ಉತ್ತಮ ದರ್ಜೆ ನೀಡಲು ಭಾರತೀಯ ಪ್ರೊಫೆಸರ್ ಮಂಚಕ್ಕೆ ಕರೆದಿದ್ದರು : ಲೇಬರ್ ಪಕ್ಷದ ಉನ್ನತ ನಾಯಕಿ ಆರೋಪ

Update: 2017-01-30 15:27 GMT

ಲಂಡನ್, ಜ. 30: 1970ರ ದಶಕದಲ್ಲಿ ಯಾರ್ಕ್ ವಿಶ್ವವಿದ್ಯಾಲಯದಲ್ಲಿ ಕಲಿಯುತ್ತಿದ್ದಾಗ, ತನ್ನೊಂದಿಗೆ ಮಲಗಿದರೆ ಉನ್ನತ ದರ್ಜೆಯನ್ನು ನೀಡುವ ಕೊಡುಗೆಯನ್ನು ತನ್ನ ಭಾರತೀಯ ಪ್ರೊಫೆಸರೊಬ್ಬರು ನೀಡಿದ್ದರು ಎಂದು ಬ್ರಿಟನ್‌ನ ರಾಜಕಾರಣಿ ಹ್ಯಾರಿಯಟ್ ಹರ್ಮನ್ ಆರೋಪಿಸಿದ್ದಾರೆ.

ಹ್ಯಾರಿಯಟ್, ಟೋನಿ ಬ್ಲೇರ್ ಮತ್ತು ಗಾರ್ಡನ್ ಬ್ರೌನ್ ಸರಕಾರಗಳಲ್ಲಿ ಮಂತ್ರಿಯಾಗಿದ್ದರು ಹಾಗೂ ಲೇಬರ್ ಪಕ್ಷದಲ್ಲಿ ಉನ್ನತ ಹುದ್ದೆಗಳನ್ನು ಹೊಂದಿದ್ದರು.
ತನ್ನ ಆತ್ಮಕತೆ ‘ಅ ವುಮನ್ಸ್ ವರ್ಕ್’ನಲ್ಲಿ 66 ವರ್ಷದ ಹ್ಯಾರಿಯಟ್ ಈ ಆರೋಪ ಮಾಡಿದ್ದಾರೆ. ಪುಸ್ತಕ ಈ ವಾರ ಪ್ರಕಟಗೊಳ್ಳಲಿದೆ.

ಈ ಆಹ್ವಾನ ನೀಡಿದವರು ಚೆನ್ನೈ ಸಂಜಾತ ಟಿ.ವಿ. ಸತ್ಯಮೂರ್ತಿ ಎಂಬ ಪ್ರೊಫೆಸರ್. ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ಕಲಿತ ಹಲವು ದೇಶಗಳಲ್ಲಿ ಕಲಿಸಿದರು ಹಾಗೂ ಅಂತಿಮವಾಗಿ ಬ್ರಿಟನ್‌ನಲ್ಲಿ ನೆಲೆಸಿದರು. ಬ್ರಿಟನ್‌ನಲ್ಲಿ ಅವರು ಯಾರ್ಕ್ ವಿಶ್ವವಿದ್ಯಾನಿಲಯದಲ್ಲಿ 30 ವರ್ಷಗಳ ಕಾಲ ಕಲಿಸಿದರು. ಅವರು 1998ರಲ್ಲಿ 68ರ ವಯಸ್ಸಿನಲ್ಲಿ ನಿಧನರಾದರು.

ಅಂದು ನೀವು ಯಾಕೆ ದೂರು ನೀಡಿಲ್ಲ ಎಂಬ ಪ್ರಶ್ನೆಗೆ, ‘‘ಯಾರೂ ನನ್ನನ್ನು ನಂಬುವುದಿಲ್ಲ, ತನ್ನ ಮೇಲಿನ ಆರೋಪವನ್ನು ಪ್ರೊಫೆಸರ್ ನಿರಾಕರಿಸುತ್ತಾರೆ ಹಾಗೂ ಎಲ್ಲರೂ ಅವರ ಪರ ವಹಿಸುತ್ತಾರೆ ಎಂದು ನಾನು ಭಾವಿಸಿದ್ದೆ’’ ಎಂದು ರವಿವಾರ ಬಿಬಿಸಿ ಟೆಲಿವಿಶನ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಹ್ಯಾರಿಯಟ್ ಹೇಳಿದರು.

ಪ್ರೊಫೆಸರ್ ಬಗ್ಗೆ ಅಸಹ್ಯಪಟ್ಟ ತಾನು, ಅವರ ಚೇಷ್ಟೆಗಳನ್ನು ನಿರಾಕರಿಸಿದೆ ಹಾಗೂ 1972ರಲ್ಲಿ ರಾಜಕೀಯಶಾಸ್ತ್ರದಲ್ಲಿ ಅತ್ಯುತ್ತಮ ದರ್ಜೆಯೊಂದಿಗೆ ಬಿಎ ಪದವಿ ಪಡೆದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News