ಮಛ್ಲಿ ಹಿಮಪಾತದಿಂದ ರಕ್ಷಿಸಲ್ಪಟ್ಟಿದ್ದ ಐವರು ಯೋಧರ ಮೃತ್ಯು
ಶ್ರೀನಗರ,ಜ.30: ಜ.28ರಂದು ಜಮ್ಮು-ಕಾಶ್ಮೀರದ ಮಛ್ಲಿ ವಿಭಾಗದಲ್ಲಿ ನಿಯಂತ್ರಣ ರೇಖೆಯ ಬಳಿ ಕರ್ತವ್ಯ ನಿರತರಾಗಿದ್ದ ಸಂದರ್ಭ ಹಿಮಪಾತಕ್ಕೆ ಸಿಲುಕಿ ಇಡೀ ದಿನದ ಕಾರ್ಯಾಚರಣೆಯ ಬಳಿಕ ಹಿಮದ ರಾಶಿಯಡಿಯಿಂದ ರಕ್ಷಿಸಲ್ಪಟ್ಟು ಆಸ್ಪತ್ರೆಗೆ ದಾಖಲಿಸಲಾಗಿದ್ದ ಐವರು ಯೋಧರು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಕೊನೆಯುಸಿರೆಳೆದಿದ್ದಾರೆ ಎಂದು ಸೇನೆಯು ತಿಳಿಸಿದೆ. ವಿಶೇಷ ವೈದ್ಯಕೀಯ ಆರೈಕೆಗಾಗಿ ಈ ಯೋಧರನ್ನು ಸೋಮವಾರ ಹೆಲಿಕಾಪ್ಟರ್ನಲ್ಲಿ ಶ್ರೀನಗರಕ್ಕೆ ಕರೆತರಲಾಗಿತ್ತು. ಆದರೆ ಪ್ರತಿಕೂಲ ಹವಾಮಾನದಿಂದಾಗಿ ಈ ಕ್ರಮ ತೀರ ವಿಳಂಬವಾಗಿತ್ತು. ಈ ಯೋಧರ ಸಾವಿನೊಂದಿಗೆ ಜಮ್ಮು-ಕಾಶ್ಮೀರದಲ್ಲಿ ಒಂದು ವಾರದ ಅವಧಿಯಲ್ಲಿ ಹಿಮಪಾತಕ್ಕೆ ಬಲಿಯಾದರ ಸಂಖ್ಯೆ 20ಕ್ಕೇರಿದೆ. ಕಾಶ್ಮೀರ ಕಣಿವೆಯಲ್ಲಿ ಇಬ್ಬನಿ ಆವರಿಸಿದ್ದು, ಆಗಾಗ್ಗೆ ಹಿಮ ಸುರಿಯುತ್ತಲೇ ಇದೆ. ಮಛ್ಲಿ ಹಿಮಪಾತ ಘಟನೆಯಲ್ಲಿ ರಕ್ಷಿಸಲಾಗಿರುವ ಐವರು ಯೋಧರನ್ನು ವಿಶೇಷ ಚಿಕಿತ್ಸೆಗಾಗಿ ಶ್ರೀನಗರಕ್ಕೆ ಸಾಗಿಸುವ ನಿಟ್ಟಿನಲ್ಲಿ ಸೇನೆಯ ಪೈಲಟ್ಗಳು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ರಕ್ಷಣಾ ವಕ್ತಾರರು ಬೆಳಿಗ್ಗೆ ತಿಳಿಸಿದ್ದರು. ತನ್ಮಧ್ಯೆ ಜ.24ರಂದು ಗುರೇಜ್ ವಿಭಾಗದಲ್ಲಿ ಸಂಭವಿಸಿದ್ದ ಹಿಮಪಾತದಲ್ಲಿ ಬಲಿಯಾದ ಕರ್ನಾಟಕದ ಹಾಸನದ ಸಂದೀಪ ಕುಮಾರ್ ಶೆಟ್ಟಿ ಸೇರಿದಂತೆ 14 ಯೋಧರ ಪಾರ್ಥಿವ ಶರೀರಗಳನ್ನು ಸೋಮವಾರ ಶ್ರೀನಗರಕ್ಕೆ ತರಲಾಗಿದ್ದು, ಅಂತ್ಯಸಂಸ್ಕಾರಕ್ಕಾಗಿ ಮಂಗಳವಾರ ಅವರವರ ಊರುಗಳಿಗೆ ರವಾನಿಸಲಾಗುತ್ತದೆ ಎಂದು ಸೇನೆಯು ತಿಳಿಸಿದೆ.