×
Ad

ಬೈಕಂಪಾಡಿ: ಹದಗೆಟ್ಟ ರಸ್ತೆಯ ವಿರುದ್ಧ ಧ್ವನಿ ಎತ್ತಿದ ನಾಗರಿಕರು

Update: 2017-01-30 18:39 IST

ಮಂಗಳೂರು, ಜ.30: ಬೈಕಂಪಾಡಿ ಕೈಗಾರಿಕಾ ವಲಯ ವ್ಯಾಪ್ತಿಯ ಅಂಗರಗುಂಡಿ ಎಂಬಲ್ಲಿ ಹದಗೆಟ್ಟ ಸುಮಾರು 1 ಕಿ.ಮೀ.ರಸ್ತೆಯನ್ನು ದುರಸ್ತಿಪಡಿಸುವಂತೆ ಆಗ್ರಹಿಸಿದ ನಾಗರಿಕರ ಜೊತೆ ಉಡಾಫೆ ವರ್ತನೆ ತೋರಿದ ಕೆಐಎಡಿಬಿ ಅಭಿವೃದ್ಧಿ ಅಧಿಕಾರಿಯು ಸ್ಥಳೀಯ ಶಾಸಕರ ಮಧ್ಯಪ್ರವೇಶದ ಬಳಿಕ ಕ್ಷಮೆಯಾಚಿಸಿದ ಘಟನೆ ಸೋಮವಾರ ನಡೆದಿದೆ.

ಬೈಕಂಪಾಡಿ-ಅಂಗರಗುಂಡಿಯ ರಸ್ತೆಯ ಅಲ್ಲಲ್ಲಿ ಹೊಂಡ ಬಿದ್ದಿದೆ. ಇದನ್ನು ದುರಸ್ತಿಪಡಿಸುವಂತೆ ಸ್ಥಳೀಯ ನಾಗರಿಕರು ರಾಜ್ಯ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ (ಕೆಐಎಡಿಬಿ) ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ್ದರು. ಆವಾಗ ಎರಡು ವಾರದ ಸಮಯವಕಾಶ ಕೇಳಿದ್ದ ಕೆಐಡಿಬಿ ಅಧಿಕಾರಿಗಳು ಬಳಿಕ ಅದನ್ನು ಮರೆತಿದ್ದರು.

ಆ ಹಿನ್ನಲೆಯಲ್ಲಿ ಸೋಮವಾರ ಸ್ಥಳೀಯ ಪ್ರಮುಖರು ಕೆಐಡಿಬಿ ಕಚೇರಿಗೆ ಹೋಗಿ ರಸ್ತೆಯ ಬಗ್ಗೆ ಗಮನ ಸೆಳೆದಾಗ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಉಡಾಫೆಯಿಂದ ವರ್ತಿಸಿದರು ಎನ್ನಲಾಗಿದೆ. ವರ್ತನೆಯಿಂದ ರೋಸಿಹೋದ ಮುಖಂಡರು ಪ್ರತಿ ಮಾತುಗಳನ್ನಾಡಿದಾಗ ಅಧಿಕಾರಿ ಅಲ್ಲಿಂದ ಮರೆಯಾದರು. ಅಧಿಕಾರಿಯ ಈ ವರ್ತನೆಯನ್ನು ಮತ್ತಷ್ಟು ಕೆರಳಿದ ಸ್ಥಳೀಯ ಪ್ರಮುಖರು ರಿಕ್ಷಾ ಚಾಲಕ-ಮಾಲಕರು ಹಾಗು ನಾಗರಿಕರ ಜೊತೆಗೂಡಿ ಪ್ರತಿಭಟನೆ ನಡೆಸಿದರು. ಅಲ್ಲದೆ ಶಾಸಕ ಮೊಯ್ದಿನ್ ಬಾವಾ ಮತ್ತು ಕಾರ್ಪೊರೇಟರ್ ಪುರುಷೋತ್ತಮ ಚಿತ್ರಾಪುರ ಅವರ ಗಮನ ಸೆಳೆದರು ಎನ್ನಲಾಗಿದೆ.

ಆ ಬಳಿಕ ಕೆಐಎಡಿಬಿ ಅಧಿಕಾರಿ ಕ್ಷಮೆಯಾಚಿಸದ ಹೊರತು ತಾವು ಸ್ಥಳದಿಂದ ತೆರಳುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು. ಅಂತಿಮವಾಗಿ ಶಾಸಕರು ಕೆಐಡಿಬಿ ಕಚೇರಿಗೆ ಆಗಮಿಸಿ ಕಚೇರಿಯಿಂದ ಹೊರ ಹೋಗಿದ್ದ ಅಧಿಕಾರಿಯನ್ನು ಮತ್ತೆ ಕರೆಸಿ ತೀವ್ರ ತರಾಟೆಗೆ ತೆಗೆದುಕೊಂಡರು. ‘ನೀವು ಕೈಗಾರಿಕೆಗಳ ಪರ ವಾದಿಸುವ ಬದಲು ನಾಗರಿಕರ ಸಮಸ್ಯೆಗೆ ಮೊದಲು ಪರಿಹಾರ ಕಲ್ಪಿಸಿ’ ಎಂದ ಶಾಸಕ ಮೊಯ್ದಿನ್ ಬಾವಾ, ನಾಗರಿಕರೊಂದಿಗೆ ಉಡಾಫೆಯಿಂದ ವರ್ತಿಸಿದ್ದಕ್ಕೆ ಕ್ಷಮೆಯಾಚಿಸುವಂತೆ ಸೂಚಿಸಿದರು. ಅಂತಿಮವಾಗಿ ಕೆಐಡಿಬಿ ಅಧಿಕಾರಿ ಕ್ಷಮೆಯಾಚಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಕಾರ್ಪೊರೇಟರ್ ಹಾಗು ಮಾಜಿ ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ರಸ್ತೆಯ ಅಸ್ತವ್ಯವಸ್ಥೆಯ ಬಗ್ಗೆ ಗಮನ ಸೆಳೆಯಲು ಹೋದ ನಾಗರಿಕರ ಜೊತೆ ಉಡಾಫೆಯಿಂದ ವರ್ತಿಸಿದ ಬಗ್ಗೆ ಮಾಹಿತಿ ತಿಳಿದ ತಕ್ಷಣ ಕೆಐಡಿಬಿ ಕಚೇರಿಗೆ ತೆರಳಿದೆ. ವಿಷಯ ತಿಳಿದುಕೊಂಡು ಆ ಅಧಿಕಾರಿಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು. ಬಳಿಕ ಶಾಸಕರು ಆಗಮಿಸಿ ಇತರ ಅಧಿಕಾರಿಯ ಮೂಲಕ ಉಡಾಫೆಯಿಂದ ವರ್ತಿಸಿದ ಅಧಿಕಾರಿಯನ್ನು ಕರೆಸಿ ತೀವ್ರ ತರಾಟೆಗೆ ತೆಗೆದುಕೊಂಡ ಬಳಿಕ ಕ್ಷಮೆ ಯಾಚಿಸಿದರು. ಅಲ್ಲದೆ, 10 ದಿನದಲ್ಲಿ ಈ ರಸ್ತೆಯ ದುರಸ್ತಿ ಮಾಡುವ ಭರವಸೆಯನ್ನು ಶಾಸಕರು ನೀಡಿದರು’ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News