಗಳಲ್ಲೇ ತುಳುರಂಗ ಭೂಮಿ ಪ್ರವೇಶಿಸಿದ ಇವರು ನೂರಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಬಹುತೇಕ ನಾಟಕಗಳು ಸಾವಿರಾರು ಪ್ರದರ್ಶನ ಕಂಡಿವೆ. ಸುಮಾರು 50 ನಾಟಕಗಳನ್ನು ರಚಿಸಿದ್ದಾರೆ.

ತಮ್ಮ ಲಕ್ಷ್ಮಣ:

ಮುಲ್ಕಿಯ ಕೋಟೆಕೇರಿಯಲ್ಲಿ ಜನಿಸಿದ ಇವರು ಬಾಲ್ಯದಲ್ಲೇ ನಾಟಕದ ಆಸಕ್ತಿ ಬೆಳೆಸಿದ್ದ ಇವರು ಇತ್ತೀಚೆಗೆ ತುಳು ಸಿನೆಮಾ ಲೋಕದ ಸಮಗ್ರ ಮಾಹಿತಿಯ ಕೃತಿ ರಚಿಸಿ ಗಮನ ಸೆಳೆದಿದ್ದಾರೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯಲ್ಲದೆ, ಕರ್ನಾಟಕ ಚಲನಚಿತ್ರ ಅಕಾಡಮಿಯ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News